ನಟ ವಿಜಯರಾಘವೇಂದ್ರ ಮಡದಿ ಸ್ಪಂದನ ರಾಘವೇಂದ್ರ ಹೃದಯಾಘಾತದಿಂದ ಸಾವು

Vijay Raghavendra with Wife Spandana Raghavendra

Photo pic from: Pinkvilla

ಇದು ನಿಜಕ್ಕೂ ಆಘಾತಕರ ಸುದ್ದಿ. ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಪಾತ್ರದಿಂದ ಬಾಲ ನಟನಾಗಿ ಖ್ಯಾತಿಗಳಿಸಿ ನಂತರ ನಾಯಕನಟನಾಗಿ ತಮ್ಮದೇ ಆದ ಛಾಪು ಮೂಡಿಸಿ ಅಭಿಮಾನಿ ಬಳಗ ಹೊಂದಿರುವ ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನಾ ರಾಘವೇಂದ್ರ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಅಷ್ಟಕ್ಕೂ, ವಿಜಯರಾಘವೇಂದ್ರ ಮಡದಿ ಸಮೇತ ವಿದೇಶಿ ಪ್ರವಾಸದಲ್ಲಿದ್ದರೆನ್ನಲಾಗಿದೆ. ಅವರು ಬ್ಯಾಂಕಾಂಕ್ ನಲ್ಲಿದ್ದಾಗ ಈ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಇನ್ನೂ ೧೯ ದಿನಗಳ ನಂತರ ಇಬ್ಬರೂ ಸತಿ-ಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವವರಿದ್ದರು. ಅಷ್ಟರಲ್ಲಿ ವಿಧಿಯಾಟದ ಮುಂದೆ ಎಲ್ಲವೂ ತಲೆಕೆಳಗಾಗಿದ್ದು ಈ ಘಟನೆ ಸದ್ಯ ವಿಜಯ್ ರಾಘವೇಂದ್ರ ಅವರ ಕುಟುಂಬ ಹಾಗೂ ಕನ್ನಡ ಚಿತ್ರರಂಗಕ್ಕೆ ಆಘಾತವನ್ನೇ ತಂದಿದೆ.

ಬ್ಯಾಂಕಾಂಕ್ ಪ್ರವಾಸದಲ್ಲಿದ್ದಾಗ ಸ್ಪಂದನಾ ಅವರು ಕಾರ್ಡಿಯಾಕ್ ಅರೆಸ್ಟ್ ಗೆ ಒಳಗಾಗಿದ್ದು ಈ ಸಂದರ್ಭದಲ್ಲಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಸಾಕಷ್ಟು ಪ್ರಯತ್ನಪಟ್ಟರಾದರೂ ಸ್ಪಂದನಾರವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಿಂಕ್ ವಿಲ್ಲಾ ಮಾಧ್ಯಮ ವರದಿ ಮಾಡಿದೆ.

ಅವರು ಕಡಿಮೆ ರಕ್ತದೊತ್ತಡ ಹಾಗೂ ಹೃದಯಾಘಾತವನ್ನು ಅನುಭವಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೂಲಗಳ ಪ್ರಕಾರ ವಿಜಯ್ ರಾಘವೇಂದ್ರ ಅವರು ತಮ್ಮ ಮಡದಿಯೊಂದಿಗೆ ಅಲ್ಲಿಯೇ ಇರುವುದಾಗಿ ತಿಳಿದುಬಂದಿದೆ.

ವಿಜಯ್ ರಾಘವೇಂದ್ರ ಅವರ ಕುಟುಂಬವು ಈ ಬಗ್ಗೆ ಹೇಳಿಕೆ ನೀಡಿದ್ದು ಸ್ಪಂದನಾ ಅವರ ಪಾರ್ಥೀವ ಶರೀರವನ್ನು ನಾಳೆವರೆಗೆ ಬೆಂಗಳೂರಿಗೆ ತರಲಾಗುತ್ತಿದ್ದು ತದನಂತರ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ ಎಂದು ತಿಳಿಸಿದೆ.

ವಿಜಯ್ ರಾಘವೇಂದ್ರ ಅವರು ೨೬ ಆಗಸ್ಟ್ ೨೦೦೭ ರಂದು ಮದುವೆಯಾಗಿದ್ದು ಅವರಿಗೆ ಶೌರ್ಯ ಎಂಬ ಹೆಸರಿನ ಮಗನಿದ್ದಾನೆ. ಸ್ಪಂದನಾ ಮೂಲತಃ ತುಳು ಭಾಷಿಕ ಕನ್ನಡತಿಯಾಗಿದ್ದು ಸಹಾಯಕ ಪೊಲೀಸ್ ಆಯುಕ್ತರಾದ ಬಿಕೆ ಶಿವರಾಂ ಅವರ ಮಗಳು.

ಸ್ಪಂದನಾ ರಾಘವೇಂದ್ರ ಅವರು ಸಿನೆ ಉದ್ಯಮದಲ್ಲಿ ತಮ್ಮ ಸಂಕ್ಷಿಪ್ತ ಪರಿಚಯ ಮೂಡಿಸಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ರವಿಚಂದ್ರನ್ ಅವರ ೨೦೧೬ರ ಅಪೂರ್ವ ಚಿತ್ರದಲ್ಲಿ ತಮ್ಮ ಚಿಕ್ಕ ಹಾಗೂ ಚೊಕ್ಕ ಪ್ರದರ್ಶನವನ್ನು ಸ್ಪಂದನಾ ನೀಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಬೆಂಗಳೂರಿನಲ್ಲಿರುವ ವಿಜಯ್ ರಾಘವೇಂದ್ರ ಅವರ ಕುಟುಂಬವು ಬ್ಯಾಂಕಾಂಕಿಗೆ ತೆರಳಿದ್ದು ಸ್ಪಂದನಾ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುವ ಎಲ್ಲ ಆಯೋಜನೆಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ವಿಜಯ್ ರಾಘವೇಂದ್ರ ಅವರ ಹೊಸ ಚಿತ್ರ “ಕದ್ದ” ಬಿಡುಗಡೆಗೆ ಸಿದ್ಧವಾಗುತ್ತಿದ್ದು ಇದೇ ತಿಂಗಳು ೨೫ ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಪ್ರಸ್ತುತ ವಿಜಯ್ ಅವರು ತಮ್ಮ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಾಕಷ್ಟು ನಿರತರಾಗಿದ್ದರು.

ವಿಜಯ್ ರಾಘವೆಂದ್ರ ಅವರ ಕಸಿನ್ ಹಾಗೂ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಹ ಹೃದಯಾಘಾತದಿಂದ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದ ನೆನಪು ಇನ್ನೂ ಜೀವಂತವಾಗಿರುವಾಗಲೇ ಇಂಥದ್ದೊಂದು ಘಟನೆ ಒಟ್ಟಾರೆ ಕುಟುಂಬಕ್ಕೆ ಬರಸಿಡಿಲಿ ಬಡಿದಂತಾಗಿದೆ. ಚಿತ್ರರಂಗ ಹಾಗು ಸಾಮಾಜಿಕ ವಲಯದ ಗಣ್ಯರಿಂದ ಈಗಾಗಲೇ ಕಂಬನಿಗಳು ಹರಿಸುಬರುತ್ತಿವೆ.

ನಾಳೆ ಬೆಂಗಳೂರಿನಲ್ಲಿ ಸ್ಪಂದನಾರವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವಂತಹ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂಬುದೇ ನಮ್ಮ ಪ್ರಾರ್ಥನೆ.

Leave a Reply

Your email address will not be published. Required fields are marked *