ಮೋದಿಯ ಸಂದೇಶ ಹೊತ್ತು ರಷ್ಯಾ ತಲುಪಿದ ಅಜೀತ್ ದೋವಲ್: ಜಗತ್ತಿನ ಗಮನ ಸೆಳೆದ ಪುಟಿನ್-ದೋವಲ್ ಭೇಟಿಯ ವಿಡಿಯೊ

Ajit Doval and Vladimir Putin

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜೀತ್ ದೋವಲ್ ಅವರು ಕಳೆದ ಗುರುವಾರದಂದು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ಪ್ರಧಾನಿ ಮೋದಿಯವರ ಇಚ್ಛೆಯಂತೆ ಅವರ ಉಕ್ರೇನ್ ಭೇಟಿಯ ವಿವರಗಳನ್ನು ಪುಟಿನ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾಗೆ ಅಧಿಕೃತವಾಗಿ ಭೇಟಿ ನೀಡಿದ್ದ ವಿಚಾರ ತಿಳಿದೇ ಇದೆ. ಪ್ರಧಾನಿಯವರ ಈ ಭೇಟಿ ಪಶ್ಚಿಮ ಜಗತ್ತಿನಲ್ಲಿ ಅಪಾರ ಗಮನ ಸೆಳೆದಿತ್ತು. ಹಲವರು ಈ ಭೇಟಿಯನ್ನು ಟೀಕಿಸಿದ್ದರು. ಅದಾದ ನಂತರ ಪ್ರಧಾನಿ ಮೋದಿಯವರು ಯುದ್ಧಪೀಡಿಯ ಉಕ್ರೇನ್ ದೇಶಕ್ಕೂ ಸಹ ಭೇಟಿ ನೀಡಿ ಭಾರತ ಯಾವಾಗಲಿದ್ದರೂ ಶಾಂತಿಯನ್ನು ಬಯಸುವ ದೇಶ ಎಂದು ಸಾರಿ ಹೇಳಿದ್ದರು.

ಇದೀಗ ಅಕ್ಟೋಬರ್ ನಲ್ಲಿ ರಷ್ಯಾದ ಕಜಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬ್ರಿಕ್ಸ್ ಸಮ್ಮೇಳನಕ್ಕೆ (BRICS Summit) ಪ್ರಧಾನಿ ಮೋದಿಯವರು ಭಾಗವಹಿಸಲಿರುವ ನಿರೀಕ್ಷೆಯಿದೆ. ಅದಕ್ಕೂ ಮುಂಚೆ ಬ್ರಿಕ್ಸ್ ಸಮಿಟ್ ಅಂಗವಾಗಿ ನಡೆದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮ್ಮೇಳನದಲ್ಲಿ ಭಾರತದ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಆಗಿರುವ ಅಜೀತ್ ದೋವಲ್ ರಷ್ಯಾಗೆ ತೆರಳಿದ್ದು ಆ ಸಂದರ್ಭದಲ್ಲಿ ಅವರು ಪುಟಿನ್ ಅವರನ್ನು ಭೇಟಿಯಾಗಿದ್ದಾರೆ.

ಇಬ್ಬರೂ ಕೈಕುಲುಕುತ್ತಿರುವ ವಿಡಿಯೊ ಒಂದನ್ನು ಭಾರತದಲ್ಲಿರುವ ರಷ್ಯನ್ ಎಂಬಸಿ ತನ್ನ ಎಕ್ಸ್ ಖಾತೆಯ ಪುಟದಲ್ಲಿ ಹಂಚಿಕೊಂಡಿದೆ. ಪ್ರಧಾನಿ ತಮ್ಮ ಐತಿಹಾಸಿಕ ಉಕ್ರೇನ್ ಭೇಟಿಯ ಎರಡುವರೆ ವಾರಗಳ ನಂತರ ಭಾರತದ ಅಜೀತ್ ದೋವಲ್ ರಷ್ಯಾಗೆ ಭೇಟಿ ನೀಡಿದ್ದಾರೆ.

ತಮ್ಮ ಉಕ್ರೇನ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಜೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಉಭಯ ಅಧ್ಯಕ್ಷರನ್ನು ಕುರಿತು ಇಬ್ಬರೂ ಅಧ್ಯಕ್ಷರು ಒಂದೆಡೆ ಕುಳಿತು ಶಾಂತಿಯ ಮಾತುಕತೆಯಾಡುವ ಮೂಲಕ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕೆಂಬ ಮನವಿ ಮಾಡಿದ್ದರು.

ಅಲ್ಲದೆ, ಈ ಸಂದರ್ಭದಲ್ಲಿ ಭಾರತ ಬೇಕಾದರೆ ಇಬ್ಬರ ಮಧ್ಯೆ ಸಕ್ರಿಯ ಪಾತ್ರ ವಹಿಸುವುದಾಗಿಯೂ ಮೋದಿ ಹೇಳಿದ್ದರು. ಈ ಮೂಲಕ ಅವರು ಕೇವಲ ಎರಡು ದೇಶಗಳಿಗಲ್ಲದೆ ಜಗತ್ತಿಗೇ ಭಾರತ ಯಾವಾಗಲಿದ್ದರೂ ಶಾಂತಿ ಬಯಸುವ ಹಾಗೂ ಹರಡುವ ರಾಷ್ಟ್ರ ಎಂಬ ಸಂದೇಶ ರವಾನಿಸಿದ್ದರು ಎಂಬುದು ಸುಳ್ಳಲ್ಲ.

ಮೂಲಗಳ ಪ್ರಕಾರ, ಇದೀಗ ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಿರುವ ಭಾರತದ ಭದ್ರತಾ ಸಲಹೆಗಾರ ಅಜೀತ್ ದೋವಲ್, ರಷ್ಯಾ-ಉಕ್ರೇನ್ ಯುದ್ಧಕ್ಕೆ ವಿರಾಮ ನೀಡುವ ನಿಮಿತ್ತ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮಂಡಿಸುವ ಗುರಿ ಹೊಂದಿದ್ದಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರ ಸಂದೇಶವನ್ನು ಹಂಚಿಕೊಂಡಿರುವುದಾಗಿ ವರದಿಯಾಗಿದೆ.

ಪುಟಿನ್ ಜೊತೆಗಿನ ಮಾತುಕತೆಯಲ್ಲಿ ದೋವಲ್ ಅವರು ಉಕ್ರೇನ್ ಭೇಟಿಯ ಸಂದರ್ಭ ಹಾಗೂ ಅಲ್ಲಿ ನಡೆದ ಮಾತುಕತೆಯ ವಿವರಗಳನ್ನು ಸಹ ಹಂಚಿಕೊಂಡಿರುವ ಬಗ್ಗೆ ವರದಿಯಾಗಿದೆ. ಆದರೆ ಪುಟಿನ್ ಅವರು ತಮ್ಮ ಸಂವಾದದಲ್ಲಿ ಉಕ್ರೇನ್ ಬಗ್ಗೆ ಏನೂ ಮಾತನಾಡದೆ ಮುಂದಿನ ತಿಂಗಳು ರಷ್ಯಾದ ಕಜಾನ್ ನಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನಕ್ಕೆ ತಮ್ಮ ಗೆಳೆಯ ಮೋದಿಯವರು ಭಾಗವಹಿಸುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇಷ್ಟಲ್ಲದೆ, ಅಕ್ಟೋಬರ್ 22 ರಂದು ನಡೆಯಲಿರುವ ಬ್ರಿಕ್ಸ್ ಸಮ್ಮೇಳನದ ಸಂದರ್ಭದಲ್ಲಿ ಪುಟಿನ್ ಅವರು ಭಾರತದ ಪ್ರಧಾನಿ ಅವರೊಂದಿಗೆ ದ್ವೀಪಕ್ಷೀಯ ಮಾತುಕತೆಯ ಬಗ್ಗೆಯೂ ಸುಳಿವು ನೀಡಿದ್ದು ಕಳೆದ ಬಾರಿ ಮಾಸ್ಕೊಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿಯವರೊಂದಿಗೆ ಮಾಡಿಕೊಳ್ಳಲಾಗಿದ್ದ ಹಲವು ಒಪ್ಪಂದಗಳ ಭವಿಷ್ಯದ ಅನುಷ್ಠಾನದ ಬಗ್ಗೆ ಮಾತುಕತೆ ನಡೆಸಲಿದ್ದಾರೆಂದು ರಷ್ಯನ್ ಎಂಬಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ನಾವು ನಮ್ಮ ಉತ್ತಮ ಗೆಳೆಯ ಮೋದಿಗಾಗಿ ಕಾಯುತ್ತಿದ್ದೇವೆ ಹಾಗೂ ಅವರಿಗೆ ಶುಭವಾಗಲಿ” ಎಂದು ಪುಟಿನ್, ಅಜೀತ್ ದೋವಲ್ ಅವರೊಂದಿಗಿನ ತಮ್ಮ ಸಂವಾದದಲ್ಲಿ ಹೀಳೆರುವುದಾಗಿ ಎಂಬಸಿ ಮೂಲಕ ತಿಳಿದುಬಂದಿದೆ.

ಇದಕ್ಕೂ ಮುಂಚೆ ಬುಧವಾರದಂದು ಅಜೀತ್ ದೋವಲ್ ತಮ್ಮ ಸಹವರ್ತಿಯಾದ ರಷ್ಯಾದ ಭದ್ರತಾ ಸಲಹೆಗಾರರಾದ ಸರ್ಗೈ ಶೊಯಿಗು ವರೊಂದಿಗೂ ಹಲವು ವಿಷಯಗಳಲ್ಲಿ ಮಾತುಕತೆಗಳನ್ನು ನಡೆಸಿದ್ದು ಇದರಲ್ಲಿ ಉಭಯ ದೇಶಗಳೂ ತಮ್ಮ ಪರಸ್ಪರ ಆಸಕ್ತಿಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು, ಬ್ರೇಸಿಲ್, ರಷ್ಯಾ, ಇಂಡಿಯಾ, ಚೈನಾ ಹಾಗೂ ಸೌಥ್ ಆಫ್ರಿಕಾ ದೇಶಗಳು ಒಟ್ಟಾರೆಯಾಗಿ ಸಂಘಟಿಸಿರುವ ಬ್ರಿಕ್ಸ್ ಸಮ್ಮೇಳನ ಮುಂದಿನ ತಿಂಗಳು 22 ರಂದು ರಷ್ಯಾದ ಕಜಾನ್ ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಬ್ರಿಕ್ಸ್ ತನ್ನದೆ ಆದ ಕರೆನ್ಸಿ ಅನ್ನು ಸಹ ಹೊರತರುವ ಬಗ್ಗೆ ಸುದ್ದಿಗಳಿದ್ದು ಆ ಬಗ್ಗೆ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

ಇನ್ನೊಂದೆಡೆ ರಷ್ಯಾ, ಭಾರತ ಹಾಗೂ ಚೀನಾವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಇರಾದೆಯನ್ನೂ ಸಹ ಹೊಂದಿದೆ ಎನ್ನಲಾಗುತ್ತಿದೆ. ಏಕೆಂದರೆ ರಷ್ಯಾಗೆ ಪ್ರಸ್ತುತ ಕಠಿಣ ಸಂದರ್ಭದಲ್ಲಿ ಎರಡು ವಿಶ್ವಾಸಾರ್ಹ ದೇಶಗಳೆಂದರೆ ಅವು ಭಾರತ ಮತ್ತು ಚೈನಾ ಆಗಿವೆ. ರಷ್ಯಾ ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಚೈನಾ ಎರಡರ ಮಧ್ಯೆ ಶಾಂತಿ ಸ್ಥಾಪಿಸುವ ಉದ್ದೇಶವನ್ನೂ ಸಹ ಅಲ್ಲಗೆಳೆಯಲಾಗದು.

ಒಟ್ಟಿನಲ್ಲಿ ಈ ಸಮ್ಮೇಳನವನ್ನು ಪಾಶ್ಚಿಮಾತ್ಯ ರಾಷ್ರಗಳು ಕಣ್ಣು ರೆಪ್ಪೆ ಮಡಚದೆ ಬಕ ಪಕ್ಷಿಗಳಂತೆ ಕಾತುರರಾಗಿ ಎದುರುನೋಡುತ್ತಿದ್ದಾರೆ ಎನ್ನಬಹುದು.

Leave a Reply

Your email address will not be published. Required fields are marked *