ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ : ಅಣ್ಣನಾಗಿ ಬಂದು ಹಿರಣ್ಮಯಿಯ ಮನದಾಸೆ ತೀರಿಸಿದ ಶ್ರೀ ಕೃಷ್ಣನ ಕಥೆ

Krishna

ಶ್ರೀ ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ವಿಶೇಷವಾಗಿ ಆಚರಿಸುವ ಕೃಷ್ಣನ ಹಬ್ಬ. ಶ್ರೀಕೃಷ್ಣ ಹುಟ್ಟಿದ ದಿನದ ಕುರುಹಾಗಿ ಈ ದಿನವನ್ನು ಭಾರತದಾದ್ಯಂತ ಎಲ್ಲೆಡೆ ಸಡಗರದಿಂದ ಆಚರಿಸಲಾಗುತ್ತದೆ. ನಮ್ಮಲ್ಲಿ ಬಹುತೇಕರಿಗೆ ಕೃಷ್ಣನ ಜನ್ಮದ ಕುರಿತಾದ ಕಥೆ ಗೊತ್ತಿರಬಹುದು. ಆದರೆ ಇಂದು ಶ್ರೀ ಕೃಷ್ಣ ಅಣ್ಣನಾಗಿ ಬಂದು ಹೇಗೆ ಭಕ್ತೆಯೊಬ್ಬಳ ಮನದಾಸೆ ನೆರವೇರಿಸಿದ ಎಂಬುದರ ಕಥೆ ತಿಳಿಯೋಣ.

ಈ ಕಥೆಯನ್ನು ವಿಡಿಯೋ ಮೂಲಕ ಕೇಳಿ

ಒಂದು ಪಟ್ಟಣದಲ್ಲಿ ರಾಮನಾಥಸ್ವಾಮಿ ಎಂಬ ಜಮೀನುದಾರನಿದ್ದ. ಅವನಿಗೆ ಮೂರು ಜನ ಗಂಡು ಮಕ್ಕಳು ಹಾಗೂ ಮೂರು ಜನ ಸೊಸೆಯರು.

ಮೂರು ಜನ ಸೊಸೆಯರಲ್ಲಿ ಕಿರಿಯ ಸೊಸೆಯ ಹೆಸರು ಹಿರಣ್ಮಯಿ, ತುಂಬಾ ಮುಗ್ಧೆ, ಗುಣವಂತೆ ಹಾಗೂ ಪರಿಶುದ್ಧ ಮನಸ್ಸಿನವಳು, ಮತ್ತು ಶ್ರೀ ಕೃಷ್ಣನ ಪರಮ ಭಕ್ತಳಾಗಿದ್ದಳು. ಹೀಗಿರುವಾಗ ಶ್ರಾವಣ ಮಾಸದಲ್ಲಿ ಬರುವ ರಕ್ಷಾಬಂಧನ ಹಬ್ಬ ಬಂದಿತು.

Krishna
Krishna Janmashtami

ಮನೆಯ ಹಿರಿಯ ಸೊಸೆಯರಾದ ಮಾಲಿನಿ, ಹಂಸಿನಿ, ಬೇಗ ಎದ್ದು ಅತ್ತೆಯ ಆದೇಶ ದಂತೆ ಮನೆಯಲ್ಲಿ ಕಸ ಗುಡಿಸಿ, ಸಾರಿಸಿ, ರಂಗೋಲಿ ಹಾಕಿ, ಹಬ್ಬಕ್ಕಾಗಿ ವಿಶೇಷ ತಯಾರಿಯನ್ನು ಮಾಡುತ್ತಿದ್ದರು.‌ ಆ ಸಮಯಕ್ಕೆ ಅಲ್ಲಿಗೆ ಬಂದ ಹಿರಣ್ಮಯಿ ಅದನ್ನು ಕಂಡು ಅಕ್ಕ ಇದೇನು ಮನೆಯಲ್ಲಿ ಇಷ್ಟೊಂದು ವಿಶೇಷ, ಅಲಂಕಾರ ಎಲ್ಲ ಮಾಡುತ್ತಿದ್ದಿರಿ ಎಂದಳು.

ಅದಕ್ಕೆ ಅವರಿಬ್ಬರು, ಪಾಪ ನಿನಗೆ ಹೇಗೆ ಗೊತ್ತಾಗಬೇಕು, ನಾಳೆ ರಕ್ಷಾಬಂಧನ ಹಬ್ಬವಿದೆಯಲ್ಲವೆ… ನಾವಿಬ್ಬರೂ ನಮ್ಮ ತವರು ಮನೆಗೆ ಹೋಗಿ ಅಣ್ಣಂದಿರ ಜೊತೆ ರಕ್ಷಾ ಬಂಧನ ಹಬ್ಬ ಆಚರಿಸಲಿದ್ದೇವೆ. ನೀನಾದರೋ ಒಂಟಿ ಗೂಬೆಯಲ್ಲವೆ…ಅಣ್ಣನಾಗಲಿ, ತಮ್ಮನಾಗಲಿ ನಿನಗಿಲ್ಲ, ಹೀಗಿರುವಾಗ ನಿನಗೆ ಹೇಗೆ ಅಣ್ಣ- ತಂಗಿ ಬಾಂಧವ್ಯದ ಬಗ್ಗೆ ತಿಳಿಯಬೇಕು?

ಅದಕ್ಕೆ ನೀನು ನಾಳೆ ಮನೆಯಲ್ಲೇ ಇದ್ದು ಎಲ್ಲ ಕೆಲಸವನ್ನು ಮಾಡಿ ಮುಗಿಸು. ನಾವು ತವರುಮನೆಗೆ ಹೋಗಿ ಹಬ್ಬ ಮುಗಿಸಿ ಬರುತ್ತೇವೆ ಎಂದು ಮನಸ್ಸಿಗೆ ತಿವಿಯುವಂತೆ ಹೇಳಿದರು. ಅವರು ಹೇಳಿದ ವ್ಯಂಗ್ಯ ಮಾತುಗಳನ್ನು ಕೇಳಿ ಹಿರಣ್ಮಯಿ ಗೆ ದುಃಖ ಉಕ್ಕಿ ಬಂತು. ಸಮಾಧಾನ ಮಾಡಿಕೊಂಡು ತನ್ನ ಕೋಣೆಗೆ ಓಡುತ್ತಾ ಬಂದು ಕೃಷ್ಣನ ವಿಗ್ರಹದ ಮುಂದೆ ಕುಳಿತು, ಅಯ್ಯಾ ಕೃಷ್ಣಾ ನನಗೂ ಒಬ್ಬ ಅಣ್ಣ ಅಥವಾ ತಮ್ಮನನ್ನು ದಯಪಾಲಿಸಬಾರದಿತ್ತೆ… ನಿನ್ನಂಥ ಒಬ್ಬ ಅಣ್ಣ ನನಗೂ ಇದ್ದಿದ್ದರೆ ನಾನು ಸಹ ತವರು ಮನೆಗೆ ಬಂದು ಸಹೋದರ ಜೊತೆಯಲ್ಲಿ ಹಬ್ಬ ಮಾಡಬಹು ದಿತ್ತಲ್ಲಾ ನನಗೆ ಯಾಕೆ ಈ ಪುಣ್ಯ ನೀಡಲಿಲ್ಲ. ಅಕ್ಕಂದಿರು ಹೇಳಿದ್ದು ಸರಿಯೇ ಆಗಿದೆ….ನಾನು ಒಬ್ಬಳೆ…ನನ್ನನ್ನು ಯಾರು ಕರೆದುಕೊಂಡು ಹೋಗುತ್ತಾರೆ, ಹಬ್ಬದ ದಿನದಂದು ನಾನು ಎಲ್ಲಿಗೆ ಹೋಗಲಿ, ಎಂದು ಸಾಕಷ್ಟು ಅತ್ತು ಸಮಾಧಾನ ಮಾಡಿಕೊಂಡಳು.

ಮರುದಿನ ರಕ್ಷಾ ಬಂಧನ ಹಬ್ಬ. ಬೆಳಗಾಗುತ್ತಿದ್ದಂತೆ ರಾಮನಾಥನ ಮನೆಗೆ ಇಬ್ಬರು ಹಿರಿಯ ಸೊಸೆಯರ ಅಣ್ಣಂದಿರು ಬಂದು ತಮ್ಮ ತಮ್ಮ ಸಹೋದರಿಯರನ್ನ ಮನೆಗೆ ಕರೆದುಕೊಂಡು ಹೋದರು. ಈ ದೃಶ್ಯವನ್ನು ತನ್ನ ಕೋಣೆಯ ಒಂದು ಮೂಲೆಯಲ್ಲಿ ನಿಂತು ನೋಡುತ್ತಿದ್ದ ಹಿರಣ್ಮಯಿ ಕಣ್ಣಿಂದ ನೀರು ಒಂದೇ ಸಮನೆ ಸುರಿಯುತ್ತಿತ್ತು.

ಸ್ವಲ್ಪ ಸಮಯದ ನಂತರ ರಾಮನಾಥನ ಮನೆ ಮುಂದೆ ಒಬ್ಬ ಯುವಕ ಬಂದನು. ಒಳಗೆ ಬಂದು ಮಾತನಾಡಿ ನಾನು ಹಿರಣ್ಮಯಿಗೆ ದೂರದಿಂದ ಅಣ್ಣನಾಗಬೇಕು. ನನ್ನ ತಂಗಿಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದನು. ರಾಮನಾಥನು ಆಶ್ಚರ್ಯದಿಂದ ನನ್ನ ಕೊನೆ ಸೊಸೆಗೆ ಯಾರೂ ಸಹೋದರನಿಲ್ಲ ಎಂದಿದ್ದರಲ್ಲ, ಅಲ್ಲದೆ ಅವಳ ಮದುವೆಯ ಸಂದರ್ಭದಲ್ಲೂ ನಾನು ನಿನ್ನನ್ನು ನೋಡಿಲ್ಲ…ಎಂದನು. ಅದಕ್ಕೆ ಆ ಯುವಕ ಹೌದು ಸ್ವಾಮಿ ನಾನು ಹಿರಣ್ಮಯಿಯ ದೂರದ ಸಂಬಂಧಿ ಹಾಗೂ ಅವಳಿಗೆ ಅಣ್ಣನ ಸ್ಥಾನದಲ್ಲಿದ್ದೇನೆ, ಅವಳ ಮದುವೆಯ ಸಂದರ್ಭದಲ್ಲಿ ಕೆಲಸದ ನಿಮಿತ್ತ ನಾನು ಬಹುದೂರದ ವಿದೇಶದಲ್ಲಿದ್ದೆ…ಹಾಗಾಗಿ ಬರಲಾಗಿರಲಿಲ್ಲ…ಈಗ ಬಂದ ಮೇಲೆ ವಿಷಯ ತಿಳಿಯಿತು….ಅದಕ್ಕೆ ನನ್ನ ತಂಗಿಯನ್ನ ಕರೆದುಕೊಂಡು ಹೋಗಲು ಬಂದಿರುವೆ ಎಂದ.

ಮನೆಯವರಿಗೆಲ್ಲ ಒಪ್ಪಿಗೆಯಾಯಿತು ಕಳಿಸಲು ಒಪ್ಪಿದರು. ಮನೆಯ ಎಲ್ಲರೂ ಒಪ್ಪಿದರೂ ಹಿರಣ್ಮಯಿ ಗಂಡನಿಗೆ ಮಾತ್ರ ಮನಸ್ಸಿನಲ್ಲಿ ಸ್ವಲ್ಪ ಅನುಮಾನವಿತ್ತು. ಅವನು ಆ ಯುವಕನ ಬಳಿ ಬಂದು ನೀನು ಈಗ ನಿನ್ನ ತಂಗಿಯನ್ನು ಕರೆದುಕೊಂಡು ಹೋಗು ಆದರೆ ವಾಪಸ್ಸು ಕರೆದುಕೊಂಡು ಬರಲು ನಾನೇ ಬರುತ್ತೇನೆ ಎಂದು ಹೇಳಿ ಅವನ ಬಳಿ ವಿಳಾಸ ಪಡೆದನು.

ಹೀಗೆ ಹೇಳಿದ ನಂತರ ಆ ಅಣ್ಣನ ಜೊತೆ ತಂಗಿಯನ್ನು ಕಳಿಸಿದರು. ದಾರಿಯಲ್ಲಿ ಹೋಗುತ್ತಿರುವಾಗ ಹಿರಣ್ಮಯಿ ಕೇಳಿದಳು. ಅಣ್ಣ ಇಷ್ಟು ದಿನ ನೀನು ಎಲ್ಲಿದ್ದೆ, ಕಳೆದ ರಕ್ಷಾ ಬಂಧನ ಹಬ್ಬದ ದಿನ ಏಕೆ ಬರಲಿಲ್ಲ ಎಂದು ಕೇಳಿದಳು? ಅದಕ್ಕೆ ಅವನು ನನ್ನ ಏಳು ಜನ ಸಹೋದರಿಯರು ವಿದೇಶದಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಅಲ್ಲಿಗೆಲ್ಲ ಹೋಗಿ ಅವರನ್ನೆಲ್ಲ ಮಾತಾಡಿಸಿ ಬರುವುದು ತಡವಾಯಿತು ಎಂದನು.

ಅಣ್ಣ ತಂಗಿ ಇಬ್ಬರು ಮನೆಗೆ ಬಂದರು. ಹಿರಣ್ಮಯಿಯ ನಾದಿನಿ ಬಂದು ಸ್ವಾಗತಿಸಿ ಉಪಚರಿಸಿದಳು. ರಕ್ಷಾ ಬಂಧನ ಹಬ್ಬ ಸಂಭ್ರಮದಿಂದ ಆಚರಿಸಿದರು. ಆ ದಿನವಿಡಿ ಅಣ್ಣ- ತಂಗಿ ಬಹಳ ಹೊತ್ತು ಮಾತನಾಡಿ ಸಂತೋಷದಲ್ಲಿಯೇ ಸಮಯ ಕಳೆದರು. ಒಂದೆರಡು ದಿನಗಳಾದ ಮೇಲೆ ಹಿರಣ್ಮಯಿಯ ಗಂಡ ಆಕೆಯನ್ನು ಕರೆದೊಯ್ಯಲು ಬಂದನು.

ಅರಮನೆಯಂತಹ ಮನೆ, ಅಲ್ಲಿರುವ ಸೌಕರ್ಯ ಎಲ್ಲವನ್ನು ನೋಡಿ ಆತ ಆಶ್ಚರ್ಯ ಚಿಕಿತನಾದ. ಅಣ್ಣ ಅತ್ತಿಗೆ, ಅಳಿಯನನ್ನು ಕರೆದು ಬೇಕಾದಷ್ಟು ಉಪಚರಿಸಿದರು. ಮರುದಿನ ಬೆಳಿಗ್ಗೆ ತಂಗಿಯನ್ನು ಅವನ ಜೊತೆ ಕಳಿಸಿದರು. ಹೊರಡುವ ಸಮಯದಲ್ಲಿ ಸಾಕಷ್ಟು ಉಪಹಾರಾದಿಗಳನ್ನು ಕೊಟ್ಟು ಬಹಳ ಖುಷಿ ಖುಷಿಯಿಂದ ಕಳಿಸಿಕೊಟ್ಟರು.

ಆದರೆ ದಾರಿಯಲ್ಲಿ ಹಿರಣ್ಮಯಿ ಗಂಡ ಒಂದೂ ಮಾತನಾಡಲಿಲ್ಲ. ಕತ್ತಲಾಗತೊಡಗಿತು. ಆಗ ಗಂಡನು ಹಿರಣ್ಮಯಿಗೆ “ನನ್ನ ಶಲ್ಯವನ್ನು ನಿನ್ನ ಅಣ್ಣನ ಮನೆಯಲ್ಲಿ ಮರೆತು ಬಂದಿದ್ದೇನೆ ಹೋಗಿ ತರೋಣ ಎಂದು ಹೇಳಿ ಇಬ್ಬರು ಹಿಂದೆ ತಿರುಗಿದರು.

ಆದರೆ, ಅವರು ಆ ಸ್ಥಳಕ್ಕೆ ಬರುತ್ತಿದ್ದಂತೆ ಆಶ್ಚರ್ಯ ಕಾದಿತ್ತು, ಏಕೆಂದರೆ ಈ ಹಿಂದೆ ಅಲ್ಲಿದ್ದ ದೊಡ್ಡ ಅರಮನೆ ಈಗ ಇರಲಿಲ್ಲ, ಬದಲಿಗೆ ಒಂದು ದೊಡ್ಡದಾದ ಅರಳಿ ಮರವಿತ್ತು. ಇದನ್ನು ನೋಡಿದ ಗಂಡ ಹಿರಣ್ಮಯಿಯನ್ನು ಕುರಿತು ಎಲ್ಲಿ ಹೋಯಿತು ನಿಮ್ಮ ಅಣ್ಣನ ಮನೆ, ಇಲ್ಲೇ ಇತ್ತಲ್ಲ ಎಂದು ಹುಡುಕುತ್ತಿದ್ದಾಗ, ಅವನ ಶಲ್ಯ ಮರದ ಮೇಲೆ ಇದ್ದದ್ದು ಕಂಡಿತು. ಆಗ ಹಿರಣ್ಮಯಿ ಅದೋ ನೋಡಿ ಅಲ್ಲಿ ನಿಮ್ಮ ಶಲ್ಯ ಇದೆ ಎಂದಳು.

ಆದರೆ ಗಂಡನಿಗೆ ಸಿಟ್ಟು ಬಂದಿತು. ಇಲ್ಲಿ ಏನೋ ಸರಿಯಿಲ್ಲ ಎನ್ನುತ್ತ ಹಿರಣ್ಮಯಿ ಮೇಲೆ ಕೋಪಿಸಿಕೊಂಡನು. ಆದರೆ ಹಿರಣ್ಮಯಿಗೆ ಏನೂ ತೋಚುತ್ತಿಲ್ಲ, ಅವಳು ಪರಿಪರಿಯಾಗಿ ನನಗೇನು ಗೊತ್ತಿಲ್ಲ ಎನ್ನುತ್ತಿದ್ದಳು. ಕೊನೆಗೆ ಗಂಡ ಸಿಟ್ಟು ತಡೆಯಲಾಗದೆ, ನಿಜ ಹೇಳು ಎಂದು ಅವಳ ಮೇಲೆ ಕೈ ಎತ್ತಲು ಹೋದಾಗ ಆ ದೊಡ್ಡ ಅರಳಿ ಮರದಿಂದ ಸಾಕ್ಷಾತ್ ಶ್ರೀ ಕೃಷ್ಣನು ಪ್ರತ್ಯಕ್ಷನಾಗಿ ಅವಳನ್ನು ಹೊಡೆಯಬೇಡ ಅವಳು ನನ್ನ ಸಹೋದರಿ ಪ್ರತಿವರ್ಷ ರಕ್ಷಾಬಂಧನದಂದು ನನಗೆ ರಾಖಿ ಕಟ್ಟುತ್ತಿದ್ದಳು ನಾನು ಅವಳ ಅಣ್ಣನ ಕರ್ತವ್ಯವನ್ನು ಪೂರೈಸಿದ್ದೇನೆ, ಇವಳನ್ನೇ ನನ್ನ ತಂಗಿಯಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದಾಗ ಹೆದರಿದ ಗಂಡ ಭಯ ಭಕ್ತಿಯಿಂದ ಕೃಷ್ಣನ ಪಾದಕ್ಕೆ ಬಿದ್ದು ತನ್ನಿಂದಾದ ತಪ್ಪಿಗೆ ಕ್ಷಮಾಪಣೆ ಕೋರಿದನು.

ಹಿರಣ್ಮಯಿ ತನ್ನ ಅಣ್ಣನ ಪಾದಗಳಿಗೆ ನಮಸ್ಕರಿಸಿದಳು. ಅವರಿಬ್ಬರಿಗೂ ಆಶೀರ್ವದಿಸಿದ ಶ್ರೀ ಕೃಷ್ಣ ಅರಳಿಮರದೊಳಗೆ ಮತ್ತೆ ಅದೃಶ್ಯನಾದನು.

ಸ್ನೇಹಿತರೆ ಆ ಭಗವಂತ ನಿಜಕ್ಕೂ ಕರುಣಾಮಯಿ…ಆಪದ್ಬಾಂಧವ…ನಂಬಿದವರ ಕೈ ಎಂದಿಗೂ ಬಿಡಲ್ಲ…ಆದರೆ ಆ ನಂಬಿಕೆ ಹಾಗೂ ಭಕ್ತಿಗೆ ನಾವು ಅರ್ಹರಾದಾಗ ಮಾತ್ರ ಈ ಪುಣ್ಯ ಲಭಿಸುತ್ತದೆ ಅಲ್ಲವೆ?…

Leave a Reply

Your email address will not be published. Required fields are marked *