ಅಮಲು ಜೀವನವನ್ನೇ ಕಮರಿ ಹೋಗದಂತೆ ಮಾಡಲಿ….ಮೊದಲೇ ಎಚ್ಚುತ್ತುಕೊಳ್ಳಿ

Alcohol

ಅಮಲು ಜೀವನವನ್ನೇ ಕಮರಿ ಹೋಗದಂತೆ ಮಾಡಲಿ ಎಂದು ಹೇಳುತ್ತ ಪ್ರಾರಂಭಿಸುತ್ತಿರುವೆ…ಇಂದು ಅಂಗೈಯಲ್ಲೇ ಪ್ರಪಂಚವಿದೆ…ಏನು ಬೇಕೋ ಥಟ್ ಅಂತ ಸಿಕ್ಕಿಬಿಡುತ್ತದೆ, ಮನರಂಜನೆ, ಟೈಮ್ ಪಾಸ್ ಎಲ್ಲವೂ ಈಗ ಬಲು ಸರಳ. ಈ ರೀತಿ ಕ್ರಾಂತಿ ಉಂಟು ಮಾಡಿದ್ದೇ ಮೊಬೈಲ್ ಎಂಬ ಚಿಕ್ಕ ಸಾಧನ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಮೊಬೈಲ್ ಕೈಯಲ್ಲೆ ಹಿಡಿಯಬಹುದಾದ ಚಿಕ್ಕ ಸಾಧನವಾದರೂ ವ್ಯಕ್ತಿಯ ಜೀವನವನ್ನೇ ಬುಡ ಸಮೇತ ಅಲುಗಾಡಿಸುವಷ್ಟು ಸಾಮರ್ಥ್ಯ ಅದಕ್ಕಿದೆ.

ಇದೀಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದೆ ಮೊಬೈಲ್. ಕಳೆದ ಹತ್ತು-ಹದಿನೈದು ವರ್ಷಗಳನ್ನೇ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ…ಮೊಬೈಲ್ ಅದೆಷ್ಟು ನಮ್ಮ ಜೀವನವನ್ನು ಬದಲಾಯಿಸುತ್ತಿದೆ ಎಂಬುದು ತಿಳಿದುಬರುತ್ತದೆ.

ಮೊಬೈಲ್ ಫೋನುಗಳು ಮೊದ ಮೊದಲು ಬಂದಾಗ ಅದರ ಉದ್ದೇಶ ಸ್ಪಷ್ಟವಾಗಿತ್ತು, ಯಾರಿಗಾದರೂ ಏನಾದರೂ ಎಮೆರ್ಜೆನ್ಸಿ ಎಂಬ ಸಂದರ್ಭ ಬಂದಾಗ ಥಟ್ಟನೆ ನಮ್ಮವರೊಡನೆ ಆ ಬಗ್ಗೆ ಮಾತನಾಡುವ ಪ್ರಮುಖ ಉದ್ದೇಶದೊಂದಿಗೆ ಮೊಬೈಲ್ ಫೋನ್ ಆವಿಷ್ಕರಿಸಲ್ಪಟ್ಟಿತ್ತು. ಇನ್ನು ಉದ್ದಿಮೆದಾರರು ತಮ್ಮ ವ್ಯವಹಾರಕ್ಕನುಗುಣವಾಗಿ ಸಂವಹನ ನಡೆಸಲು ಇದು ಪ್ರಯೋಜನಕಾರಿಯಾಗಿತ್ತು.

ಆದರೆ ಸಮಯ ಕಳೆದಂತೆ ಮೊಬೈಲ್ ಫೋನುಗಳು ತೀವ್ರವಾಗಿ ಸುಧಾರಣೆಗೊಳಪಟ್ಟವು. ಅತ್ಯಾಧುನಿಕ ತಂತ್ರಜ್ಞಾನಗಳು ಆ ಚಿಕ್ಕ ಡಿವೈಸ್ ಒಳಗೆ ನುಸುಳಲ್ಪಟ್ಟವು. ಮೊದ ಮೊದಲು ಮಾತನಾಡುವುದೇ ಪ್ರಮುಖವಾಗಿದ್ದ ಅಂಶ ಇದೀಗ ಮಾತನಾಡುವ ಅಂಶವನ್ನು ದ್ವಿತೀಯ ದರ್ಜೆಗಿಳಿಸಿ ಇನ್ನಿತರೆ ಚಟುವಟಿಕೆಗಳು ಮೊಬೈಲ್ ನಲ್ಲಿ ಪ್ರಾಥಮಿಕ ಸ್ಥಾನ ಪಡೆದಿವೆ. ಉದಾಹರಣೆಗೆ ವಿಡಿಯೋ ವೀಕ್ಷಣೆ, ಚಲನಚಿತ್ರ ವೀಕ್ಷಣೆ, ಗೇಮ್ ಆಡುವುದು, ಇತ್ಯಾದಿ.

ವಿಡಿಯೋ ವೀಕ್ಷಣೆಯನ್ನೆ ತೆಗೆದುಕೊಳ್ಳಿ…ಜನರು ಈಗೀಗ ಮೊಬೈಲ್ ನಲ್ಲಿ ಎಷ್ಟು ಮುಳುಗಿದ್ದಾರೆಂದರೆ ದಿನದ ಯಾವ ಹೊತ್ತಿನಲ್ಲೂ ಮೊಬೈಲ್ ಅನ್ನು ಹೊರತೆಗೆದು ಫೇಸ್ ಬುಕ್, ಇನ್ಸ್ಟಾ, ಯುಟ್ಯೂಬ್ ನೋಡುವ ಚಾಳಿ ಹೆಚ್ಚಾಗಿದೆ. ಮತ್ತೊಬ್ಬರೊಡನೆ ಬೆರೆಯುವ, ಸಂಭಾಷಿಸುವ ಸಂಯಮ, ಸಮಯ ಇಲ್ಲದೇ ಹೋಗಿದೆ. ಅದರಲ್ಲೂ ಈ ರೀಲ್ಸ್ ಎಂಬ ಚಿಕ್ಕ ಚಿಕ್ಕ ವಿಡಿಯೋಗಳು ಮನುಷ್ಯನ ಅರ್ಧ ಜೀವನವನ್ನೆ ಕಸಿಯುತ್ತಿವೆ ಎಂದರೆ ತಪ್ಪಾಗದು.

ಬನ್ನಿ, ಈಗ ವಾಸ್ತವದಲ್ಲಿನ ಕೆಲ ಅಂಶಗಳನ್ನು ಪ್ರಸ್ತಾಪಿಸೋಣ….ಮೊದ ಮೊದಲು ಯುಟ್ಯೂಬ್ ವಿಡಿಯೋಗಳು ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ೧೦-೧೫ ನಿಮಿಷಗಳ ವಿಡಿಯೋಗಳು ಬರುತ್ತಿದ್ದವು. ಜನರು ಆಗ ಸಹನೆಯಿಂದಲೇ ಅಷ್ಟು ಹೊತ್ತು ವಿಡಿಯೋ ನೋಡುತ್ತಿದ್ದುದು ಸುಳ್ಳಲ್ಲ. ಅದೇ ಬರ ಬರುತ್ತ ಮನುಷ್ಯನಲ್ಲಿ ತಾಳ್ಮೆ ಎಂಬುದು ಬರಿದಾಗುತ್ತ ರೀಲ್ಸ್ ಗಳ ಹಾವಳಿ ಹೆಚ್ಚಾಯಿತು. ಹೌದು, ಈಗ ನಮಗೆ ಐದು ಐದು ನಿಮಿಷ ಕುಳಿತು ನೋಡುವುದಕ್ಕೂ ಸಹನೆಯಿಲ್ಲ, ಏನೇ ಇದ್ದರೂ ೩೦-೪೦ ಸೆಕೆಂಡುಗಳಲ್ಲೇ ಮುಗಿಯಬೇಕು….

ಅದರಲ್ಲೂ ವಿಶೇಷವಾಗಿ ನೀವು ಗಮನಿಸಿರಬಹುದು ಕುಡಿಯುವುದಕ್ಕೆ ಸಂಬಂಧಿಸಿದಂತೆ ಸಹಸ್ರಾರು ಶಾರ್ಟುಗಳು, ರೀಲ್ಸ್ ಗಳು ನಮ್ಮ ಪರದೆಯ ಮೇಲೆ ಬರುತ್ತಲೇ ಇರುತ್ತವೆ. ಒಮ್ಮೊಮ್ಮೆ ಹುಡುಗರೆಲ್ಲ ಸೇರಿ ಕುಡಿಯುವುದನ್ನು (ಮದ್ಯಪಾನ) ವೈಭವೀಕರಿಸುವ ಶಾರ್ಟುಗಳನ್ನು ಮಾಡಿದರೆ ಹಲವಾರು ಬಾರಿ ಹೆಂಡತಿಯಾದವಳು ಸ್ವತಃ ಗಂಡನಿಗೆ ತನ್ನ ಕೈಯಾರೆ ಡ್ರಿಂಕ್ಸ್ ಮಾಡುವಂತೆ ಹೇಳಿ ಪ್ರಚೋದಿಸುವ ವಿಡಿಯೋಗಳಿಗೂ ಕಮ್ಮಿ ಇಲ್ಲ.

ಇಲ್ಲಿ ಗಮನಿಸಬೆಕಾದ ಒಂದು ಮುಖ್ಯ ಅಂಶವೆಂದರೆ ನಾವು ಈ ಮದ್ಯಪಾನದ ವಿಡಿಯೋಗಳನ್ನು ತಮಾಷೆಗಾಗಿಯೋ ಅಥವಾ ಹೆಚ್ಚು ವೀಕ್ಷಣೆ, ಲೈಕ್ಸ್ ಗಿಟ್ಟಿಸಬೇಕೆಂಬ ಉದ್ದೇಶದಿಂದಾಗಿಯೋ ಮಾಡುತ್ತೇವಾದರೂ ಅದು ಮುಖ್ಯವಾಹಿನಿಯಲ್ಲಿ ಮದ್ಯಪಾನ ಮಾಡುವುದು ಬಲು ಸಾಮಾನ್ಯ, ಅದರಿಂದ ಏನೂ ನಷ್ಟವಿಲ್ಲ ಎಂಬಂತೆ ಬಿಂಬಿಸುತ್ತಿರುವುದು ದುರದೃಷ್ಟಕರ.

ಇಂದಿನ ರಭಸದ ಜೀವನದಲ್ಲಿ ಪ್ರತಿನಿತ್ಯ ವ್ಯಕ್ತಿ ಜೀವನ ನಡೆಸಲು ಸಾಕಷ್ಟು ಪರದಾಡುತ್ತಿದ್ದಾನೆ ಎಂಬುದು ಸುಳ್ಳಲ್ಲ, ನಿತ್ಯ ಬೆಳಗ್ಗೆ ಎದ್ದು ತನ್ನ ಕರ್ಮಾದಿಗಳನ್ನೆಲ್ಲ ಮುಗಿಸಿ ಕಚೇರಿಗೆ ಹೋಗಬೇಕಪ್ಪಾ ಇನ್ನು ಎನ್ನುವುದರಿಂದ ಹಿಡಿದುಕೊಂಡು ದಿನಪೂರ್ತಿ ಒತ್ತಡ ಭರಿತ ಕೆಲಸ ಮಾಡಿ ಹೈರಾಣಾಗಿ ಸಂಜೆ ಮನೆಗೆ ಬರುವವರೆಗೂ ಗೋಳಾಟ ಇದ್ದಿದ್ದೆ. ಇದರಿಂದಾಗಿ ಜನರು ನಿತ್ಯ ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ.

ಅವರು ಹಿಂದೊಮ್ಮೆ ಊಹಿಸಿದಂತೆ ತಾನು ಉದ್ಯೋಗ ಮಾಡಿಕೊಂಡು, ಮದುವೆ ಆಗಿ ದುಡ್ಡು ಸಂಪಾದಿಸುತ್ತ ಆರಾಮಾಗಿ ಜೀವನ ನಡೆಸಬಹುದು ಎಂಬ ಆಲೋಚನೆ ಊಹಿಸಿದಷ್ಟು ಸುಲಭವಾಗಿಲ್ಲ ಎಂಬ ಮನವರಿಕೆ ಆಗುತ್ತಿದ್ದಂತೆ ಬಳಲಿ ಬೆಂಡಾಗುತ್ತಿದ್ದಾನೆ.

ಏನೇ ಮಾಡಿದರೂ ಜೀವಕ್ಕೆ ಸಮಾಧಾನ ಎಂಬುದು ಇಲ್ಲವೇ ಇಲ್ಲ ಎಂಬಂತಾಗಿದೆ ಪರಿಸ್ಥಿತಿ. ಹೀಗೆ ನಿತ್ಯ ಸಂಕಟಪಡುವ ಜೀವನದಲ್ಲಿ ಮದ್ಯಪಾನ ಎಂಬುದು ತಾತ್ಕಾಲಿಕ ಸಮಾಧಾನ ಸಿಗುವಂತೆ ಮಾಡುವುದರಲ್ಲೀ ಸಂಶಯವೇ ಇಲ್ಲ.

ಏಕೆಂದರೆ ಅದು ಮೊದಲೇ ಅಲ್ಕೋಹಾಲ್, ಖಂಡಿತ ಅದು ರಕ್ತದಲ್ಲಿ ಸೇರಿಕೊಂಡು ಕೆಲ ಕಾಲ ವ್ಯಕ್ತಿಯೊಬ್ಬ ಅಮಲಿನಲ್ಲಿ ತೇಲುವಂತೆ ಮಾಡುತ್ತದೆ. ನರಮಂಡಲದ ಮೇಲೆ ಅದರ ಪ್ರಭಾವ ಎಷ್ಟಾಗುತ್ತದೆ ಎಂದರೆ ವಾಸ್ತವದಲ್ಲಿರುವ ಕಷ್ಟಕಾರ್ಪಣ್ಯಗಳೆಲ್ಲ ಏನೂ ಅಲ್ಲವೇ ಅಲ್ಲ ಎಂಬಂತಹ ಸಮಾಧಾನ ಸಿಕ್ಕಂತಾಗುತ್ತದೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿದಾಗ.

ಅಸಲಿಯತ್ತಲ್ಲಿ ವ್ಯಕ್ತಿಯೊಬ್ಬನಿಗೆ ಒತ್ತಡದ ಜೀವನದಲ್ಲಿ ಇದೇ ರೀತಿಯ ಸಮಾಧಾನದ ಹುಡುಕಾಟವಿರುತ್ತದೆ, ಆದರೆ ಅದು ಮದ್ಯಪಾನದಿಂದ ದಿಢೀರ್ ಆಗಿ ಸಿಕ್ಕಾಗ ಅವನಿಗೆ ಇದೇ ಉತ್ತಮವಾದುದು ಎಂಬುದು ಮನಸ್ಸಿನಲ್ಲಿ ಗಟ್ಟಿಯಾಗುತ್ತ ಸಾಗುತ್ತದೆ.

ಇಲ್ಲೇ ನೋಡಿ ಆಗ ವ್ಯಕ್ತಿಯ ಜೀವನದಲ್ಲಿ ನಿಧಾನವಾಗಿ ಮದ್ಯಪಾನ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತ ಸಾಗುತ್ತದೆ. ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿ ಕ್ರಮೇಣ ನಿತ್ಯ ಅದರ ಗೀಳಲ್ಲಿ ಬೀಳಲು ಪ್ರಾರಂಭಿಸುತ್ತಾನೆ. ಮಡದಿಗೆ ಅಥವಾ ಮನೆಯ ಇತರೆ ಸದಸ್ಯರಿಗೆ ವ್ಯಕ್ತಿಯ ಈ ಚಟ ಗೊತ್ತಾದಾಗ (ಒಂದಿಲ್ಲ ಒಂದು ದಿನ ಖಂಡಿತ ಗೊತ್ತಾಗುತ್ತದೆ) ಆಗ ನೋಡಿ ಪ್ರಾರಂಭವಾಗುತ್ತದೆ ನಿತ್ಯ ಮತ್ತೊಂದು ಬಗೆಯ ಜಗಳ ಮನೆಯಲ್ಲಿ.

ಮೊದಲೇ ಜೀವನ ನಡೆಸುವ, ಹಣಗಳಿಸುವ, ಕಚೇರಿ ಕೆಲಸ ನಿರ್ವಹಿಸುವ, ಇಎಂಐ ಕಟ್ಟುವ, ಬಾಡಿಗೆ ಭರಿಸುವ ಒತ್ತಡಗಳು ಒಂದೆಡೆಯಾದರೆ ಇದೀಗ ಹೊಸದಾಗಿ ಅಂಟಿಕೊಂಡ ಮದ್ಯಪಾನದ ಚಟದಿಂದ ಮನೆಯಲ್ಲಿರುವ ಕನಿಷ್ಠ ಮಾನಸಿಕ ಶಾಂತಿಯೂ ಹದಗೆಡಲು ಪ್ರಾರಂಭಿಸುತ್ತದೆ. ಇವೆರಡರಿಂದಲೂ ಪಾರಾಗುತ್ತೇನೆಂಬ ಮೂಢನಂಬಿಕೆಯಿಂದ ಆ ವ್ಯಕ್ತಿ ಮತ್ತೆ ಮತ್ತೆ ಮದ್ಯಪಾನದ ಚಟಕ್ಕೆ ಅಂಟಿಕೊಳ್ಳುತ್ತ ಸಾಗುತ್ತಾನೆ, ದಿನವಿಡಿ ಅಮಲಿನ ಶಾಂತಿಯಲ್ಲಿ ತೇಲಾಡುತ್ತಾನೆ….ಎಲ್ಲವೂ ಚೆನ್ನಾಗಿದೆ ಎಂಬ ಸುಳ್ಳು ಭರವಸೆಯನ್ನು ತನ್ನಷ್ಟಕ್ಕೆ ತಾನೇ ನೀಡಿಕೊಳ್ಳುತ್ತ ತನ್ನ ಚಟವನ್ನು ಸಮರ್ಥಿಸಿಕೊಳ್ಳುತ್ತ ಸಾಗುತ್ತಾನೆ…..ಆದರೇ ಇದು ನಡೆಯುವುದು ಎಲ್ಲಿಯವರೆಗೆ?

ಖಂಡಿತ ಈ ಹಾದಿಗೆ ಯಾವುದೇ ಗುರಿಯಾಗಲಿ, ಗಮ್ಯಸ್ಥಾನವಗಲಿ ಇಲ್ಲ….ಬದಲಿಗೆ ಮುಂದೆ ಸಾಗಿದಂತೆ ಅಲ್ಲಿ ಒಂದು ದೊಡ್ಡ ಕಂದಕ ಮಾತ್ರವಿದೆ….ಆರೋಗ್ಯ ಹಾಳು ಒಂದೆಡೆಯಾದರೆ, ಹಣದ ಪೋಲು ಇನ್ನೊಂದೆಡೆ…ಅಲ್ಲದೆ ಹೆಂಡತಿ ಹಾಗೂ ಇತರೆ ಕುಟುಂಬ ಸದಸ್ಯರು ನಿಮ್ಮಿಂದ ದೂರವಾಗಬಹುದು. ನಂತರ ಎಲ್ಲವೂ ಅಂತ್ಯವೆಂಬಂತಾಗುತ್ತದೆ ಜೀವನ…ಹಾಗಾದರೆ ಇದನ್ನು ಸರಿಪಡಿಸಬಹುದೇ?

ಹೌದು, ಸರಿಪಡಿಸಬಹುದು….

ಒಮ್ಮೆ ನಿಧಾನವಾಗಿ ಕುಳಿತು ಮುಂದೆ ಆಗಬಹುದಾದ ಘಟನೆಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ಅವಲೋಕಿಸಿ. ನಿಮಗೆ ಬೆಕಾಗಿರುವುದು ಅಮಲಿನ ಜೀವನವಾದರೂ ಆ ಅಮಲು ಎಂಬುದು ಮಡದಿಯ ಪ್ರೀತಿಯಿಂದ, ಸಹೋದರ-ಸಹೋದರಿಯರ ತಮಾಷೆ ಮಾತುಗಳಿಂದ, ಅಪ್ಪ-ಅಮ್ಮಂದಿರ ಅಕ್ಕರೆಯಿಂದ ಅಥವಾ ಸ್ನೇಹಿತರ ಪ್ರೀತಿಪೂರ್ವಕ ಕೀಟಲೆಗಳಿಂದ ಬರಬೇಕೇ ಹೊರತು ಮದ್ಯಪಾನದಿಂದಲ್ಲ ಎಂಬ ಅರಿವನ್ನು ಮೂಡಿಸಿಕೊಳ್ಳಿ.

ಸಂಯಮ, ತಾಳ್ಮೆ, ಸಹನೆ ಎಂಬ ಗುಣಗಳ ಮಹತ್ವ ತಿಳಿದು ಅದನ್ನು ನಿಮ್ಮೊಳಗೆ ಮೈಗೂಡಿಸಿಕೊಳ್ಳಿ. ಮದ್ಯಪಾನದ ಅಮಲು ತಾತ್ಕಾಲಿಕ ಹಾಗೂ ವಿನಾಶಕಾರಿ ಎಂಬುದನ್ನು ಅರಿತು ಮೊದಲೇ ಎಚ್ಚೆತ್ತುಕೊಳ್ಳಿ. ಇಂದ್ರೀಯ ನಿಗ್ರಹಣ ಎಂಬುದು ತಪಸ್ಸಿದ್ದಂತೆ….ಅದನ್ನು ಛಲದಿಂದ ಪ್ರಯತ್ನಿಸಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮೊಬೈಲ್ ಗೀಳನ್ನು ಮೊದಲು ಬಿಡಿಸಿಕೊಳ್ಳಿ, ರಾತ್ರಿ ಮಲಗುವಾಗ ಅಥವಾ ಬೆಳಗ್ಗೆ ಎದ್ದಾಗ ಮೊಬೈಲ್ ನೋಡಲ್ಲ ಎಂಬ ಪ್ರತಿಜ್ಞೆ ಮಾಡಿಕೊಳ್ಳಿ. ನಿಮ್ಮ ಕೆಲಸಕ್ಕನುಗುಣವಾಗಿ ಅಥವಾ ನಿಮ್ಮ ಬಳಿ ಸ್ವಲ್ಪ ಸಮಯ ಇದೆ ಎಂದಾಗ ಮಾತ್ರ ಉತ್ತಮ, ಚಿಂತನಶೀಲ, ಆಧ್ಯಾತ್ಮಿಕ, ಶುದ್ಧ ಮನರಂಜನೆಯ ಅಥವಾ ಜ್ಞಾನಾರ್ಜನೆಯ ವಿಡಿಯೋಗಳನ್ನಷ್ಟೇ ನೋಡಿ.

ಮೊಬೈಲ್ ನಿಮ್ಮ ಅಂಗೈಯಲ್ಲೇ ಇರಬಹುದಾದರೂ ನಿಮ್ಮ ಜೀವನ ನಿಮ್ಮ ಕೈಯಲ್ಲೇ ಎಂಬುದನ್ನು ಮಾತ್ರ ಮರೆಯಬೇಡಿ…..

Leave a Reply

Your email address will not be published. Required fields are marked *