ಹೌದು, ನೀವು ಕೇಳಿದ್ದು ನಿಜ. ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ರಾಜಧಾನಿಯಾಗಿ ಕಾರ್ಯನಿರ್ವಹಿಸುವ ಪೋರ್ಟ್ ಬ್ಲೇರ್ ಹೆಸರನ್ನು ಕೇಂದ್ರ ಸರ್ಕಾರವು ಶ್ರೀ ವಿಜಯಪುರಂ ಎಂಬುದಾಗಿ ಮರುನಾಮಕರಣ ಮಾಡಿದೆ.
ಭಾರತದ ಗೃಹಮಂತ್ರಿಯಾದ ಅಮಿತ್ ಷಾ ಅವರು ಭಾರತದ ವಸಾಹತುಕಾಲದ ಹೆಜ್ಜೆಗುರುತುಗಳನ್ನು ತೆಗೆದು ಹಾಕುವ ಪ್ರಧಾನಿ ಮೋದಿಯವರ ದೂರದೃಷ್ಟಿಯ ಆಶಯವಾಗಿ ಪೋರ್ಟ್ ಬ್ಲೇರ್ ಹೆಸರನ್ನು ಶ್ರೀ ವಿಜಯಪುರಂ ಆಗಿ ಮರುನಾಮಕರಣ ಮಾಡಿರುವುದಾಗಿ ಘೋಷಿಸಿದ್ದಾರೆ.
ಸ್ವಾತಂತ್ರ್ಯಾ ಪೂರ್ವ ಭಾರತದಲ್ಲಿ ಅದರಲ್ಲೂ ಈಸ್ಟ್ ಇಂಡಿಯಾದ ಆಡಳಿತವಿದ್ದ ಸಂದರ್ಭದಲ್ಲಿ ಬ್ರಿಟಿಷ್ ನೌಕಾಸೇನೆಯ ಅಧಿಕಾರಿಯಾಗಿದ್ದ ಕ್ಯಾಪ್ಟನ್ ಆರ್ಕಿಬಾಲ್ಡ್ ಬ್ಲೇರ್ ಅವರ ಗೌರವಾರ್ಥವಾಗಿ ಇದನ್ನು ಪೋರ್ಟ್ ಬ್ಲೇರ್ ಎಂದು ಹೆಸರಿಸಲಾಗಿತ್ತು.
ಇದೀಗ ಭಾರತವು ಆ ಹೆಸರನ್ನು ತೆಗೆದು ಅದಕ್ಕೆ ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಿದೆ. ಅಕ್ಷರಶಃ ಇದರ ಅರ್ಥ ಜಯದ ನಗರ ಎಂದು ಅರ್ಥೈಸಬಹುದಾಗಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಮಿತ್ ಷಾ ಅವರು, “ಶ್ರೀ ವಿಜಯಪುರಂ ನಮ್ಮ ಸ್ವಾತಂತ್ರ್ಯ ಹೋರಾಟ ಹಾಗೂ ಇತಿಹಾಸದಲ್ಲಿ ಮರೆಯಲಾಗದ ಸ್ಥಾನವನ್ನು ಹೊಂದಿದೆ” ಎಂದು ಹೇಳಿದ್ದು ಇದೊಂದು ಜಯದ ಸಂಕೇತವಾಗಿ ಕಂಗೊಳಿಸುತ್ತದೆ ಎಂದು ಬಣ್ಣಿಸಿದ್ದಾರೆ.
ಪೋರ್ಟ್ ಬ್ಲೇರ್ ಎಂಬುದು ವಸಾಹತುಶಾಹಿ ಪರಂಪರೆಯ ಸಂಕೇತವಾಗಿತ್ತು, ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಸ್ಥಳದ ಮಹತ್ವ ಐತಿಹಾಸಿಕವಾಗಿದ್ದು ಇದು ಜಯದ ಸಂಕೇತವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಗೃಹ ಮಂತ್ರಿ ಅವರು ತಮ್ಮ ಪೋಸ್ಟ್ ನಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.
ಮುಂದುವರೆಯುತ್ತ ಅವರು ಇದೇ ಸ್ಥಳದಲ್ಲಿ ನಮ್ಮ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ನಮ್ಮ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಅನ್ ಫರ್ಲ್ ಮಾಡಿದ್ದರು ಹಾಗೂ ಇದೇ ಸ್ಥಳದ ಸೆಲ್ಯುಲಾರ್ ಜೈಲಿನಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೆ ತ್ಯಾಗ ಮಾಡಿದ್ದ ವೀರ್ ಸಾವರ್ಕರ್ ಸಹ ಇದ್ದರು.
ಒಂದೊಮ್ಮೆ ಇತಿಹಾಸದಲ್ಲಿ ಚೋಳ ಸಾಮ್ರಾಜ್ಯದ ನೌಕಾನೆಲೆಯಾಗಿದ್ದ ಈ ಸ್ಥಳ ಪ್ರಸ್ತುತ ನಮ್ಮ ರಣತಂತ್ರಗರಿಕೆ ಹಾಗೂ ಅಭಿವೃದ್ಧಿಗಳ ದ್ಯೋತಕವಾಗಿ ಕಂಗೊಳಿಸುತ್ತಿದೆ ಎಂದು ಅಮಿತ್ ಷಾ ಹೇಳಿಕೊಂಡಿದ್ದಾರೆ.
ಇನ್ನು, ಪ್ರಧಾನಿ ಮೋದಿ ಅವರೂ ಸಹ ಈ ಬಗ್ಗೆ ಟ್ವಿಟ್ ಮಾಡಿದ್ದು ಸ್ಥಳ ಮರುನಾಮಕರಣದ ಬಗ್ಗೆ ತಮ್ಮದೆ ಆದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಪೋಸ್ಟ್ ನಲ್ಲಿ, “ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಯಕರಂತಹ ಪ್ರಜೆಗಳು ಮತ್ತು ಪ್ರದೇಶದ ಶ್ರೀಮಂತ ಇತಿಹಾಸಕ್ಕೆ ಗೌರವ ಸಲ್ಲಿಸಿದಂತಾಗಿದೆ. ಈ ಮರುನಾಮಕರಣ ನಮ್ಮನ್ನು ವಸಾಹತುಶಾಹಿ ಮನಸ್ಥಿತಿಯಿಂದ ಹೊರತಂದು ನಮ್ಮ ಪರಂಪರೆಯನ್ನು ಸಂಭ್ರಮಿಸುವುದನ್ನು ಪ್ರತಿಫಲಿಸಲಿದೆ” ಎಂದು ಹೇಳಿದ್ದಾರೆ.
ಸುಮಾರು ಆರು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು 2018 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ಮೂರು ದ್ವೀಪಗಳ ಮರುನಾಮಕರಣವನ್ನು ಘೋಷಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಅದರಂತೆ ಆ ಸಂದರ್ಭದಲ್ಲಿ ಮೂರು ದ್ವೀಪಗಳಾದ ರಾಸ್ ಐಲ್ಯಾಂಡ್, ನೀಲ್ ಐಲ್ಯಾಂಡ್ ಹಾಗೂ ಹ್ಯಾವ್ಲಾಕ್ ಐಲ್ಯಾಂಡ್ ಗಾಲ ಹೆಸರುಗಳನ್ನು ಕ್ರಮವಾಗಿ ನೇತಾಜಿ ಸುಭಾಶ್ ಚಂದ್ರ ಬೋಸ್ ದ್ವೀಪ, ಶಹೀದ್ ದ್ವೀಪ ಮತ್ತು ಸ್ವರಾಜ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು.