ಇಂದು ಏನಿದ್ದರೂ ಕೌಶಲ್ಯಗಳ ಯುಗ. ಕೇವಲ ಔಪಚಾರಿಕ ಶಿಕ್ಷಣ ಪಡೆದರೆ ಸಾಲದು ಜೊತೆ ಜೊತೆಗೆ ಕೌಶಲ್ಯಗಳನ್ನು ಕಲಿಯಬೇಕು, ಹಾಗಾದಾಗ ಮಾತ್ರ ಉದ್ಯೋಗ, ಉದ್ದಿಮೆಗಳಂತಹ ಕ್ಷೇತ್ರದಲ್ಲಿ ಸಫಲತೆ ಸಿಗುತ್ತದೆ ಎಂದರೆ ತಪ್ಪಾಗಲಾರದು.
ಆತ್ಮವಿಶ್ವಾಸ ಎಂಬುದು ಸಹ ಒಂದು ಕೌಶಲ್ಯವಾಗಿದ್ದು ಮಕ್ಕಳಿದ್ದಾಗಲೆ ಅವರ ಜೀವನಶೈಲಿ ಯಲ್ಲಿ ಈ ಅದ್ಭುತ ಕೌಶಲ್ಯ ಮೂಡಿಸುವುದು ಅವಶ್ಯಕವಾಗಿದೆ. ಪೋಷಕರಾದವರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಬೇಕಾಗುತ್ತದೆ.
ಒಂದೊಮ್ಮೆ ಪಾಲಕರು ತಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರೆ ಮುಂದೆ ದೊಡ್ಡವರಾದಂತೆ ಆ ಮಕ್ಕಳು ಜೀವನದ ಎಲ್ಲ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಲ್ಲರು.
ಆದರೆ, ಈ ಆತ್ಮವಿಶ್ವಾಸ ಎಂಬುದನ್ನು ಮಕ್ಕಳಲ್ಲಿ ಹೇಗೆ ಮೂಡಿಸಬೇಕು ಎಂದಾಗ ಅನೇಕ ಪೋಷಕರಲ್ಲಿ ಸಾಕಷ್ಟು ಗೊಂದಲಗಳಿರಬಹುದು. ಆದರೆ, ಚಿಂತಿಸಬೇಡಿ, ಪೋಷಕತ್ವದ ಬಗ್ಗೆ ತರಬೇತಿ ನೀಡುವ ತರಬೇತುದಾರರಾದ ಸ್ವಾತಿ ಗುಪ್ತಾ ಅವರು ಕೆಲ ಸರಳ ಮಾರ್ಗಗಳನ್ನು ತಿಳಿಸಿದ್ದು ಆ ಪ್ರಕಾರ ಈ ಕೆಳಗೆ ನೀಡಲಾಗಿರುವ ವಿಷಯಗಳನ್ನು ನಿಮ್ಮ ಮಕ್ಕಳಿಗೆ ಕಲಿಸಿದರೆ ಸಾಕು, ಅವರಲ್ಲಿ ತನ್ನಷ್ಟಕ್ಕೆ ತಾನೆ ಆತ್ಮವಿಶ್ವಾಸ ಎಂಬುದು ಒಡಮೂಡುತ್ತದೆ.
ಸ್ವಾತಿ ಗುಪ್ತಾ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಷಯಗಳ ಹೀಗೆ ಹಂಚಿಕೊಂಡಿದ್ದಾರೆ.
ಧನಾತ್ಮಕತೆ:
ಮ್ಮಕ್ಕಳಿಗೆ ಸಹಜವಾಗಿ ಕೆಲವೊಮ್ಮೆ ಕೆಲ ಕೆಲಸಗಳನ್ನು ಕೊಟ್ಟಾಗ ಅವರಿಗೆ ಅದು ನನ್ನಿಂದ ಆಗಲ್ಲ, ಇದು ಕಷ್ಟವಾಗಿದೆ, ಇದು ಸಾಧ್ಯವಿಲ್ಲ ಎಂಬಂತಹ ವಿಚಾರಗಳು ಬರಬಹುದು. ಆ ಸಮಯದಲ್ಲೆ ಅವರಿಗೆ ಧನಾತ್ಮಕತೆಯನ್ನು ತುಂಬಿ ಅವರು ನಾನು ಮಾಡಬಹುದು, ಇದು ಸಾಧ್ಯವಿದೆ ಎಂಬಂತೆ ಮನಃಪರಿವರ್ತನೆ ಆಗುವಂತೆ ಮಾಡಲು ಪ್ರಯತ್ನಿಸಿ.
ಪೋಷಕರಾದವರು ಪ್ರಬುದ್ಧರಾಗಿರುವುದರಿಂದ ಕೆಲಸಗಳನ್ನು ಹೇಗೆ ಸ್ವೀಕರಿಸಿ ಅದನ್ನು ಯಾವ ರೀತಿ ನಿರ್ವಹಿಸಬಹುದು ಎಂಬುದರ ಬಗ್ಗೆ ಮಕ್ಕಳಿಗೆ ಪ್ರತಿ ಹಂತ ವಿವರಿಸುತ್ತ ಇದು ನೀನೂ ಸಹ ಮಾಡಬಹುದು ಎಂದು ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಧನಾತ್ಮಕತೆಯೆಡೆಗೆ ಮುನ್ನುಗ್ಗಿಸಿ.
ತಪ್ಪುಗಳಾದರೆ ಅದರಿಂದ ಕಲಿಯುವಂತೆ ಹುರುದುಂಬಿಸಿ
ಮಕ್ಕಳು ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುವುದು ಸಹಜ. ಒಮ್ಮೊಮ್ಮೆ ಮಕ್ಕಳಿಂದ ತಪ್ಪುಗಳಾದಾಗ ಅವರು ಎಲ್ಲಿ ಅಪ್ಪ-ಅಮ್ಮ ಗದರುವರೋ, ಹೊಡೆಯುವರೋ ಎಂದು ಭಯ ಬೀಳುವುದು ಸಾಮಾನ್ಯ. ಆದರೆ ಹೀಗೆ ತಪ್ಪುಗಳಾದಲ್ಲಿ ಅವರಿಗೆ ಗದರದೆ ಅವರು ಮೊದಲು ಭಯ ಬೀಳದಂತೆ ಅವರಿಗೆ ಸಮಾಧಾನಪಡಿಸಿ, ಅದೇ ಸಮಯದಲ್ಲಿ ಆ ತಪ್ಪಿನಿಂದ ಏನು ಕಲಿಯಬಹುದು ಎಂಬುದನ್ನು ಸಹ ಅವರಿಗೆ ತಿಳಿಸಿ.
ಚಿಕ್ಕ ಪುಟ್ಟ ಗುರಿಗಳನ್ನು ಹೊಂದುವಂತೆ ಅವರನ್ನು ಪ್ರೋತ್ಸಾಹಿಸಿ
ಇಲ್ಲಿ ಗುರಿ ಎಂಬುದು ಒಂದು ಅಲ್ಟಿಮೇಟ್ ಗುರಿ ಇದು ಎಂದಾಗಬೇಕಿಲ್ಲ. ದಿನ ನಿತ್ಯದ ಚಿಕ್ಕ ಪುಟ್ಟ ಯೋಜನೆಗಳು ಸಹ ಗುರಿಗಳೇ ಆಗಿರುತ್ತವೆ. ಪೋಷಕರು ಹೇಗೆ ತಮ್ಮ ನಿತ್ಯದ ದಿನಚರಿಯನ್ನು ಯೋಜಿಸುವರೋ ಅದೇ ರೀತಿ ನಿಮ್ಮ ಮಕ್ಕಳಿಗೂ ಸಹ ನಿತ್ಯದ ಗುರಿಗಳನ್ನು ಹೊಂದಿಸುವಂತೆ ಅವರಿಗೆ ಕಲಿಸಿ. ಅದು ಮನೆಪಾಠ ಆಗಿರಬಹುದು, ಯಾವುದಾದರೂ ಕ್ರಾಫ್ಟ್ ವರ್ಕ್ ಆಗಿರಬಹುದು ಅದಕ್ಕೊಂದು ಸಮಯ ನಿಗದಿಪಡಿಸಿ ಕರಾರುವಕ್ಕಾಗಿ ಆ ಸಮಯದಲ್ಲಿ ಆ ಕೆಲಸ ಮಾಡುವಂತೆ ಅವರಲ್ಲಿ ಶಿಸ್ತನ್ನು ಕಲಿಸಿ ನಂತರ ಆ ಕೆಲಸ ಮುಗಿದ ಬಳಿಕ ಮಕ್ಕಳೊಡನೆ ಬೆರೆತು ಅದನ್ನು ಸಂಭ್ರಮಿಸಿ.
ಅಭಿವ್ಯಕ್ತಿ ಸ್ವಾತಂತ್ರ್ಯ
ನಮ್ಮ ಸಂವಿಧಾನದಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ, ಇನ್ನು ನಾವು ನಮ್ಮ ಮಕ್ಕಳಿಗೂ ಅದನ್ನು ನೀಡಲೇಬೇಕು. ಕೆಲ ಕಠಿಣ ಪೋಷಕರು ಮಕ್ಕಳು ಕೇವಲ ಅಭ್ಯಾಸ ಮಾಡುತ್ತಿರಬೇಕು, ಯಾವುದೆ ಕುಂಟು ನೆಪ ಹೇಳದಂತೆ ಸ್ಟ್ರಿಕ್ಟ್ ಆಗಿರುತ್ತಾರೆ. ಆದರೆ ಹೀಗೆ ಮಾಡದಿರಿ. ಎಲ್ಲ ಮಕ್ಕಳಲ್ಲಿ ಯಾವುದಾದರೊಂದು ಪ್ರತಿಭೆ ಇದ್ದೇ ಇರುತ್ತದೆ, ಕೆಲವರು ಅಧ್ಯಯನದಲ್ಲಿ ಮುಂದಿದ್ದರೆ ಕೆಲವರು ಕಲೆಯಲ್ಲಿ ಮುಂದಿರುತ್ತಾರೆ. ಹಾಗಾಗಿ ನಿಮ್ಮ ಮಕ್ಕಳಿಗೆ ಯಾವುದಕ್ಕೂ ಅಡ್ಡಿಪಡಿಸಬೇಡಿ. ಅವರು ಮುಕ್ತವಾಗಿ ಎಲ್ಲವನ್ನು ವ್ಯಕ್ತಪಡಿಸುವಂತೆ ಅವರಿಗೆ ಸ್ವಾತಂತ್ರ್ಯ ನೀಡಿ.
ನಿರ್ಧಾರ ಮಾಡುವಾಗ ಅವರನ್ನೂ ಸೇರಿಸಿಕೊಳ್ಳಿ:
ಕೆಲ ಸೂಕ್ಷ್ಮ ಹಾಗೂ ಗಂಭೀರವಾದ ಮನೆ ವಿಚಾರಗಳನ್ನು ಹೊರತುಪಡಿಸಿ ನಿತ್ಯದ ಕೆಲ ಸಾಮಾನ್ಯ ಮನೆ ನಿರ್ಧಾರಗಳನ್ನು ಮಾಡುವಾಗ ಮಕ್ಕಳನ್ನೂ ಸೇರಿಸಿಕೊಳ್ಳಿ, ಅವರ ಆಲೋಚನೆಗಳಿಗೂ ಅದ್ಯತೆ ನೀಡಿ ನಿರ್ಧರಿಸಿ. ಇದರಿಂದ ಅವರಲ್ಲಿ ತಮಗೂ ಮಹತ್ವವಿದೆ ಎಂಬ ಅರಿವು ಮೂಡುತ್ತದೆ ಹಾಗೂ ಒಂದು ರೀತಿಯ ಜವಾಬ್ದಾರಿಯ ಪರಿಕಲ್ಪನೆ ಅವರಲ್ಲಿ ಮೂಡುತ್ತದೆ.
ಈ ಮೇಲಿನ ಎಲ್ಲ ವಿಷಯಗಳನ್ನು ನಿಮ್ಮ ಮಕ್ಕಳಿಗೆ ನೀವು ಕಲಿಸುತ್ತ ಬಂದರೆ ಕ್ರಮೇಣವಾಗಿ ಅವರಲ್ಲಿ ಆತ್ಮವಿಶ್ವಾಸ ಎಂಬುದು ಗಟ್ಟಿಯಾಗಿ ಒಡಮೂಡುತ್ತದೆ.