Pic Credit: Pexels
ಆರೋಗ್ಯಕರ ಜೀವನ ನಡೆಸಲು, ದೇಹದ ಪ್ರತೊರೋಧಕ ಶಕ್ತಿಯನ್ನು ವೃದ್ಧಿಸಲು, ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ಅವುಗಳನ್ನು ದೇಹದ ಇತರೆ ಭಾಗಗಳಿಗೆ ಸಾಗಿಸುವಲ್ಲಿ ನಮ್ಮ Gut Health, ಗಟ್ ಅಥವಾ ಗ್ಯಾಸ್ಟ್ರೋ ಇಂಟಸ್ಟೈನಲ್ ಟ್ರ್ಯಾಕ್ಟ್ ಅಥವಾ ಜೀರ್ಣಾಂಗ ವ್ಯೂಹ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಗಟ್ ನ ಜೀರ್ಣಾಂಗವ್ಯೂಹದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ.
ನಾವು ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದರೆ, ನಾವು ಸೇವಿಸುವ ಆಹಾರ ಮತ್ತು ನಮ್ಮ ದೈನಂದಿನ ಜೀವನಶೈಲಿಯು ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪೋಷಕಾಂಶಯುಕ್ತ ಆಹರವನ್ನು ಸೇವಿಸುತ್ತಿದ್ದೇವೆ ಎಂಬ ಮಾತ್ರಕ್ಕೆ ನಾವು ಆರೋಗ್ಯದಿಂದಿರಲು ಸಾಧ್ಯವಿಲ್ಲ. ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ದೊರೆತು ಕಲ್ಮಶಗಳನ್ನು ದೇಹದಿಂದ ಹೊರಹಾಕಿದಾಗ ಮಾತ್ರ ಆರೋಗ್ಯಕರ ಜೀವನ ನಮ್ಮದಾಗಿರುತ್ತದೆ.
ಈ ಎಲ್ಲಾ ಕಾರ್ಯಗಳನ್ನು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದೇ ನಮ್ಮ ಗಟ್. ಅದಕ್ಕಾಗಿ ಗಟ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ.
ಗಟ್ ಅಥವಾ ಗಟ್ ಹೆಲ್ತ್ ಎಂದರೇನು?
ಗಟ್ ಹೆಲ್ತ್ ಅನ್ನುವ ಪದ ಇತ್ತೀಚಿನ ದಿನಗಳಲ್ಲಿ ತುಂಬ ಪ್ರಚಲಿತದಲ್ಲಿದೆ. ಗಟ್ ಅನ್ನುವುದು ನಮ್ಮ ದೇಹದ ಒಂದು ಸಣ್ಣ ಭಾಗ ಮಾತ್ರವಲ್ಲದೆ ಮನುಷ್ಯನ ದೇಹದಲ್ಲಿ ತನ್ನದೆ ಆದ ಒಂದು ವ್ಯೂಹವನ್ನು ಹೊಂದಿದೆ. ಅದನ್ನು ಕನ್ನಡದಲ್ಲಿ “ಜೀರ್ಣಾಂಗ ವ್ಯೂಹ” ಎಂದು ಕರೆಯಬಹುದು.
ಈ ಜೀರ್ಣಾಂಗ ವ್ಯೂಹವು ಬಾಯಿಯಿಂದ ಪ್ರಾರಂಭಗೊಂಡು, ಗಂಟಲು, ಅನ್ನನಾಳ, ಹೊಟ್ಟೆ, ಸಣ್ಣ ಕರುಳು, ದೊಡ್ಡ ಕರುಳು ಹಾಗೂ ಕೊನೆಯದಾಗಿ ಗುದದ್ವಾರದವರೆಗೂ ವ್ಯಾಪಿಸಿದೆ.
ಮೆದುಳು ಮತ್ತು ಗಟ್ ನಡುವಿನ ಸಂಭಾಷಣೆ
ಗಟ್ ಅನ್ನು ನಮ್ಮ ದೇಹದ ಎರಡನೇ ಮೆದುಳು ಎಂದು ಸಹ ಒಮ್ಮೊಮ್ಮೆ ಕರೆಯಲಾಗುತ್ತದೆ. ನಮ್ಮ ಮೆದುಳಿನಲ್ಲಿ ಹೇಗೆ ಎಲ್ಲ ರೀತಿಯ ಮಾಹಿತಿಗಳು ಸಂಗ್ರಹವಾಗಿರುತ್ತವೆಯೋ ಅದೇ ರೀತಿ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಯು ಗಟ್ ನಲ್ಲಿ ಸಂಗ್ರಹವಾಗಿರುತ್ತದೆ.
ತಜ್ಞರು ಅಥವಾ ಸಂಶೋಧಕರು ಹೇಳುವ ಪ್ರಕಾರ, ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಗಟ್ ಸದಾ ಕಾಲ ಮೆದುಳಿನ ಜೊತೆ ಸಂಭಾಷಣೆಯನ್ನು ನಡೆಸುತ್ತಲೇ ಇರುತ್ತದಂತೆ. ಅದು ಹೇಗೆ ಎಂದು ಈ ಕೆಳಗಿನ ವಿವರಗಳ ಮೂಲಕ ತಿಳಿಯಿರಿ.
ನಾವು ಯಾವಾಗಾದರೂ ನಮಗಿಷ್ಟವಾದ, ರುಚಿಕರವಾದ ಆಹಾರ ನೋಡಿದಾಗ ನಮ್ಮ ಮೆದುಳು ಗಟ್ ಗೆ ಒಳಬರುವ ಆಹಾರ ಪದಾರ್ಥವನ್ನು ಸ್ವೀಕರಿಸುವಂತೆ ಸೂಚನೆಯನ್ನು ನೀಡುತ್ತದೆ.
ಅದೇ ರೀತಿ ಕೆಲವೊಮ್ಮೆ ನಾವು ಆತಂಕ, ಅಥವಾ ಆಂಕ್ಷಿಯಸ್ ಆದಾಗ ನಮ್ಮ ಹೊಟ್ಟೆಯಲ್ಲಿ ಇರುಸು ಮುರುಸು ಆಗುವುದನ್ನು ಅನುಭವಿಸುತ್ತೇವೆ. ಈ ಎರಡು ಉದಾಹರಣೆಗಳನ್ನು ನೀಡುತ್ತ ಸಂಶೋಧಕರು ಮೆದುಳು ಗಟ್ ನೊಂದಿಗೂ ಹಾಗೂ ಗಟ್ ಮೆದುಳಿನೊಂದಿಗೂ ಸಂಭಾಷಣೆ ನಡೆಸುತ್ತದೆ ಎಂಬುದನ್ನು ಹೇಳುತ್ತಾರೆ.
ಜೀರ್ಣಾಂಗ ವ್ಯೂಹದ ಕಾರ್ಯವೇನು?
ಇನ್ನು ಗಟ್ ನ ಕಾರ್ಯದ ಬಗ್ಗೆ ನೋಡುವುದಾದರೆ, ಇದು ಬಾಯಿಯಿಂದ ಪ್ರಾರಂಭವಾಗಿ ಗಂಟಲು, ಹೊಟ್ಟೆ ಮೂಲಕ ಗುದದ್ವಾರದವರೆಗೆ ವ್ಯಾಪಿಸಿದ್ದು ಇದರ ಮುಖ್ಯ ಕೆಲಸವೇನೆಂದರೆ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳುವುದು ಮತ್ತು ಆಹಾರದಲ್ಲಿರುವ ತ್ಯಾಜ್ಯಾವಸ್ತುಗಳನ್ನು ಬೇರ್ಪಡಿಸಿ ಮಲದ ರೂಪದಲ್ಲಿ ಅದನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
ನಾವು ಸೇವಿಸುವ ಆಹಾರ, ಬಾಯಿಯಲ್ಲಿನ ಲಾಲಾ ರಸ (ಸಲೈವಾ) ದೊಂದಿಗೆ ಸೇರಿಕೊಂಡು ಅನ್ನನಾಳದ ಮೂಲಕ ಹೊಟ್ಟೆ ಚೀಲವನ್ನು ತಲುಪಿ ತದನಂತರ ಸಣ್ಣ ಕರುಳು ಮತ್ತು ದೊಡ್ಡ ಕರುಳನ್ನು ತಲುಪುತ್ತದೆ. ಈ ಸಂದರ್ಭದಲ್ಲಿ ಕರುಳಿನ ಮುಖ್ಯ ಕೆಲಸವೇನೆಂದರೆ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳನ್ನು ಹೀರಿಕೊಂಡು ರಕ್ತದ ಮೂಲಕ ಅದನ್ನು ದೇಹದ ಇತರೆ ಭಾಗಗಳಿಗೆ ತಲುಪಿಸುವುದಾಗಿದೆ.
ಗಟ್ ಹೆಲ್ತ್ ಕಾಪಾಡುವಲ್ಲಿ ಕರುಳಿನ ಮಹತ್ವ
ಇಲ್ಲಿಯವರೆಗೆ ನಾವು ಈ ಲೇಖನದ ಮೂಲಕ ಗಟ್ ಅಥವಾ ಜೀರ್ಣಾಂಗ ವ್ಯೂಹವು ಬಾಯಿಯಿಂದ ಪ್ರಾರಂಭವಾಗಿ ಗುದದ್ವಾರದವರೆಗೆ ವ್ಯಾಪಿಸಿದೆ ಎಂದು ತಿಳಿದಿದ್ದೇವೆ. ಆದರೆ, ಎಷ್ಟೋ ಜನರಿಗೆ ಗಟ್ ನಲ್ಲಿ ಈ ಎಲ್ಲ ಅಂಗಾಂಗಗಳ ಇರುವಿಕೆಯ ಬಗ್ಗೆ ಅರಿವೇ ಇಲ್ಲ.
ಗಟ್ ಎಂದಾಕ್ಷಣ ಎಲ್ಲರ ಗಮನಕ್ಕೆ ಬರುವುದು ಕರುಳು ಎಂದು ಮಾತ್ರ. ಏಕೆಂದರೆ ಜೀರ್ಣಾಂಗ ವ್ಯೂಹದಲ್ಲಿ ಕರುಳು ತನ್ನದೆ ಆದ ಮಹತ್ತರ ಸ್ಥಾನ ಹೊಂದಿದೆ. ಅದಕ್ಕೆ ಮುಖ್ಯ ಕಾರಣ, ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳು.
ಮನುಷ್ಯನ ಕರುಳಿನಲ್ಲಿ ಟ್ರಿಲಿಯನ್ ಗಳಷ್ಟು ಬ್ಯಾಕ್ಟಿರಿಯಾಗಳಿವೆ. ಈ ಎಲ್ಲ ಬ್ಯಾಕ್ಟಿರಿಯಾಗಳಲ್ಲಿ ಬಹಳಷ್ಟು ಬ್ಯಾಕ್ಟಿರಿಯಾಗಳು ಮನುಷ್ಯನ ಆರೋಗ್ಯಕ್ಕೆ ಉತ್ತಮವಾಗಿವೆ. ಅಲ್ಲದೆ ಎಷ್ಟು ಪ್ರಮಾಣ ಹಾಗೂ ವೈವಿಧ್ಯಮಯವಾದ ಈ ಪ್ರಯೋಜನಕಾರಿಯಾದ ಬ್ಯಾಕ್ಟಿರಿಯಾಗಳು ಮನುಷ್ಯನ ಕರುಳಿನಲ್ಲಿರುವುದೋ ಅಷ್ಟು ಮನುಷ್ಯ ಆರೋಗ್ಯಕರವಾಗಿರುತ್ತಾನೆ.
ಈ ಬ್ಯಾಕ್ಟಿರಿಯಾಗಳು ಮಾಡುವುದಾದರೂ ಏನು?
“ಏನೋ ಗಟ್ಸ್ ಇದೇಯಾ ನಿನಗೆ” ಎಂಬ ವಾಕ್ಯವನ್ನು ನೀವು ಬಹುಶಃ ಕೇಳಿರಬಹುದು. ಹಾಗೇಕೆ ಎಂದರೆ ಗಟ್ಸ್ ಎಷ್ಟು ಆರೋಗ್ಯಕರವಾಗಿರುತ್ತದೆಯೋ ಮನುಷ್ಯ ಕೂಡ ಅಷ್ಟೇ ಆರೋಗ್ಯಕರ, ಬಲಶಾಲಿ ಹಾಗೂ ಚೈತನ್ಯಯುಕ್ತನಾಗಿರುತ್ತಾನೆ. ಹಾಗಾಗಿಯೇ ಕಷ್ಟಕರವಾದ ಕೆಲಸಗಳನ್ನೊಮ್ಮೆ ಮಾಡುವಾಗ ಉತ್ತಮ ಬಲ, ಚೌತನ್ಯ ಬೇಕಾಗಿರುವುದರಿಂದ ಈ ರೀತಿ ಜನರು “ಗಟ್ ಇದೆಯಾ” ಎಂದು ಕೇಳುವುದುಂಟು.
ಹಾಗಾದರೆ ಗಟ್ ಅನ್ನು ಚೆನ್ನಾಗಿರಿಸುವುದು ಏನು ಎಂಬ ವಿಚಾರ ಬರಬಹುದು. ಅದಕ್ಕೆ ಪ್ರಮುಖ ಉತ್ತರವೇ ಈ ಪ್ರಯೋಜನಕಾರಿ ಬ್ಯಾಕ್ಟಿರಿಯಾ ಎನ್ನಬಹುದು. ಹೌದು, ಈ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳು ದೇಹದಲ್ಲಿರುವ ರೋಗನಿರೋಧಕ ಜೀವಕೋಶಗಳೊಂದಿಗೆ ಸಂವಹನ ನಡೆಸುತ್ತವೆ ಹಾಗೂ ಆ ಮೂಲಕ ನಿಮ್ಮ ದೇಹವು ಸೋಂಕುಗಳ ವಿರುದ್ಧ ಯಾವ ರೀತಿ ಪ್ರತಿಕ್ರಯಿಸಲಿದೆ ಎಂಬುದನ್ನು ನಿಯಂತ್ರಿಸುತ್ತದೆ.
ಮೊದಲೆ ಹೇಳಿದ ಹಾಗೆ ಕೆಲ ಕೆಟ್ಟ ಬ್ಯಾಕ್ಟಿರಿಯಾಗಳೂ ದೇಹದಲ್ಲಿದ್ದು ಇವುಗಳ ಪ್ರಮಾಣ ಹೆಚ್ಚಾದಾಗ ಆರೋಗ್ಯ ಅಸ್ವಸ್ಥೆಗಳಾದಂತಗ ಅನಿಯಮಿತ ತೂಕ ಹೆಚ್ಚುವಿಕೆ ಅಥವಾ ತಗ್ಗುವಿಕೆ ಕಾಣಿಸಬಹುದು. ಹಾಗಾಗಿ ಉತ್ತಮ ಮತ್ತು ಪ್ರಯೋಜನಕಾರಿಯಾದ ಬ್ಯಾಕ್ಟಿರಿಯಾಗಳನ್ನು ಇರಿಸಿಕೊಳ್ಳುವುದು ಅವಶ್ಯಕವಾಗಿದೆ.
ಈ ಬ್ಯಾಕ್ಟಿರಿಯಾಗಳು ಮಾಡುವ ಕಾರ್ಯಗಳು
* ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಂಡು ದೇಹದ ಇತರೆ ಭಾಗಗಳಿಗೆ ರಕ್ತದ ಮೂಲಕ ನಿಯಮಿತವಾಗಿ ಸರಬರಾಜು ಮಾಡುವುದು
* ಉತ್ತಮ ಕೊಲೆಸ್ಟ್ರಾಲ್ ಗಳನ್ನು ಪ್ರಮೋಟ್ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡುತ್ತದೆ.
* ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುವುದರ ಮೂಲಕ ಡಯಾಬಿಟಿಸ್ ಬರದಂತೆ ನೋಡಿಕೊಳ್ಳುವಲ್ಲಿ ನೆರವಾಗುತ್ತವೆ.
ಗಟ್ ಹೆಲ್ತ್ ಅನ್ನು ವೃದ್ಧಿಸುವುದು ಹೇಗೆ?
ಹಾಗಾದರೆ ಗಟ್ ಹೆಲ್ತ್ ಎಂಬುದು ಒಟ್ಟಾರೆ ದೇಹದ ಆರೋಗ್ಯದಲ್ಲಿ ಎಷ್ಟು ಮಹತ್ವದ ಪಾತ್ರವಹಿಸುತ್ತದೆ ಎಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಇನ್ನು ಗಟ್ ಹೆಲ್ತ್ ಅನ್ನು ಕಾಪಾಡಿಕೊಳ್ಳುವುದು ಅಥವಾ ವೃದ್ಧಿಸಿಕೊಳ್ಳುವುದು ಹೇಗೆ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಅಲ್ಲವೆ?
ಗಟ್ ಹೆಲ್ತ್ ಉತ್ತಮವಾಗಿರಬೇಕೆಂದರೆ ಉತ್ತಮ ಅಥವಾ ಸ್ನೇಹಪರ ಬ್ಯಾಕ್ಟಿರಿಯಾಗಳನ್ನು ಉಳಿಸಿಕೊಳ್ಳುವುದಾಗಿದೆ ಹಾಗೂ ಇದನ್ನು ಮುಖ್ಯವಾಗಿ ಆಹಾರದ ಮೂಲಕ ಸಾಧಿಸಬಹುದಾಗಿದೆ. ನಿಮ್ಮಲ್ಲಿ ವೈವಿಧ್ಯಮಯ ಉತ್ತಮ ಬ್ಯಾಕ್ಟಿರಿಯಾಗಳು ಇರಬೇಕೆಂದರೆ ಅದಕ್ಕಾಗಿ ವಿವಿಧ ಬಗೆಯ ಆರೋಗ್ಯಕರ ಹಣ್ಣುಗಳು, ಹಸಿರು ಸೊಪ್ಪುಗಳು ಹಾಗೂ ತರಕಾರಿಗಳ ಸೇವನೆ ನಿಯಮಿತವಾಗಿ ಮಾಡುತ್ತಿರಬೇಕು. ಬಾಳೆಹಣ್ಣು, ಸೇಬು, ಆರೆಂಜ್, ಪಪ್ಪಾಯಾ, ಸೌತೆಕಾಯಿ, ಗಜ್ಜರಿ, ಬೀಟ್ ರೂಟ್, ಟೊಮ್ಯಾಟೊ, ಮೂಲಂಗಿ ಇತ್ಯಾದಿ.
ಇವುಗಳಲ್ಲದೆ ಪ್ರಿಬಯೋಟಿಕ್ ಹಾಗೂ ಪ್ರೊಬಯೋಟಿಕ್ ಆಹಾರಗಳು ಬ್ಯಾಕ್ಟಿರಿಯಾಗಳ ಉಪಸ್ಥಿತಿಗೆ ಸಂಬಂಧಿಸಿದಂತೆ ಪ್ರಮುಖ ಪಾತ್ರವಹಿಸುತ್ತವೆ.
ಪ್ರಿಬಯೋಟಿಕ್ ಆಹಾರ: ಬಾಳೆಹಣ್ಣು, ಸೋಯಾಬೀನ್ಸ್, ಬೀನ್ಸ್, ಧಾನ್ಯಗಳು, ಬಾರ್ಲಿ, ಓಟ್ಸ್, ಈರುಳ್ಳಿ, ಬೆಳ್ಳುಳ್ಳಿ, ಸೇಬು, ಕೊಕೋವಾ, ಅಗಸೆ ಬೀಜ. ಇವುಗಳ ಸೇವನೆಯಿಂದ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಸರಾಗವಾಗಿ ವೃದ್ಧಿಸಬಹುದು.
ಪ್ರೊಬಯೋಟಿಕ್ ಆಹಾರ : ಇದರಲ್ಲಿ ಮೊದಲಿನಿಂದಲೇ ಜೀವಂತ ಸೂಕ್ಷ್ಮಜೀವಿಗಳಿದ್ದು ಇದು ಸಹ ಗಟ್ ಆರೋಗ್ಯವನ್ನು ಇನ್ನಷ್ಟು ವೃದ್ದಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಆಹಾರಗಳಿಗೆ ಉದಾಹರಣೆಗಳೆಂದರೆ ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ಯೋಗರ್ಟ್, ಇಡ್ಲಿ, ದೋಸೆ, ಚೀಸ್ ಇತ್ಯಾದಿ.