ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಲ್ಲಿ ಕೆಲ ಮಿಂಚಿನ ಸಂಚಲನಗಳು ಉಂಟಾಗಿದ್ದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತ ಹೋರಾಡುತ್ತಿದೆ. ಇದೀಗ ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಹೋರಾಟದಲ್ಲಿ ಸಾತ್ ನೀಡಲು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಜ್ಜಾಗುತ್ತಿದ್ದಾರೆ ಎನ್ನಬಹುದು.
ಶುಕ್ರವಾರದಂದು ಮಾಧ್ಯಮದವರೊಂದಿಗೆ ಮಾತನಾಡುತ್ತ ಕುಮಾರಸ್ವಮ್ಮಿಯವರು ತಮ್ಮ ಪಕ್ಷ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ಬಿಜೆಪಿಯೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆಂದು ಟೈಮ್ಸ್ ಮಾಧ್ಯಮವು ವರದಿ ಮಾಡಿದೆ.
“ನಾನು ಈಗಾಗಲೇ ಸದನದ ಒಳಗೂ ಹಾಗೂ ಹೊರಗೂ ಹೇಳಿರುವಂತೆ, ಜೆಡಿಎಸ್ ಮತ್ತು ಬಿಜೆಪಿ ಪ್ರತಿಪಕ್ಷಗಳಾಗಿವೆ. ಹಾಗಾಗಿ ರಾಜ್ಯದ ಜನರ ಹಿತಾಸಕ್ತಿಯನ್ನು ಪರಿಗಣಿಸಿ ನಾವಿಬ್ಬರೂ ಒಟ್ಟಾಗೆ ಕೆಅಲ್ಸ ಮಾಡಲು ಒಪ್ಪಿಕೊಂಡಿದ್ದೇವೆ. ಇಂದು ಬೆಳಗ್ಗೆಯೂ ಸಹ ನಮ್ಮ ಪಕ್ಷದ ಶಾಸಕರು ಈ ಬಗ್ಗೆ ನಾವು ಹೇಗೆ ಮುಂದುವರೆಯಬಹುದೆಂಬುದನ್ನು ಸಹ ಚರ್ಚಿಸಿದ್ದಾರೆ” ಎಂದು ಕುಮಾರಸ್ವಾಮಿ ಹೇಳಿದರೆಂದು ವರದಿಯಾಗಿದೆ.
ಒಟ್ಟಿನಲ್ಲೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಪ್ರತಿಭಟನೆಯಲ್ಲಿ ಅವರಿಗೆ ಸಾತ್ ನೀಡುತ್ತಿರುವಂತೆ ಕಂಡುಬಂದಿದ್ದ ಕುಮಾರಸ್ವಾಮಿಯವರ ನಡೆ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ನಿರೀಕ್ಷಿಸಿದಂತೆಯೇ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಸಿದ್ಧರಿರುವುದನ್ನು ಗಮನಿಸಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಷ್ಟಕ್ಕೂ ರಾಜಕೀಯ ಪಂಡಿತರ ಪ್ರಕಾರ, ಕಳೆದ ವಿಧಾನಸಭೆಯ ಚುನಾವಣೆಯ ನಂತರ ರಾಜ್ಯದಲ್ಲಿ ಏಕೈಕ ದೊಡ್ಡ ಮಟ್ಟದ ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿರುವ ಜೆಡಿಎಸ್ ಪಕ್ಷದ ಪ್ರದರ್ಶನ ಸಾಕಷ್ಟು ಕಳವಳಕಾರಿಯಾಗಿದ್ದು ಬಲು ಕಡಿಮೆ ಸಂಖ್ಯೆ ಸ್ಥಾನಗಳನ್ನು ಗೆದ್ದಿದೆ. ಸದ್ಯ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಅದು ಯಾವುದಾದರೂ ಪಕ್ಷದೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಅದು ಕಾಂಗ್ರೆಸ್ ಗೆ ಹೋಲಿಸಿದರೆ ಬಿಜೆಪಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು ಎನ್ನುತ್ತಾರೆ ರಾಜಕೀಯ ತಜ್ಞರು.
ಅದರಂತೆ, ಕುಮಾರಸ್ವಾಮಿ ಈಗ ಬಿಜೆಪಿಯತ್ತ ತಮ್ಮ ಗಮನಹರಿಸಿದ್ದಾರೆನ್ನಬಹುದಾಗಿದೆ. ಅಷ್ಟಕ್ಕೂ ವರದಿಯಾಗಿರುವಂತೆ, ಜೆಡಿಎಸ್ ಸುಪ್ರೀಮೊ ಹಾಗೂ ಮಾಜಿ ಪ್ರಧಾನಿಗಳಾದ ದೇವೆಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಪ್ರಸ್ತಾವನೆಯನ್ನು ಪರೀಶಿಲಿಸುವಂತೆ ಕುಮಾರಸ್ವಾಮಿಯವರಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇನ್ನು, ಜೆಡಿಎಸ್ ಮಾಧ್ಯಮ ಘಟಕವು ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಗುರುವಾರದಂದು ಶಾಸಕರ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಹೇಳಿದ್ದು ದೇವೆಗೌಡರು ಮುಂಬರುವ ಲೋಕಸಭೆಯ ಚುನಾವಣೆಯ ಮೇಲೆ ಚಿತ್ತ ಹರಿಸುವಂತೆ ಸಲಹೆ ನೀಡಿರುವುದಾಗಿ ಉಲ್ಲೇಖಿಸಿದೆ. ಮುಂದುವರೆಯುತ್ತ ಅದು, ದೇವೆಗೌಡರು ಯಾವ ಸರಿಯಾದ ಸಮಯದಲ್ಲಿ ಜೆಡಿಎಸ್ ಮೈತ್ರಿಗೆ ಮುಂದೆ ಬರುವುದೋ ಅದನ್ನು ಸೂಕ್ತ ಸಮಯದಲ್ಲಿ ಕುಮಾರಸ್ವಾಮಿಯವರೇ ನಿರ್ಧರಿಸಲಿದ್ದಾರೆ ಎಂದು ಹೇಳಿರುವುದಾಗಿಯೂ ತಿಳಿಸಿದೆ.
ಈ ಮಧ್ಯೆ ಬೆಂಗಳೂರು-ಮೈಸೂರು ಕಾರಿಡಾರ್ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ವಿವಾದಗಳನ್ನು ತ್ವರಿತವಾಗಿ ಪರೀಶಿಲಿಸಿ ಪರಿಹಾರ ಕಂಡುಕೊಳ್ಳುವಂತೆ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾರೆಯಾಗಿ ಕಾಂಗ್ರೆಸ್ ಸರ್ಕಾರವನ್ನು ಕೇಳಿಕೊಂಡಿವೆ.
ಒಟ್ಟಿನಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಬಿಸಿ ರಾಜ್ಯ ರಾಜಕಾರಣದಲ್ಲಿ ನಿತ್ಯ ಹೊಸ ಹೊಸ ರಾಜಕೀಯ ಚಟುವಟಿಕೆಗಳು ಏರ್ಪಡುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ದಿನಗಳೆದಂತೆ ಏನೆಲ್ಲ ರಾಜಕೀಯ ತಿರುವುಗಳು ಉಂಟಾಗುವುದೋ ಅನ್ನೊದ್ದನ್ನ ಈಗ ಕಾದು ನೋಡಬೇಕಾಗಿದೆ.