ನಾಳೆ ರಿಲೀಸ್ ಆಗುತ್ತಿದೆ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ – ನೋಡಲು ಕಾತುರದಲ್ಲಿರುವ ಅಭಿಮಾನಿಗಳು

Max Kannada Movie

ಮ್ಯಾಕ್ಸ್ ನಾಳೆ ಬಿಡುಗಡೆಯಾಗುತ್ತಿದೆ. ಈ ಹಿಂದೆ ಕಿಚ್ಚ ಸುದೀಪ್ ಕಳೆದ ಬಾರಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದು ವಿಕ್ರಾಂತ ರೋಣ ಚಿತ್ರದಲ್ಲಿ. ಆ ಚಿತ್ರ ಬಿಡುಗಡೆಯಾಗಿ ಈಗಾಗಲೇ ಸಾಕಷ್ಟು ಸಮಯ ಕಳೆದಿದೆ. ಇದೀಗ ಅಭಿನಯ ಚಕ್ರವರ್ತಿ ಸುದೀಪ್ ಅವರು ನಾಳೆ ಅಂದರೆ 25ನೇ ಡಿಸೆಂಬರ್ 2024 ರಂದು ತಮ್ಮ ಮ್ಯಾಕ್ಸ್ ಚಿತ್ರದ ಮೂಲಕ ಮತ್ತೆ ಬೆಳ್ಳಿ ತೆರೆಯ ಮೇಲೆ ರಾರಾಜಿಸಲು ಸಜ್ಜಾಗಿದ್ದಾರೆ.

ಅದಾಗಲೇ ಮ್ಯಾಕ್ಸ್ ಚಿತ್ರದ ಟೀಸರ್ ಬಹು ಹಿಂದೆ ರಿಲೇಸ್ ಆಗಿದ್ದರೆ ಕೆಲ ಸಮಯದ ಹಿಂದೆ ಟ್ರೈಲರ್ ರಿಲೀಸ್ ಆಗಿ ಆಕ್ಷನ್ ಚಿತ್ರ ಪ್ರಿಯರ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ. ಕೆಲ ದಿನಗಳ ಹಿಂದಷ್ಟೆ ಈ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿತ್ತು ಹಾಗೂ ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.

ಇನ್ನೊಂದು ವಿಶೇಷ ಅಂದರೆ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ ಹೊರತುಪಡಿಸಿ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಹಾಗಾಗಿ ಸುದೀಪ್ ಅವರ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸುದೀಪ್ ತಮ್ಮ ಕಂಚಿನ ಕಂಠಕ್ಕೆ ಹೆಸರುವಾಸಿಯಾಗಿದ್ದು ಗಂಭೀರ ಹಾಗೂ ಆಕ್ಷನ್ ಪಾತ್ರಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಅಲ್ಲದೆ ಅವರು ಹಿಂದಿ ಸಹಿತ ಬೇರೆ ಭಷೆಗಳಲ್ಲೂ ತಮ್ಮ ನಟನೆಯ ಮೂಲಕ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗಾಗಿ ಈ ಚಿತ್ರವು ಪಕ್ಕದ ರಾಜ್ಯಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯಬಹುದು ಎಂಬುದು ನಿರ್ಮಾಣಕಾರರ ನಿರೀಕ್ಷೆಯಾಗಿದೆ.

ಇನ್ನು, ಸುದೀಪ್ ಅವರು ಬಾಲಿವುಡ್ ನಲ್ಲೂ ತಮ್ಮ ಉಪಸ್ಥಿತಿ ಹೊಂದಿದ್ದು ಅವರ ಮುಖ ಅಷ್ಟೊಂದು ಖ್ಯಾತಿ ಪಡೆಯದೆ ಇದ್ದರೂ ಪ್ರಚಲಿತದಲ್ಲಂತೂ ಇದೆ. ಹಿಂದಿ ಭಾಷೆಯಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಉತ್ತರ ಭಾರತದಲ್ಲೂ ಈ ಚಿತ್ರ ಕಮಾಲ್ ಮಾಡಬಹುದು ಎಂಬ ನಿರೀಕ್ಷೆಯಿದೆ. ಆದರೆ ಈ ನಿಟ್ಟಿನಲ್ಲಿ ಆ ಎಲ್ಲ ಭಾಗಗಳಲ್ಲಿ ಇದರ ಪ್ರಚಾರ ಕಾರ್ಯ ಇನ್ನು ಉತ್ತಮವಾದರೆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನಬಹುದು.

ಈಗಾಗಲೇ ಟ್ರೈಲರ್ ನಲ್ಲಿ ಹೇಳಲಾಗಿರುವಂತೆ ಈ ಚಿತ್ರ ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಕುರಿತಾಗಿದ್ದು ಸಖತ್ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಇನ್ನು ಸುದೀಪ್ ಅವರು ತಮ್ಮ ರಗಡ್ ಲುಕ್ ನಲ್ಲಿ ಮಿಂಚಿದ್ದು ಅದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂಬ ಮಾತುಗಳು ಅಭಿಮಾನಿಗಳಿಂದ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಮೈನವಿರೇಳಿಸುವಂತಹ ಭರ್ಜರಿ ಹೊಡೆದಾಟ ಬಡಿದಾಟಗಳ ದೃಶ್ಯಗಳಿರುವುದಂತೂ ಪಕ್ಕಾ.

ಅದಾಗಲೇ ಚಿತ್ರದ ಅಡ್ವಾನ್ಸ್ ಬುಕಿಂಗ್ ಸಹ ಶುರುವಾಗಿದ್ದು ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ಕೆಲ ಮುಲಗಳಿಂದ ತಿಳಿದುಬಂದಿದೆ. ಈಗಾಗಲೇ ತೆಲುಗು ಭಾಷೆಯ ಸೂಪರ್ ಡುಪರ್ ಬ್ಲಾಕ್ ಬಸ್ಟರ್ ಪುಷ್ಪಾ ೨ ರಿಲೀಸ್ ಆಗಿ ತನ್ನ ಅದ್ಭುತ ನಾಗಾಲೋಟವನ್ನು ಮುನ್ನಡೆಸಿರುವುದು ಒಂದೆಡೆಯಾದರೆ ಡಿಸೆಂಬರ್ ೨೦ಕ್ಕೆ ತೆರೆಕಂಡ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಹ ಕರ್ನಾಟಕದಲ್ಲಿ ದಾಖಲೆ ಬರೆಯುತ್ತಿದೆ.

ಇವುಗಳ ಪೈಪೋಟಿಯ ಮಧ್ಯೆ ನಾಳೆ ಸುದೀಪ್ ಅವರ ಮ್ಯಾಕ್ಸ್ ಕೂಡ ರಿಲೀಸ್ ಆಗುತ್ತಿದ್ದು ಜನರು ಹೇಗೆಲ್ಲ ಹಾಗೂ ಯಾವೆಲ್ಲ ಚಿತ್ರಗಳಿಗೆ ಮಣೆ ಹಾಕಲಿದ್ದಾರೆ ಎಂಬುದು ತಿಳಿಯಬೇಕಿದೆ. ಅಷ್ಟಕ್ಕೂ ಇಬ್ಬರು ನಟರನ್ನು ಕೆಲ ದಿನಗಳ ಹಿಂದೆ ಮಾಧ್ಯಮದವರು ಇದೇ ಸಮಯದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದರ ಬಗ್ಗೆ ಕೇಳಿದಾಗ ಅವರು ಹೇಳಿದ್ದು ಇಷ್ಟೆ…ಚಿತ್ರದ ಕಂಟೆಂಟ್ ಎಂಬುದು ಉತ್ತಮವಾಗಿದ್ದರೆ ಚಿತ್ರಗಳ ಮಧ್ಯೆ ಯಾವ ರೀತಿಯ ಫೈಟೂ ಇರಲಾರದು ಹಾಗೂ ಪ್ರೇಕ್ಷಕರು ಎರಡೂ ಚಿತ್ರಗಳಿಗೆ ಸಮಾನ ರೀತಿಯಲ್ಲಿ ಪ್ರೀತಿಸುತ್ತಾರೆ ಎಂದು.

ನಿಜಕ್ಕೂ ಅವರು ಹೇಳಿದ್ದು ವಾಸ್ತವವೇ ಎನ್ನಬಹುದು. ಏಕೆಂದರೆ ತಮ್ಮ ದುಡಿದ ದುಡ್ಡನ್ನು ಚಿತ್ರಕ್ಕೆ ಹಾಕಿ ನೋಡುವ ಪ್ರತಿಯೊಬ್ಬ ಬಯಸುವುದು ಉತ್ತಮ ಕಥೆ ಹಾಗೂ ಅದ್ಭುತ ಮನರಂಜನೆ. ಯಾವ ಚಿತ್ರ ಇವೆರಡನ್ನು ಪ್ರಾಮಾಣಿಕವಾಗಿ ಹೊಂದಿರುತ್ತದೋ ಆ ಚಿತ್ರ ಸೋಲಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಿತ್ರ ಪರಿಣಿತರು.

ಮ್ಯಾಕ್ಸ್ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ವಿಜಯ್ ಕಾರ್ತಿಕೇಯನ್ ಅವರಿಂದ ನಿರ್ದೇಶಿಸಲ್ಪಟ್ಟಿದೆ. ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪ್ಪುಲಿ ತನು ಅವರು ಚಿತ್ರ ನಿರ್ಮಾಣದ ಜವಾಬ್ದಾರಿ ಹೊಂದಿದ್ದಾರೆ.

ಮುಖ್ಯ ಅಥವಾ ನಾಯಕ ನಟನಾಗಿ ಸುದೀಪ್ ಅವರು ನಟಿಸಿದ್ದು ಇತರೆ ಪ್ರಮುಖ ತಾರಾಬಳಗದಲ್ಲಿ ವಿಜಯಲಕ್ಷ್ಮಿ ಶರತ್ ಕುಮಾರ್, ಸಂಯುಕ್ತ ಹೊರನಾಡ್, ಸುಕೃತಾ ವಾಗ್ಲೆ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಉಗ್ರಮ್ ಮಂಜು ಮುಂತಾದವರು ನಟಿಸಿದ್ದಾರೆ.

Leave a Reply

Your email address will not be published. Required fields are marked *