ಮತ್ತೆ ಚಿತ್ರರಂಗದ “ಕರಾಳ ಮುಖದ” ಮೇಲೆ ದಾಳಿ ಮಾಡುತ್ತ ನಟಿ ಕಂಗನಾ ಪರೋಕ್ಷವಾಗಿ ಕಿಡಿ ಕಾರಿದ್ದು ನಟ ರಣಬೀರ್ ಅವರ ಮೇಲೆಯೇ..?

Kangana Ranaut

ಚಿತ್ರಕೃಪೆ: Bollywood Hungama

ಕ್ವೀನ್ ಚಿತ್ರದ ನಾಯಕಿ ಹಾಗೂ ಕಾಂಟ್ರೋವರ್ಸಿ ಕ್ವೀನ್ ಇಲ್ಲವೇ ಬಾಲಿವುಡ್ ಕ್ವೀನ್ ಎಂದು ಕರೆಯಲ್ಪಡುವ ಕಂಗನಾ ರಾನೌತ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಂಚಲನ ಮೂಡಿಸಿದ್ದಾರೆ.

ಕಂಗನಾ ಅವರು ತಮ್ಮ ನೇರನುಡಿ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರಲ್ಲಿ ಯಾವತೂ ಹಿಂಜರಿಯುವುದಿಲ್ಲ ಎನ್ನಬಹುದು.

ವಿವಾದ ಏನೆ ಇರಲಿ ಅಂದರೆ ಧನಾತ್ಮಕವಾಗಿರಲಿ ಅಥವಾ ಋಣಾತ್ಮಕವಾಗಿರಲಿ ಕಂಗನಾ ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ವ್ಯಕ್ತಿತ್ವ ಹೊಂದಿದವರು. ತಮ್ಮ ಕೆಲ ನೇರ ನುಡಿಗಳಿಂದಾಗಿ ಹಾಗೂ ಆ ಮೂಲಕ ಸಾಕಷ್ಟು ವಿವಾದ ಏರ್ಪಟ್ಟಿರುವ ಕಾರಣ ಈಗಾಗಲೇ ಅವರನ್ನು ಟ್ವಿಟರ್ ನಿಂದ ಹೊರಗಿಡಲಾಗಿದೆ.

ಆದರೆ, ಕಂಗನಾ ಸುಮ್ಮನೆ ಕೂರುವ ಜಾಯಮಾನದವರಲ್ಲ. ಹಾಗಾಗಿ ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಸ್ಟೋರಿಗಳನ್ನು ಅಥವಾ ಅಭಿಪ್ರಾಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಈ ಹಿಂದೆ ಕಂಗನಾ ಅವರು ನಟ ಹೃತಿಕ್ ರೋಶನ್ ಅವರೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿ ಸಾಕಷ್ಟು ಸುದ್ದಿಯಾಗಿದ್ದರು. ಈ ಸಂದರ್ಭದಲ್ಲಿ ಪರಸ್ಪರರ ಮಧ್ಯೆ ಸಾಕಷ್ಟು ಕೆರಚಾಟವೇ ನಡೆದು ಹೋಗಿತ್ತು. ಒಟ್ಟಿನಲ್ಲಿ ಸಿನಿ ರಸಿಕರಿಗೆ ಇಬ್ಬರಲ್ಲಿ ಯಾರು ಸರಿ ಯಾರು ತಪ್ಪು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವಂತಾಗಿತ್ತು.

ಇದೀಗ ಆ ಘಟನೆಯಾಗಿ ಹೋಗಿದೆ. ಸದ್ಯ ಕಂಗನಾ ಮತ್ತೊಮ್ಮೆ ಚಿತ್ರರಂಗದ ಆ “ಕರಾಳ ಮುಖ”ದ ಬಗ್ಗೆ ಮಾತನಾಡಿದ್ದು ಅದರಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಬರೆದುಕೊಂಡಿರುವ ಅಭಿಪ್ರಾಯಗಳು ಮತ್ತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನೇ ಉಂಟು ಮಾಡುತ್ತಿದೆ ಎನ್ನಬಹುದು.

ಅಷ್ಟಕ್ಕೂ ಕಂಗನಾ ಹೇಳಿದ್ದೇನು?

ಇದೀಗ ಕಂಗನಾ ಅವರು ತಮ್ಮ ಇನ್ಸ್ಟಾ ಸ್ಟೋರಿ ಮೂಲಕ ಬಹಿರಂಗವಾಗಿ ಹೆಸರು ಹೇಳದೆ ಬಾಲಿವುಡ್ ಸ್ಟಾರ್ ಒಬ್ಬರ ಬಗ್ಗೆ ಮಾತನಾಡಿದ್ದು ಅದೀಗ ಸಾಕಷ್ಟು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮೊದಲಿಗೆ ಕಂಗನಾ ಅವರು ಫಿಲ್ಮ್ ಮಾಫಿಯಾವು ಹೇಗೆ ಹಗರಣ ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರು, “ಫಿಲ್ಮ್ ಮಾಫಿಯಾಗಳು ನನ್ನ ಹೆಸರಿನಲ್ಲಿರುವ ಜಾಲಿ ಖಾತೆ ಬಳಸಿ ಹಗರಣ ನಡೆಸುತ್ತಿರುವ ಬಗ್ಗೆ ಇಂದು ಬೆಳಗ್ಗೆಯೆ ನನ್ನ ಗಮನಕ್ಕೆ ತರಲಾಗಿದೆ. ಈ ವ್ಯಕ್ತಿ ಹಾಗೂ ನನ್ನ ಮಧ್ಯೆ ಹೇಳಿಕೊಳ್ಳುವಂಥದ್ದು ಏನೂ ಇಲ್ಲ, ನಾನು ಯಾವ ಆನ್ಲೈನ್ ಮ್ಯಾನೇಜರ್ ಗಳನ್ನು ಸಹ ಹೊಂದಿಲ್ಲ, ಇದು ಯಾರೋ ಚಂಗು-ಮಂಗುಗಳಂಥವರ ಕೃತ್ಯವಾಗಿದೆ. ನನ್ನ ಚಿತ್ರ ಮಣಿಕರ್ಣಿಕಾ ಬಿಡುಗಡೆಯ ಮೊದಲ ದಿನದಂದು ಗಳಿಸಿದ್ದ (೧೮ ಕೋಟಿ ರೂ.) ಹಣವನ್ನು ಸಹ ಇವರ ಚಿತ್ರಗಳಿಸಿಲ್ಲ. ಆದಾಗ್ಯೂ ಇವರೆಲ್ಲರೂ ನನ್ನ ಚಿತ್ರ ಫ್ಲಾಪ್ ಎಂದು ಹೇಳಿದ್ದರು” ಎಂದು ಹಂಚಿಕೊಂಡಿದ್ದಾರೆ.

ತಮ್ಮ ಮಾತನ್ನು ಮುಂದುವರೆಸುತ್ತ ಅವರು, “ಫಿಲ್ಮ್ ಮಾಫಿಯಾ ಯಾವಾಗಲೂ ಕ್ರಿಮಿನಲ್ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದೆ. ನಾನು ಡೇಟ್ ಮಾಡಿದ್ದ ಈ ಸ್ಟಾರ್ ನಟ ನಂತರದಲ್ಲಿ ನಾನು ಅವರ ಇಂಪೋಸ್ಟರ್ ಒಬ್ಬರ ಜೊತೆ ಡೇಟ್ ಮಾಡಿದ್ದಾಗಿ ಹೇಳಿಕೊಂಡಿದ್ದ.

ಆತ ಬೇರೆ ಬೇರೆ ನಂಬರ್ ಬಳಸಿ ನನ್ನ ಜೊತೆ ಚಾಟ್ ಮಾಡುತ್ತಿದ್ದ. ನನ್ನ ಅಕೌಂಟ್ ಹ್ಯಾಕ್ ಮಾಡಿ ಅದನ್ನು ದುರುಪಯೋಗಪಡಿಸಿಕೊಂಡಿದ್ದ ಮೊದಲಿಗೆ ಆ ನಟ ತನ್ನ ವಿಚ್ಛೇದನದ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ಅಂದುಕೊಂಡಿದ್ದೆ, ಆದರೆ ಆ ರೀತಿ ಏನೂ ಇರಲಿಲ್ಲ.

ಅವರು ಬಲ್ಕ್ ಆಗಿ ಚಿತ್ರದ ಟಿಕೆಟ್ ಖರೀದಿಸುತ್ತಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಸಹ ಹೊಂದಾಣಿಕೆ ಮಾಡುತ್ತಾರೆ. ಅವರು ವಾಟ್ಸಪ್ ಡೆಟಾವನ್ನು ಸಹ ಖರೀದಿಸಿ ಗೂಢಚಾರಣೆಯನ್ನು ಮಾಡುತ್ತಾರೆ. ನನ್ನ ವೈಯಕ್ತಿಕ ಮಾಹಿತಿಗಳನ್ನು ಸ್ವತಃ ನೋಡಿದ್ದೇನೆ, ವೈಯಕ್ತಿಕ ಜೀವನ ಎಂಬುದು ರಾಜಿಯಾಗಿದೆ, ಇದು ಬಲು ಆತಂಕಮಯ (ಮುಂಬೈ ಸೈಬರ್ ಪೊಲೀಸ್) ಬೇಗ ಕ್ರಮ ಕೈಗೊಳ್ಳಿ” ಎಂದು ವಿವರವಾಗಿ ಹಂಚಿಕೊಂಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಕಂಗನಾ ತಮ್ಮ ಮುಂದಿನ ಅಭಿಪ್ರಾಯದಲ್ಲಿ, “ಮಹಿಳೆಯರ ನೆಚ್ಚಿನ ಇನ್ನೊಬ್ಬ ಸೂಪರ್ ಸ್ಟಾರ್, ನನ್ನ ಮನೆಗೆ ಭೇಟಿ ನೀಡಿ ನನ್ನನ್ನು ಡೇಟ್ ಮಾಡುವಂತೆ ಗೋಗೆರೆಯುತ್ತಿದ್ದ, ಹಾಗೂ ರಹಸ್ಯಮಯವಾಗಿ ನನ್ನನ್ನು ಆಗಾಗ ಭೇಟಿ ಮಾಡುತ್ತಿದ್ದ. ನಾನು ಅವನ ಈ ವರ್ತನೆಯ ಬಗ್ಗೆ ಕೇಳಿದಾಗ ಆತ ಪಾಪಾ ಕಿ ಪರಿಯೊಂದಿಗೆ ಡೇಟ್ ಮಾಡಿದರೆ ತನಗೊಂದು ಟ್ರಯಾಲಾಜಿ ಚಿತ್ರ ಸಿಗುವುದಾಗಿ ಹೇಳಿಕೊಂಡಿದ್ದ, ನನಗೆ ಈ ಎಲ್ಲ ಪರಿಸ್ಥಿತಿ ಬೇಡವಾಗಿತ್ತು. ಆತನು ಸಹ ಬೇರೆ ಬೇರೆ ನಂಬರ್ ಮತ್ತು ಖಾತೆಗಳಿಂದ ನನ್ನ ಜೊತೆ ಸಂವಹನ ಮಾಡುತ್ತಿದ್ದ. ಕೊನೆಗೆ ನಾನು ಎಲ್ಲವನ್ನು ಬ್ಲಾಕ್ ಮಾಡಿದೆ. ಆತ ತನ್ನ ಮದುವೆಯೂ ನಕಲಿಯಾಗಿದ್ದು ಮಗು ಎಂಬುದು ಕೇವಲ ಚಿತ್ರದ ಪ್ರಚಾರಕ್ಕಾಗಿ ಎಂದು ಹೇಳಿಕೊಂಡಿದ್ದ. ನಾನು ದಿಗ್ಭ್ರಾಂತಳಾದೆ. ಯಾರೆ ಆಗಲಿ ನೈತಿಕವಾಗಿ ಇಷ್ಟು ಕುಸಿಯುತ್ತಾರಾ ಎಂಬುದನ್ನು ನನಗೆ ನಂಬಲಾಗುತ್ತಿಲ್ಲ, ಅವರು ಮನುಷ್ಯರಲ್ಲ, ರಕ್ಕಸರು. ಹಾಗಾಗಿ ನಾನು ಅವರೆಲ್ಲರನ್ನು ನಾಶಪಡಿಸಲು ಬದ್ಧಳಾಗಿದ್ದೇನೆ. ಧರ್ಮದ ಮುಖ್ಯ ಉದ್ದೇಶ ಅಧರ್ಮವನ್ನು ನಾಶಪಡಿಸುವುದೇ ಆಗಿದೆ, ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಇದನ್ನೆ ಹೇಳಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಇದೀಗ ಈ ಸುದ್ದಿ ಯಾವ ಅವಾಂತರ ಉಂಟು ಮಾಡುತ್ತದೋ ಅಥವಾ ಹಾಗೆಯೇ ಮುಚ್ಚಿಹೋಗುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *