World Post Day 2023: ಈ ದಿನಾಚರಣೆ ಹೇಗೆ ಜಾರಿಗೆ ಬಂದಿತು? ಇದರ ಹಿಂದಿನ ಉದ್ದೇಶವೇನು? ಈ ಬಗ್ಗೆ ಇಲ್ಲಿದೆ ಆಸಕ್ತಿಕರ ಹಿನ್ನೆಲೆ

World Post Day

Image Credit: Pexels

World Post Day 2023 ವಿಶ್ವ ಅಂಚೆ ದಿನವನ್ನು ಇಂದು ಅಂದರೆ ಅಕ್ಟೊಬರ್ ೯ ರಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಬಗ್ಗೆ ಕೆಲವೊಂದಿಷ್ಟು ಮಾಹಿತಿ ಇಲ್ಲಿ ತಿಳಿಯಿರಿ. “ನಂಬಿಕೆಗಾಗಿ ಒಟ್ಟಾಗಿ: ಸುರಕ್ಷಿತ ಮತ್ತು ಸಂಪರ್ಕಿತ ಭವಿಷ್ಯಕ್ಕಾಗಿ ಸಹಯೋಗ” ಈ ವರ್ಷದ ಥೀಮ್ ಆಗಿದೆ.

ಇಂದು ನಾವು ವಿಶ್ವಾದ್ಯಂತ ಹಲವು ಬಗೆಯಲ್ಲಿ ನಿರ್ದಿಷ್ಟ ಅಥವಾ ವಿಶಿಷ್ಟ ದಿನಾಚರಣೆಗಳನ್ನು ಆಚರಿಸುತ್ತೇವೆ. ಕೆಲವು ವಿಶ್ವಮಟ್ಟದಲ್ಲಿ ಆಚರಿಸಲ್ಪಟ್ಟರೆ ಇನ್ನೂ ಕೆಲವು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುತ್ತವೆ. ಒಟ್ಟಿನಲ್ಲಿ ಈ ದಿನಾಚರಣೆಗಳ ಹಿಂದೆ ಏನಾದರೂ ವಿಶೇಷತೆ ಅಥವಾ ಜಾಗೃತಿ/ಅರಿವು ಮೂಡಿಸುವಂತಹ ಕಾರಣಗಳು ಇದ್ದೇ ಇರುತ್ತವೆ ಎನ್ನಬಹುದು.

ವರ್ಲ್ಡ್ ಪೋಸ್ಟ್ ಡೇ ಅಥವಾ ವಿಶ್ವ ಅಂಚೆ ದಿನ ಎಂಬುದು ಸಹ ಪ್ರಚಲಿತದಲ್ಲಿದ್ದು ಪ್ರತಿ ವರ್ಷ ಅಕ್ಟೋಬರ್ 9 ರಂದು ಇದನ್ನು ಆಚರಿಸಲಾಗುತ್ತದೆ. ಯುನಿವರ್ಸಲ್ ಪೋಸ್ಟಲ್ ಕಾಂಗ್ರೆಸ್ ಸಂಸ್ಥಾನವು ಮೊದಲ ಬಾರಿಗೆ ಈ ದಿನವನ್ನು ಆಚರಣೆಗೆ ಸಂಬಂಧಿಸಿದಂತೆ 1969 ರಲ್ಲಿ ಜಪಾನಿನ ಟೋಕಿಯೊದಲ್ಲಿ ಇದನ್ನು ಘೋಷಿಸಿತು.

ಅಷ್ಟಕ್ಕೂ ಈ ಸಂಸ್ಥಾನವು ಇಂತಹ ಅಂಚೆ ದಿನಾಚರಣೆಯನ್ನು ಘೋಷಣೆ ಮಾಡುವುದಕ್ಕೂ ಕಾರಣವಿರಬೇಕಲ್ಲವೆ? ಹೌದು, ಖಂಡಿತ ಇದೆ, ಜಾಗತಿಕವಾಗಿದ್ದ ಯುನಿವರ್ಸಲ್ ಪೋಸ್ಟಲ್ ಯುನಿಯನ್ ಸಂಘಟನೆಯ ವಾರ್ಷಿಕ ಸಂಭ್ರಮವನ್ನು ಗುರುತಿಸಲು ಈ ಒಂದು ಉಪಕ್ರಮವನ್ನು ಜಾರಿಗೆ ತಂದಿತು. ಅಷ್ಟಕ್ಕೂ ಯುನಿವರ್ಸಲ್ ಪೋಸ್ಟಲ್ ಯುನಿಯನ್ ಸೃಷ್ಟಿಯಾಗಿದ್ದು ೧೮೭೪ ರಲ್ಲಿ.

ಅಂಚೆಗಿದೆ ವಿಶಿಷ್ಟ ಮಹತ್ವ

ಇಂದೇನೋ ಕಾಲ ಬದಲಾಗಿದೆ, ಥಟ್ ಅಂತ ಅಂಗೈನಲ್ಲೇ ಎಲ್ಲ ಸಮಾಚಾರಗಳನ್ನು, ಬಂಧು-ಮಿತ್ರರೊಂದಿಗೆ ಸಂವಹನವನ್ನು ಕ್ಷಣಗಳಲ್ಲೇ ಮಾಡಿ ಬಿಡಬಹುದು. ಆದರೆ ಹಲವಾರು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ದೂರದ ಎಲ್ಲೊ ಇರುವ ನಮ್ಮವರೊಂದಿಗೆ ಸಂವಹನ ನಡೆಸಲು ಇದ್ದ ಮಾರ್ಗ ಪೋಸ್ಟ್ ಆಗಿತ್ತು.

ಅಲ್ಲದೆ, ಎಲ್ಲ ಸಮುದಾಯಗಳನ್ನು ಯಾವುದೇ ಬೇಧ-ಭಾವಗಳಿಲ್ಲದೆ ಬೆಸೆಯುವ ಮಾರ್ಗವಾಗಿತ್ತು ಈ ಅಂಚೆ ಎಂಬ ಪ್ರಕ್ರಿಯೆ. ನಿಮಗೆ ನೆನಪಿದೆಯೇ 6-70 ರ ದಶಕಗಳಲ್ಲಿ ಗುಡ್ಡ ಗಾಡು ಗ್ರಾಮಗಳಲ್ಲಿ ನೆಲೆಸಿದವರಿಗೆ ಅಂಚೆ ಸ್ವೀಕರಿಸುವುದೆಂದರೆ ಅದೆಷ್ಟೋ ಭಾವುಕಮಯ ಪ್ರಸಂಗವಾಗಿರುತ್ತಿತ್ತು.

ಖುಶಿಯ, ದುಖದ ಯಾವುದೇ ಸಂದೇಶವಿರಲಿ ಅಂಚೆ ಮಾಮನ ಬರುವಿಕೆ ಎದೆಯಲ್ಲಿ ಝಲ್ ಎನಿಸುತ್ತಿತ್ತು. ಅಷ್ಟೊಂದು ಅವಿನಾಭಾವ ಸಂಬಂಧವನ್ನು ನಾವು ಅಂಚೆಯೊಂದಿಗೆ ಹೊಂದಿದ್ದೇವೆ. ಇತ್ತೀಚಿನ ಯುವ ಪೀಳಿಗೆಗೆ ಅಂಚೆಯ ಬಗ್ಗೆ ಅಷ್ಟೊಂದು ಬಾಂಧವ್ಯ ಉಂಟಾಗದೆ ಇರಬಹುದು, ಆದರೆ ಅಂಚೆ ಕಳುಹಿಸುವುದು, ಸ್ವೀಕರಿಸುವ ಆ ಅನುಭವಗಳ ಚೆಂದದ ನೆನಪುಗಳು 70-80-90 ರ ದಶಕದ ಜನರಿಗೆ ಈಗಲೂ ಚೆನ್ನಾಗಿ ತಿಳಿದಿರುತ್ತದೆ.

ಅದೃಷ್ಟವೆಂದರೆ ಇಂದು ಎಲ್ಲೆಡೆ ತಂತ್ರಜ್ಞಾನ ಕಾಲಿಟ್ಟರೂ, ಡಿಜಿಟಲ್ ಎಕಾನಾಮಿ ಎಂಬುದು ಪ್ರವರ್ಧಮಾನಕ್ಕೆ ಬಂದಿದ್ದರೂ ಅಂಚೆ/ಪೋಸ್ಟ್ ಕೊನೆಗೊಂಡಿಲ್ಲ, ಬದಲಾಗಿ ಅದು ಸಹ ತನ್ನನ್ನು ತಾನು ಡಿಜಿಟಲ್ ಮಾಡಿಕೊಳ್ಳುತ್ತಿದೆ.

ಅಂಚೆ ಎಂಬುದು ಕೇವಲ ಪತ್ರ/ಸಂದೇಶಗಳ ವಿನಿಮಯವಲ್ಲ, ಅದಕ್ಕೂ ಮಿಗಿಲಾದುದು, ವೈಯಕ್ತಿಕ ಹಣಕಾಸಿನ, ಆರ್ಥಿಕ ಶಿಸ್ತಿನ ಜೀವನ ಪಡೆಯುವ ಹಲವಾರು ಸೌಲಭ್ಯಗಳನ್ನು ಸಹ ಅಂಚೆ ಇಲಾಖೆ ಹೊಂದಿದೆ.

ಬ್ಯಾಂಕ್ ಗಳಂತೆಯೇ ಇಂದು ಪೋಸ್ಟ್ ಆಫೀಸ್ ಗಳಲ್ಲಿಯೂ ನಾಗರಿಕರು ಉತ್ತಮ ಆರ್ಥಿಕ ಆದಾಯ ನೀಡುವ ಹಲವರು ಉಪಯುಕ್ತ ಯೋಜನೆಗಳ ಲಾಭ ಪಡೆಯಬಹುದಾಗಿದೆ. ಸರ್ಕಾರಗಳಿಂದ ನಿರ್ವಹಿಸಲ್ಪಡುವ ಅಂಚೆ ನೀವು ಹೂಡುವ ಹಣಕ್ಕೆ ಖಚಿತ ಹಾಗೂ ಖಾತರಿ ಹೆಚ್ಚುವರಿ ಲಾಭ ನೀಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಸ್ವಲ್ಪ ಓದಿ, ಆಸಕ್ತಿಕರವಾದ ಅಂಚೆಯ ಕಿರು ಇತಿಹಾಸ

ಹಾಗೆ ನೋಡಿದರೆ ಅಂಚೆಯ ಇತಿಹಾಸ ಎಂಬುದು ಅದು ದಾಖಲಾದ ಸಮಯಕ್ಕಿಂತ ಹಿಂದಿನದು ಎನ್ನಲಾಗುತ್ತದೆ. 62 ಕ್ರಿ.ಪೂ – 14 ಕ್ರಿ.ಶ ಈ ಸಮಯದಲ್ಲಿ ಅಂದರೆ ರೋಮ್ ಸಾಮ್ರಾಜ್ಯದ ಆಗಸ್ತಸ್ ಸೀಸರ್ ಸಮಯದಲ್ಲಿ ಪ್ರಥಮವಾಗಿ ಅಂಚೆ ಸೇವೆಯನ್ನು ಸಂಘಟಿಸಲಾಗಿತ್ತು ಎನ್ನಲಾಗುತ್ತದೆ.

ಇನ್ನು, ಬ್ರಿಟಿಷ್ ಪೋಸ್ಟಲ್ ಸಂಗ್ರಹಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಕಾಟ್ಲ್ಯಾಂಡಿನ ಸಂಕ್ವಾಹರ್ ನಲ್ಲಿರುವ ಅಂಚೆ ಕಚೇರಿ ಅತಿ ಪುರಾತನದಿಂದ ಕಾರ್ಯಾಚರಣೆಯಲ್ಲಿರುವ ಅಂಚೆ ಕಚೇರಿಯಾಗಿದೆ. ಇದು 1712 ರಿಂದ ಕಾರ್ಯಾಚರಣೆಯಲ್ಲಿದೆ ಎನ್ನಲಾಗಿದೆ.

ತದನಂತರ, ಸಮಯ ಉರುಳಿದಂತೆ ಅಂಚೆ ಪ್ರಾಧನ್ಯತೆ ಪಡೆಯುತ್ತ ಬಂದಿತು ಹಾಗೂ 1874 ರಲ್ಲಿ ಸ್ವಿಟ್ಜರ್ಲ್ಯಾಂಡಿನ ರಾಜಧಾನಿ ಬರ್ನ್ ನಲ್ಲಿ ಯುನಿವರ್ಸಲ್ ಪೋಸ್ಟಲ್ ಯುನಿಯನ್ (ಯುಪಿಯು) ಅನ್ನು ಸ್ಥಾಪಿಸಲಾಯಿತು.

ಇಂದು ವಿಶ್ವ ಅಂಚೆದಿನವನ್ನು ಜಾಗತಿಕವಾಗಿ 151 ದೇಶಗಳಲ್ಲಿ ಆಚರಿಸಲಾಗುತ್ತದೆ ಹಾಗೂ ಈ ದಿನವನ್ನು ವಿಶ್ವ ಅಂಚೆದಿನವನ್ನಾಗಿ ಮೊದಲ ಬಾರಿಗೆ 1969 ರಲ್ಲಿ ಟೋಕಿಯೊದಲ್ಲಿ ನಡೆದ ಯುಪಿಯು ಕಾಂಗ್ರೆಸ್ ಸಭೆಯಲ್ಲಿ ಘೋಷಿಸಲಾಯಿತು.

ಅಂದಿನಿಂದ ಇದು ನಿರಂತರವಾಗಿ ವಿಶ್ವಾದ್ಯಂತ ಆಚರಿಸಲ್ಪಡುತ್ತಿರುವ ದಿನವಾಗಿದೆ. ಇನ್ನು, ಭಾರತವೂ ಸಹ ಈ ದಿನಕ್ಕೆ ಮಾನ್ಯತೆ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ ಒಂದು ಹೆಜ್ಜೆ ಮುಂದೆ ಇತ್ತೀದೆ ಎನ್ನಬಹುದು. ಹೌದು, ಅಕ್ಟೋಬರ್ 9 ರಿಂದ ಒಂದು ವಾರದವರೆಗೆ ಅಂದರೆ ಅಕ್ಟೋಬರ್ 15ರ ವರೆಗೆ ಭಾರತದಲ್ಲಿ ಇದನ್ನು ಅಂಚೆ ಸಪ್ತಾಹ ಎಂದು ಆಚರಿಸಲಾಗುತ್ತದೆ.

ಈ ದಿನದ ಮಹತ್ವ

ಅಂಚೆ ಕೇವಲ ಕುಟುಂಬಗಳ/ಅಥವಾ ಮಿತ್ರರ ಮಧ್ಯದ ಸಂವಹನೆಯ ಮಾಧ್ಯಮವಾಗಿ ಉಳಿದಿಲ್ಲ. ಹಿಂದಿನ ದಶಕಗಳನ್ನೆಲ್ಲ ಗಮನಿಸಿದರೆ ಜಾಗತಿಕ ಮಟ್ಟದ ಎಲ್ಲ ರಂಗಗಳಲ್ಲಿ ಅಂಚೆಯ ಮಹತ್ವ ಹಿರಿದಾಗಿದೆ. ವ್ಯಾಪಾರ/ವ್ಯವಹಾರ, ವಿಜ್ಞಾನ, ಕೈಗಾರಿಕೆ, ಹಣಕಾಸು ಹೀಗೆ ಪ್ರತಿ ರಂಗಗಳಲ್ಲೂ ಅಂಚೆ ತನ್ನ ನಿರಂತರ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಲೇ ಬಂದಿದೆ.

ತನ್ನ ವಿಸ್ತಾರವಾದ ಸೇವಾ ಬಾಹುಗಳ ಮೂಲಕ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಕೆಲ ಅಂದಾಜಿನ ಲೆಕ್ಕಾಚಾರಗಳ ಪ್ರಕಾರ ಅಂಚೆ ಸೇವೆಗಳು ಇಂದಿಗೂ ಜಗತ್ತಿನಾದ್ಯಂತ ಸುಮಾರು 1.5 ಬಿಲಿಯನ್ ಜನರಿಗೆ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ.

ಜಾಗತಿಕವಾಗಿ 5.3 ಮಿಲಿಯನ್ ಸಿಬ್ಬಂದಿ ಆರು ಲಕ್ಷಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿರುವ ಅಂಚೆ ಹಲವು ದೇಶಗಳ ಸರ್ಕಾರಗಳ ಮಂಚೂಣಿ ಸಾರ್ವಜನಿಕ ಸೇವೆಗಳಲ್ಲಿ ಒಂದಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ.

ಏನೆಲ್ಲ ಮಾಡಲಾಗುತ್ತದೆ?

ಈ ದಿನದಂದು ಹಲವಾರು ದೇಶಗಳು ತಮ್ಮದೆ ಆದ ವಿಶಿಷ್ಟ ಆಚರಣೆಗಳನ್ನು ಮಾಡುತ್ತವೆ. ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಇನ್ನು ಕೆಲವು ವಿನೂತನ ಅಂಚೆ ಸೇವೆಗಳನ್ನು ಪರಿಚಯಿಸುತ್ತವೆ.

ಬಹುತೇಕವಾಗಿ ಬಹು ಸಂಖ್ಯಾತ ದೇಶಗಳು ತಮ್ಮ ಅಂಚೆ ವಿಭಾಗದ ಉತ್ಪನ್ನಗಳು ಹಾಗೂ ಲಭ್ಯ ವಿರುವ ಸೌಲಭ್ಯ/ಸೇವೆಗಳ ಪ್ರಚಾರ ಮಾಡುವ ಕಾರ್ಯ ಮಾಡುತ್ತವೆ. ಒಟ್ಟಿನಲ್ಲಿ ಅಂಚೆಯ ಮಹತ್ವ ಹಾಗೂ ಕಾಲದಿಂದ ಅದು ನಡೆದು ಬಂದ ಹಾದಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯ ಮಾಡುತ್ತವೆ. ಈ ಸಂದರ್ಭದಲ್ಲಿ ಅಂಚೆ ಇಲಾಖೆಯಲ್ಲಿ ಉತ್ತಮ ಸೇವೆಗೈಯುತ್ತಿರುವ ಸಿಬ್ಬಂದಿಗಳನ್ನು ಆಯ್ಕೆ ಮಾಡಿ ಸನ್ಮಾನಿಸುವ ಕಾರ್ಯವೂ ಕೆಲ ಸ್ಥಳಗಳಲ್ಲಿ ನಡೆಯುತ್ತವೆ.

ಈ ಸಲದ ಥೀಮ್

ಪ್ರತಿ ಬಾರಿ ಒಂದೊಂದು ಥೀಮ್ ಅಡಿಯಲ್ಲಿ ವಿಶ್ವ ಅಂಚೆದಿನವನ್ನು ಆಚರಿಸಲಾಗುತ್ತದೆ. 2023ರ ಈ ಸಂದರ್ಭದಲ್ಲಿ ಅಂಚೆದಿನಾಚರಣೆಯನ್ನು “ನಂಬಿಕೆಗಾಗಿ ಒಟ್ಟಾಗಿ: ಸುರಕ್ಷಿತ ಮತ್ತು ಸಂಪರ್ಕಿತ ಭವಿಷ್ಯಕ್ಕಾಗಿ ಸಹಯೋಗ” ಎಂಬುದನ್ನು ವ್ಯಾಖ್ಯಾನಿಸಲಾಗಿದೆ.

Leave a Reply

Your email address will not be published. Required fields are marked *