ತುಳಸಿದಾಸರಿಗೆ ರಾಮನೊಲಿದ ಪ್ರಸಂಗ

ತುಳಸಿದಾಸ

ಭಾರತದಲ್ಲಿ ತುಳಸಿದಾಸ ಹೆಸರು ಸಾಕಷ್ಟು ಚಿರಪರಿಚಿತ. ಅವರು ಪ್ರಸಿದ್ಧ ಸಂತ ಹಾಗೂ ದಾರ್ಶನಿಕರಲ್ಲಿ ಒಬ್ಬರು. ಮೊದಲು ರಾಮ್ ಬೋಲಾ ಎಂಬ ಹೆಸರು ಹೊಂದಿದ್ದ ಅವರು ತುಳಸಿದಾಸ ರಾದ ಪ್ರಸಂಗ ತುಂಬ ಸ್ವಾರಸ್ಯಕರವಾಗಿದೆ. ಓದಿ.

ಈ ಕಥೆಯನ್ನು ವಿಡಿಯೋ ಮೂಲಕ ಕೇಳಿ

ಭಾರತ ದೇಶದ ಉತ್ತರ ಪ್ರದೇಶದ ರಾಜಾಪುರ ಜಿಲ್ಲೆಯಲ್ಲಿ, ಪರಾಶರ ಗೋತ್ರದ ಬ್ರಾಹ್ಮಣ ಕುಟುಂಬವೊಂದರಲ್ಲೊ ಆತ್ಮರಾಮ್ ಹಾಗೂ ಹುಲ್ಸಿ ದಂಪತಿಗಳ ಮಗನಾಗಿ ತುಳಸಿದಾಸರು ಜನಿಸಿದರು. ಹುಟ್ಟಿದಾಗಲೇ ಅವರ ಬಾಯಲ್ಲಿ ಹಲ್ಲುಗಳಿತ್ತು ಮತ್ತು ಅವರು ರಾಮ ಎಂಬ ಶಬ್ದ ಉಚ್ಛರಿಸಿದ್ದರು. ಹಾಗಾಗಿ ಅವರಿಗೆ ‘ರಾಮ್ ಭೊಲಾ’ ಎಂದು ಹೆಸರಿಟ್ಟರು.

ರಾಮ್ ಭೋಲಾ ಮಗುವಾಗಿರುವಾಗಲೇ ಅವರ ತಂದೆ ತಾಯಿ ಸ್ವರ್ಗಸ್ಥ ರಾದರು. ತದನಂತರ ‘ಚುನಿಯಾ’ ಎಂಬ ಮಹಿಳೆ ಅವರ ಸಾಕು ತಾಯಿಯಾಗಿ ಲಾಲನೆ ಪಾಲನೆ ಮಾಡಿದರು. ದುರದೃಷ್ಟಕ್ಕೆ ರಾಮ್ ಭೋಲಾ ಐದು ವರ್ಷದವರಾಗುತ್ತಿದ್ದಂತೆಯೇ ಅವರ ಸಾಕು ತಾಯಿ ಸಹ ತೀರಿ ಹೋದರು.

ಆನಂತರ ವೈಷ್ಣವ ಪಂಥದ ಸಂತರಾದ ನರಹರಿದಾಸರು ರಾಮ್ ಭೋಲಾರನ್ನು ಪಡೆದು ಅವರನ್ನು ಪೋಷಿಸಿದರು. ಈ ಮಧ್ಯೆ ಅವರು ರಾಮ್ ಭೋಲಾನಿಗೆ ಉಪನಯನ ಮಾಡಿ ವಿದ್ಯಾರ್ಜನೆಯನ್ನೂ ಗೈದರು.

ಹೀಗೆ ಬೆಳೆದು ಯುವಕರಾದ ಮೇಲೆ ರಾಮ್ ಭೋಲಾ ಅವರ ವಿವಾಹ ತುಳಸಿ ಎಂಬ ಕನೆಯೊಂದಿಗೆ ಜರುಗಿತು. ರಾಮ್ ಭೋಲಾರಿಗೆ ತುಳಸಿ ಅಂದರೆ ಬಲು ಪ್ರೀತಿ. ಅದರಂತೆ ತುಳಸಿಯೂ ಸಹ ರಾಮ್ ಭೋಲಾರಿಗೆ ಆದರ್ಶ ಪತ್ನಿಯಾಗಿ ಎಲ್ಲ ಸೇವೆಗಳನ್ನು ಮಾಡುತ್ತಿದ್ದರು. ಅವರಿಗೆ ಏನು ಬೇಕು, ಏನು ಬೇಡ ಎಂಬುದನ್ನು ತಿಳಿದಿದ್ದ ತುಳಸಿ ಎಲ್ಲವನ್ನೂ ಚಾಚು ತಪ್ಪದೆ ಮಾಡುತ್ತಿದ್ದಳು. ರಾಮ್ ಭೋಲಾರಿಗೆ ಇದು ಬಹಳ ಸಂತೋಷ ನೀಡಿತ್ತು.

ಹೀಗಿರುವಾಗ ಒಮ್ಮೆ ತುಳಸಿ ತನ್ನ ತವರು ಮನೆಗೆ ತೆರಳಿದ್ದಳು. ಸ್ವಲ್ಪ ಸಮಯ ಕಳೆದ ನಂತರ ರಾಮ್ ಭೋಲಾರಿಗೆ ತನ್ನ ಮಡದಿ ತುಳಸಿಯ ನೆನಪು ಕಾಡತೊಡಗಿತು. ರಾತ್ರಿಯಾಗುವವರೆಗೆ ಅವರಲ್ಲಿ ಚಡಪಡಿಕೆ ಉಂಟಾಯಿತು. ಇನ್ನು ತಾನು ತನ್ನ ಮಡದಿಯನ್ನು ಬಿಟ್ಟಿರಲಾರೆ ಎಂಬ ಅರಿವಾಯಿತು.

ಅದಕ್ಕಾಗಿ ಅದೇ ಗ್ರಾಮದ ಯಮುನಾ ನದಿಯ ಆಚೆ ದಡದಲ್ಲಿದ್ದ ತನ್ನ ಹೆಂಡತಿಯ ಮನೆಗೆ ಹೋಗಲು ನಿರ್ಧರಿಸಿಯೇ ಬಿಟ್ಟರು. ಆದರೆ ಆ ರಾತ್ರಿ ಜೋರಾಗಿ ಮಳೆ ಸುರಿಯುತ್ತಿತ್ತು. ಮಳೆಯನ್ನೂ ಲೆಕ್ಕಿಸದೆ ಅವರು ಯಮುನೆಯ ಹತ್ತಿರ ಬಂದಾಗ ಆ ಗಾಢ ರಾತ್ರಿಯಲ್ಲಿ ಯಾವ ತೆಪ್ಪವೂ ಇರಲಿಲ್ಲ. ಅಲ್ಲದೆ ಯಮುನೆಯು ತುಂಬಿ ಹರಿಯುತ್ತಿದ್ದಾಳೆ. ಅದೊಂದು ಭಯಂಕರ ರಾತ್ರಿಯಾಗಿತ್ತು. ಯಾರೂ ಸಹ ಆ ರಾತ್ರಿ ಹೊರಗೆ ಒಂದು ಹೆಜ್ಜೆ ಹಾಕಲು ಧೈರ್ಯ ಮಾಡುತ್ತಿರಲಿಲ್ಲ.

ಆದರೆ ರಾಮ್ ಭೋಲಾರಿಗೆ ಮಡದಿ ಭೇಟಿ ಮಾಡುವ ತುಡಿತ ಹೆಚ್ಚಾಗುತ್ತಲೇ ಇತ್ತು. ಯಮುನೆಯ ಭಯಂಕರ ರೂಪವನ್ನೂ ಸಹ ಗಮನಿಸದೆ ಅವರು ನದಿಯಲ್ಲಿ ಹಾರಿ ಈಜುತ್ತ ತಮ್ಮ ಮಡದಿಯ ಮನೆ ಬಳಿ ಬಂದೇ ಬಿಟ್ಟರು. ತುಳಸಿಯ ಕೋಣೆ ಮೇಲಿದ್ದರಿಂದ ಕಿಟಕಿಯ ಮೂಲಕ ಹೋಗಲು ನಿರ್ಧರಿಸಿ ಅಲ್ಲಿಯೇ ಜೋತಾಡುತ್ತಿದ್ದ ಹಗ್ಗವೊಂದನ್ನು ಹಿಡಿದು ಕಿಟಕಿಯ ಮೂಲಕ ಮನೆ ಪ್ರವೇಶಿಸಿ ತುಳಸಿ ಇದ್ದ ಕೋಣೆಯ ಕದ ತಟ್ಟಿದರು.

ಈ ಸಮಯದಲ್ಲಿ ಯಾರು ಬಂದಿರಬಹುದು ಎಂದು ಗಾಬರಿಯಿಂದ ತುಳಸಿ ಬಾಗಿಲು ತೆಗೆದು ನೋಡಿದಾಗ ಪತಿ ಒದ್ದೆ ಬಟ್ಟೆಯಲ್ಲಿ ನಿಂತಿದ್ದು ಕಂಡಿತು.. ಈ ದೃಶ್ಯ ನೋಡಿ ಒಂದು ಕ್ಷಣ ಆವಾಕ್ಕಾದ ತುಳಸಿ ಚೇತರಿಸಿಕೊಳ್ಳುತ್ತ ಈ ಗಾಢ ರಾತ್ರಿಯಲ್ಲಿ ತುಂಬಿದ ನದಿ ದಾಟಿ ಯಾಕೆ ಬಂದಿರಿ ಎಂದಾಗ? ರಾಮ್ ಭೋಲಾ ಅವರು ನಿನ್ನ ಬಿಟ್ಟು ಇರಲು ಸಾಧ್ಯವಾಗಲಿಲ್ಲ, ಮನ ಚಡಪಡಿಸುತ್ತಿತ್ತು..ಅದನ್ನು ತಾಳಲಾರದೆ ನಿನ್ನ ನೋಡಲು ಬಂದೆ ಎಂದರು.

ಇದಕ್ಕೆ ಸಾಧ್ವಿಯಾದ ತುಳಸಿಯು ಸಹಜವಾಗಿ, ಅಯ್ಯೋ ನನ್ನನ್ನು ನೋಡಲು ಇಂತಹ ರಾತ್ರಿಯ ಸುರಿಯುವ ಮಳೆಯಲ್ಲಿ ನದಿ ದಾಟಿ ಬಂದಿರಲ್ಲ ಏನು ಹೇಳಬೇಕು ನಿಮಗೆ? ಇದಕ್ಕಿಂತ ರಾಮ ರಾಮ ಎಂದು ರಾಮನನ್ನು ಹುಡುಕಿಕೊಂಡು ಹೋಗಿದ್ದರೆ ನೀವು ಭವಸಾಗರವನ್ನೇ ದಾಟಿ ಬಿಡುತ್ತಿದ್ದಿರಿ ಎಂದಳು.

ರಾಮ್ ಭೋಲಾನ ಜೀವನದಲ್ಲಿ ಈ ಕ್ಷಣವೇ ಪರಿವರ್ತನಾ ಸಮಯವಾಯಿತು. ತುಳಸಿ ಹೇಳಿದ ರಾಮನನ್ನು ಹುಡುಕಿಕೊಂಡು ಹೋಗಿದ್ದರೆ ಭವಸಾಗರವನ್ನೇ ದಾಟುತ್ತಿದ್ದಿರಿ ಎಂಬ ಮಾತುಗಳೇ ಭೋಲಾನ ತಲೆಯಲ್ಲಿ ಬರಿ ಸಿಡಿಲಿನಂತೆ ಕೇಳತೊಡಗಿದವು. ಏನೋ ಸಾಕ್ಷಾತ್ಕಾರ ಅವರಲ್ಲಿ ಆಯಿತು.

ನಂತರ ಅವರು ತುಳಸಿ ಬಳಿಗೆ ಬಂದು ಹೇಳಿದರು ಇನ್ನು ಮುಂದೆ ನಾನು ನಿನ್ನ ದಾಸ ‘ತುಳಸಿದಾಸ’ ನೀನು ನನ್ನ ಕಣ್ತೆರೆಸಿದೆ. ಹೀಗೆ ಹೇಳಿದ ಅವರು ಮರುಮಾತನಾಡದೆ ಹಾಗೆಯೇ ಹೊರಟುಬಿಟ್ಟರು. ತುಳಸಿ ಹಾಗೆ ಹೊರಟ ಪತಿಯ ಹಿಂದೆ ಓಡಿದಳು ಆದರೆ ಅವರಾಗಲೇ ಕತ್ತಲಲ್ಲಿ ದೂರ ಸಾಗಿದ್ದರು. ಈ ಮಧ್ಯೆ ತುಳಸಿ ಕೆಳಗೆ ಹಾವು ಬಿದ್ದಿರುವುದನ್ನು ನೋಡಿದಳು. ಇದೇ ಹಾವನ್ನೇ ಹಗ್ಗ ಎಂದು ಹಿಡಿದು ತನ್ನ ಪತಿ ಮಹಡಿ ಮೇಲೆ ಬಂದಿದ್ದರು ಎಂಬುದು ಅವಳಿಗೆ ಅರಿವಾಗಿತ್ತು.

ಹೀಗೆ ತುಳಸಿದಾಸರಾದ ರಾಮ್ ಭೋಲಾ ನೇರವಾಗಿ ಪ್ರಯಾಗಕ್ಕೆ ಬಂದರು. ಅಲ್ಲಿ ಗೃಹಸ್ಥಾಶ್ರಮವನ್ನು ತ್ಯಜಿಸಿ ಸನ್ಯಾಸಾಶ್ರಮ ಸ್ವೀಕರಿಸಿದರು. ತೀರ್ಥಕ್ಷೇತ್ರಗಳನ್ನು ಸಂಚರಿಸುತ್ತಾ, ಜನಗಳಿಗೆ ರಾಮ ನಾಮದ ಮಹಿಮೆಯನ್ನು ತಿಳಿಸಿ, ಜನರಿಗೆ ಭಕ್ತಿ ಪಂಥದ ಮಾರ್ಗವನ್ನು ತೋರಿಸುತ್ತಾ ಕಾಶಿಗೆ ಬಂದರು.

ಅಲ್ಲಿ ಅರಳಿ ಮರದ ಕಟ್ಟೆಯ ಮೇಲೆ ಕುಳಿತು ಶ್ರೀ ರಾಮನ ಪ್ರವಚನ ಮಾಡಿ ರಾಮ ಮಹಿಮೆಯನ್ನು ಜನಗಳಿಗೆ ತಿಳಿಸುತ್ತಿದ್ದರು. ರಾಮ ಪ್ರವಚನಕ್ಕೆ ಕೂರುವ ಮೊದಲು, ನಿತ್ಯ ಕರ್ಮ ಆಚಮನ, ಸಂಧ್ಯಾ ವಂದನೆ ಯನ್ನು ಮಾಡಿ ಪಾತ್ರೆಯಲ್ಲಿದ್ದ ನೀರನ್ನು ಆ ಅರಳಿ ಮರಕ್ಕೆ ಎರಚುತ್ತಿದ್ದರು.

ಹೀಗೆ ಪ್ರತಿನಿತ್ಯ ತಮ್ಮ ಕಾರ್ಯಗಳನ್ನು ಮಾಡುತ್ತ ಒಂದು ವರ್ಷ ಕಳೆದರು. ಒಂದೊಮ್ಮೆ ಅರಳಿ ಮರದ ಕೆಳಗೆ ಕುಳಿತಾಗ ಮರದಿಂದ ಕೆಳಗೆ ದೊಪ್ಪನೆ ಎಂದು ಬ್ರಹ್ಮ ರಾಕ್ಷಸವೊಂದು ಕೆಳಗೆ ಬಿದ್ದಿತು. ತುಳಸಿದಾಸರು ಅದನ್ನು ನೋಡಿ ಯಾರೆಂದು ಕೇಳಿದಾಗ ಆ ರಾಕ್ಷಸ ನಾನು ಶಾಪದ ಪ್ರಯುಕ್ತ ಬ್ರಹ್ಮ ರಾಕ್ಷಸನಾಗಿ ಈ ಅರಳಿ ಮರ ಸೇರಿದ್ದೆ. ಸಂಧ್ಯಾವಂದನೆ ಮಾಡಿದ ಪುಣ್ಯ ಜಲ ಒಂದು ವರ್ಷ ಕಾಲ ಈ ಮರಕ್ಕೆ ಬಿದ್ದರೆ ನನ್ನ ಬ್ರಹ್ಮ ರಾಕ್ಷಸತ್ವ ಹೋಗಿ ಶುದ್ಧ ದೇಹ ಸೇರಬಹುದು ಎಂಬ ವರವಿತ್ತು.

ಅದು ನಿಮ್ಮಿಂದ ಆಯಿತು, ನಿಮ್ಮಿಂದ ಆ ಭಾಗ್ಯ ನನಗೆ ಲಭಿಸಿತು, ನಿಮಗೆ ನನ್ನಿಂದ ಏನು ಸಹಾಯ ಬೇಕು ಕೇಳಿ ಎಂದಿತು. ತುಳಸಿದಾಸರಿಗೆ ಹೆಂಡತಿ ಮಾತು ನೆನಪಾಗಿ ನನಗೆ ರಾಮನನ್ನು ತೋರಿಸು ಎಂದರು.

ಆ ಪ್ರೇತಾತ್ಮ ಇದನ್ನು ಕೇಳಿ ಹೌಹಾರಿತು. ನಾನೇ ಶಾಪ ಗ್ರಸ್ತನಾಗಿದ್ದೆ. ಪೂರ್ವ ಜನ್ಮದ ಪುಣ್ಯದಿಂದ ಈ ಶಾಪ ಹೋಗಿದೆ. ಇಂಥ ನಾನು ನಿಮಗೆ ರಾಮನ ದರ್ಶನ ಹೇಗೆ ಮಾಡಿಸಲಿ ಎಂದಿತು. ಹಾಗಾದರೆ ಏನು ಬೇಡ ಎಂದರು ತುಳಸಿದಾಸರು.

ಆದರೂ ಪ್ರೇತಾತ್ಮ ಏನಾದರೂ ಮಾಡಬೇಕೆಂದು ಯೋಚಿಸಿ, ಆಂಜನೇಯನ ಮೂಲಕ ರಾಮನ ದರ್ಶನ ಮಾಡಿರಿ ಎಂದಿತು. ಆಂಜನೇಯ ಯಾವಾಗಲೂ ನಿಮ್ಮ ಪ್ರವಚನದ ವೇಳೆ ಎಲ್ಲರಿಗಿಂತ ಮೊದಲು ಬರುತ್ತಾನೆ ಎಲ್ಲರಿಗಿಂತಲೂ ಕಡೆಯಲ್ಲಿ ಹೋಗುತ್ತಾನೆ ಎಂದಿತು.

ಮರುದಿನ ತುಳಸಿದಾಸರು ಆಂಜನೇಯನಿಗಾಗಿ ಕಾಯುತ್ತಾ ಕುಳಿತರು. ಪ್ರವಚನ ಆರಂಭ ವಾಗುವ ಮೊದಲೇ ಒಬ್ಬ ವೃದ್ಧ ಬ್ರಾಹ್ಮಣ ಬಂದು ಕುಳಿತನು. ಪ್ರವಚನ ಮುಗಿಯುತ್ತಿದ್ದಂತೆ ಬ್ರಾಹ್ಮಣ ಹೊರಟನು. ಅವನೇ ಆಂಜನೇಯನೆಂದು ತಿಳಿದ ತುಳಸಿದಾಸರು ಅವನ ಹಿಂದೆ ಹೋದರು. ಇನ್ನೇನು ಆ ವೃದ್ಧ ಮಾಯವಾಗಬೇಕು ಎನ್ನುವಾಗ ಹಿಂದಿನಿಂದ ಅವನ ಕಾಲು ಹಿಡಿದ ತುಳಸಿದಾಸರು ಆಂಜನೇಯ ನನಗೆ ರಾಮನನ್ನು ತೋರಿಸು ಎಂದರು.

ನಾನು ಆಂಜನೇಯನಲ್ಲ ನಿಮ್ಮ ಪ್ರವಚನ ಕೇಳಲು ಬಂದಿರುವೆ ಅಷ್ಟೇ ಎಂದನು ಆ ವೃದ್ಧ. ಆದರೂ ತುಳಸಿದಾಸರು ಪಟ್ಟು ಬಿಡದೆ ಸ್ವಾಮಿ ನಿಮ್ಮ ದರ್ಶನ ಭಾಗ್ಯ ಕೊಡು ಎಂದು ಪರಿ ಪರಿಯಾಗಿ ಬೇಡಿದರು. ಅವರ ಭಕ್ತಿಗೆ ಮೆಚ್ಚಿದ ಆಂಜನೇಯ ತನ್ನ ನಿಜ ಸ್ವರೂಪ ತೋರಿಸಿದ. ಹೀಗೆ ಆಂಜನೇಯನ ದರುಶನ ಪಡೆದು ಪುನೀತರಾದ ತುಳಸಿದಾಸರು ನನಗೆ ದಯವಿಟ್ಟು ರಾಮನ ದರ್ಶನ ಮಾಡಿಸು ಎಂದು ಬೇಡಿಕೊಂಡರು.

ಇದಕ್ಕೆ ಸಮ್ಮತಿಸಿದ ಆಂಜನೇಯ ತುಳಸಿದಾಸರಿಗೆ ಚಿತ್ರಕೂಟ ಪರ್ವತಕ್ಕೆ ಹೋಗು ಅಲ್ಲಿ ರಾಮನ ದರ್ಶನವಾಗುತ್ತದೆ ಎಂದು ಹೇಳಿ ಅದೃಶ್ಯನಾದನು.

ತುಳಸಿದಾಸರು ಚಿತ್ರಕೂಟ ಪರ್ವತಕ್ಕೆ ತೆರಳಿದರು. ಅಲ್ಲಿ ಮಂದಾಕಿನಿ ನದಿ ಹರಿಯುತ್ತಿತ್ತು. ಪಕ್ಕದಲ್ಲೆ ಇದ್ದ ಕಮಲಗಿರಿ ಪರ್ವತವನ್ನು ದಾಸರು ಏರುವಾಗ ಅವರ ಎದುರಿಗೆ ಇಬ್ಬರು ಬಾಲಕರು ಕುದುರೆಯ ಮೇಲೆ ಹೋಗುತ್ತಿದ್ದುದನ್ನು ನೋಡಿದರು.

ಆ ರಾತ್ರಿ ಆಂಜನೇಯ ಕನಸಿನಲ್ಲಿ ಬಂದು ರಾಮನ ದರ್ಶನವಾಯಿತೇ ಎಂದು ತುಳಸಿದಾಸರನ್ನು ಕೇಳಿದಾಗ ತುಳಸಿದಾಸರು ಇಲ್ಲ ಎಂದರು. ಆಗ ಆಂಜನೇಯ ಕುದುರೆಯ ಮೇಲೆ ಬಂದ ಬಾಲಕರೇ ರಾಮ ಲಕ್ಷ್ಮಣರು ಎಂದನು. ಇದನ್ನು ಕೇಳಿದ ದಾಸರಿಗೆ ತುಂಬಾ ದುಖವಾಯಿತು. ತನ್ನ ಅಸಹಾಯಕತೆಯನ್ನು ಆಂಜನೇಯನ ಮುಂದೆ ತೋಡಿಕೊಂಡರು. ಆಗ ಆಂಜನೇಯ ಚಿಂತಿಸದಿರು ರಾಮನು ಇನ್ನೊಮ್ಮೆ ನಿಮಗೆ ದರ್ಶನ ಕೊಡುತ್ತಾನೆ ಎಂದನು.

ಮರುದಿನ ತುಳಸಿದಾಸರು ಗಂಧ ತೇಯುತ್ತಾ ಕುಳಿತಿದ್ದರು. ಹುಡುಗರಾದ ರಾಮ ಲಕ್ಷ್ಮಣರು ತುಳಸಿದಾಸರ ಬಳಿ ಬಂದು ನಮಗೆ ಗಂಧ ಕೋಡಿ ಎಂದು ಕೇಳಿದರು. ದಾಸರಿಗೆ ತಕ್ಷಣವೇ ಅವರು ರಾಮ ಲಕ್ಷ್ಮಣರು ಎಂದು ತಿಳಿಯಿತು.

ರಾಮನು ಹಣೆಗೆ ಗಂಧದ ತಿಲಕ ಧರಿಸಿ, ದಾಸರಿಗೂ ಗಂಧದ ತಿಲಕ ಇಟ್ಟನು. ರಾಮನ ದರ್ಶನ ಮಾಡಿದ ಅವರು ಆನಂದದಿಂದ ಸಮಾಧಿ ಸ್ಥಿತಿಗೆ ಜಾರಿದರು. ಆಂಜನೇಯನೇ ಅವರನ್ನು ಸಾಮಾನ್ಯ ಸ್ಥಿತಿಗೆ ತಂದನು.

ಹೀಗೆ ರಾಮನ ದರ್ಶನ ಪಡೆದು ಕೃತಾರ್ಥರಾದ ತುಳಸಿದಾಸರು ಮುಂದೆ ಅನೇಕ ಪವಾಡಗಳನ್ನು ಮಾಡಿದರು. ರಾಮಾಚರಿತ ಮಾನಸ, ತುಳಸಿ ರಾಮಾಯಣ, ಹನುಮ ಚರಿತ ಹೀಗೆ ಹಲವಾರು ಕೃತಿ ಗಳನ್ನು ರಚಿಸಿದರು.

ಇಂದಿಗೂ ಉತ್ತರ ಭಾರತದಲ್ಲಿ ‘ತುಳಸಿ ರಾಮಾಯಣ’ ವನ್ನು ಪ್ರತಿ ಮನೆಯಲ್ಲೂ ಪಠಣ ಮಾಡುತ್ತಾರೆ.

ಬರಹ:- ಆಶಾ ನಾಗಭೂಷಣ

Leave a Reply

Your email address will not be published. Required fields are marked *