ಶೇಂಗಾ ಉಂಡಿ (ಕಡಲೆ ಬೀಜದ ಲಡ್ಡು) ತಿನ್ನಬೇಕೆ? ಹೀಗೆ ಫಟಾ ಫಟ್ ಮಾಡಿ

ಶೇಂಗಾ ಉಂಡಿ (ಕಡಲೆ ಬೀಜದ ಲಡ್ಡು) ಸಾಕಷ್ಟು ಪೋಷಕಾಂಶಯುಕ್ತ ಹಾಗೂ ಕಿರಿಯರಿಂದ ಹಿರಿಯರವರೆಗೂ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವ ಅದ್ಭುತ ತಿನಿಸಾಗಿದೆ. ಬನ್ನಿ ಅದನ್ನು ಹೇಗೆ ಮಾಡೋದು ಎಂಬುದನ್ನು ಇಲ್ಲಿ ತಿಳಿಯೋಣ.

ಕಡಲೆ ಬೀಜವನ್ನು ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಶೇಂಗಾ ಎಂದೇ ಕರೆಯುತ್ತಾರೆ. ಇದನ್ನು ಒಮ್ಮೊಮ್ಮೆ ಬಡವರ ಬಾದಾಮಿ ಎಂದೂ ಸಹ ಕರೆಯುವುದುಂಟು. ಕಾರಣ ಇದರಲ್ಲೂ ಬಾದಾಮಿಯಲ್ಲಿರುವ ಹಾಗೆಯೇ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ (ಬಾದಾಮಿಗೆ ಹೋಲಿಸಿದರೆ ಸ್ವಲ್ಪ ಕಮ್ಮಿ ಎನ್ನಬಹುದು).

Shenga Undi

ಆದರೆ ಇದರ ದರ ಬಾದಾಮಿ ಬೀಜಗಳಿಗಿಂತಲೂ ಸಾಕಷ್ಟು ಕಡಿಮೆಯಾಗಿರುವುದರಿಂದ ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿರುತ್ತದೆ. ಹಾಗಾಗಿಯೇ ಇದನ್ನು ಬಡವರ ಬಾದಾಮಿ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ.

ವಾಸ್ತವದಲ್ಲಿ ಕಡಲೆ ಬೀಜಗಳನ್ನು ಹಾಗೆಯೇ ತಿನ್ನಬಹುದು. ಇದು ತಕ್ಕಮಟ್ಟಿಗೆ ರುಚಿಕರವಾಗಿಯೂ ಇರುತ್ತದೆ. ಆದಾಗ್ಯೂ ಕೆಲ ಜನರು ಇದನ್ನು ತಿನ್ನಲು ಆಗಾಗ ಹಿಂದೇಟು ಹಾಕುವುದುಂಟು. ಇಂತಹ ಸಂದರ್ಭಗಳಲ್ಲಿ ಅವರಿಗೆ ಕಡಲೆ ಬೀಜಗಳಿಂದ ಮಾಡಿದ ಉಂಡಿ ಅಥವಾ ಲಡ್ಡು ಕೊಟ್ಟರೆ ಅವರೂ ಸಹ ಬಾಯಿ ಚಪ್ಪರಿಸಿ ಇದನ್ನು ತಿನ್ನಬಹುದು.

ಹಾಗಾದರೆ ಬನ್ನಿ, ಇಂದಿನ ರೆಸಿಪಿ ವಿಧಾನದಲ್ಲಿ ಶೇಂಗಾ ಉಂಡಿ ಅಥವಾ ಕಡಲೆ ಬೀಜದ ಲಡ್ಡುವನ್ನು ಮನೆಯಲ್ಲೇ ಅತ್ಯಂತ ಅರಳವಾಗಿ ಹೇಗೆ ತಯಾರಿಸಬಹುದು ಅನ್ನೋದನ್ನ ನೋಡೋಣ.

ಮೊದಲಿಗೆ ಇದನ್ನು ತಯಾರಿಸಲು ಬೇಕಾಗಿರುವ ಪದಾರ್ಥಗಳು ಹೀಗಿವೆ:

ಕಡಲೆ ಬೀಜ ಅಥವಾ ಶೇಂಗಾ : 1/4 ಕೆ.ಜಿ

ಬೆಲ್ಲ : 1/4 ಕೆ.ಜಿ

ಪುಠಾಣಿ ಅಥವಾ ಹುರಿಗಡಲೆ (ಅರ್ಧ ಕಪ್ ನಷ್ಟು)

ಸ್ವಲ್ಪ ಅವಲಕ್ಕಿ (ಕಲು ಕಪ್)

ಸ್ವಲ್ಪ ತುಪ್ಪ

ಮಾಡುವ ವಿಧಾನ:

* ಸಿಪ್ಪೆ ತೆಗೆದ ಶೇಂಗಾವನ್ನು ಇದರಲ್ಲಿ ಬಳಸಬೇಕು. ಮೊದಲಿಗೆ ಶೇಂಗಾ ತೆಗೆದುಕೊಂಡು ಒಂದು ಬಾಂಡಲೆಯಲ್ಲಿ ಅದನ್ನು ಚೆನ್ನಾಗಿ ಹುರಿಯಿರಿ.

* ಈ ಮಧ್ಯದಲ್ಲಿ ಬೆಲ್ಲಕ್ಕೆ, ನಿಮಗೆ ಸರಿ ಎನಿಸುವಷ್ಟು (ಪಾಕ ಆಗುವ ಹಾಗೆ) ನೀರು ಹಾಕಿ ಅದನ್ನು ಚೆನ್ನಾಗಿ ಕುದಿಸಿಟ್ಟುಕೊಳ್ಳಬೇಕು.

* ಪುಠಾಣಿ ಹಾಗೂ ಅವಲಕ್ಕಿಯನ್ನು ಹುರಿದು ಗ್ರೈಂಡ್ ಮಾಡಿಟ್ಟುಕೊಳ್ಳಬೇಕು. ಈ ಸಂದರ್ಭದಲ್ಲಿ ಹುರಿದ ಶೇಂಗಾವನ್ನು ಸಹ ಗ್ರೈಂಡ್ ಮಾಡಬೇಕು.

* ಈಗ ಬೆಲ್ಲದ ಪಾಕ ಬೆಚ್ಚಗಾದ ನಂತರ ಅದಕ್ಕೆ ಗ್ರೈಂಡ್ ಮಾಡಿಟ್ಟುಕೊಂಡ ಎಲ್ಲ ಪದಾರ್ಥಗಳಾದ ಶೇಂಗಾ, ಪುಠಾಣಿ ಹಾಗೂ ಅವಲಕ್ಕಿಯ ಪುಡಿಯನ್ನು ಸೇರಿಸಿ ಉಂಡೆ ಅಥವಾ ಲಡ್ಡು ಕಟ್ಟುವ ಹದಕ್ಕೆ ತರಬೇಕು.

* ಈಗ ನಿಮ್ಮ ಎರಡು ಕೈಗಳನ್ನು ಶುದ್ಧವಾಗಿ ಮಾಡಿಕೊಂಡು ಲಡ್ಡು ರೀತಿಯಲ್ಲಿ ಅವುಗಳನ್ನು ಕಟ್ಟಿ ಒಣಗಲು ಬಿಡಿ. ಇಷ್ಟಾದರೆ ಸಾಕು, ನಿಮ್ಮ ಶೇಂಗಾ ಅಥವಾ ಕಡಲಬೀಜದ ಉಂಡಿ ರೆಡಿ.

ಇದನ್ನು ತಯಾರಿಸುವುದು ಬಹಳ ಸುಲಭವಾಗಿದ್ದು ಶೀಘ್ರದಲ್ಲೇ ತಯಾರಿಸಬಹುದಾಗಿದೆ. ಇದು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ.

– ಮಾಧವಿ ಕುಲಕರ್ಣಿ

Leave a Reply

Your email address will not be published. Required fields are marked *