“ದೊಡ್ಡಣ್ಣ” ಚೀನಾದ ನೆರವಿನೊಂದಿಗೆ ಪಾಕಿಸ್ತಾನದ ಉಪಗ್ರಹ ಚಂದ್ರನೆಡೆಗೆ ಪಯಣಿಸಲಿದೆ..!

Representational Image

ಸಾಂದರ್ಭಿಕ ಚಿತ್ರ ಹಾಗೂ ಕೃಪೆ: ವಿಕಿಪೆಡಿಯಾ

ಈಗಾಗಲೇ ಚಂದ್ರಯಾನ-3 ಭಾರತದ ಪ್ರತಿಷ್ಠಿತ ಯೋಜನೆಯಾಗಿದ್ದು ಇಸ್ರೊ ಅದನ್ನು ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ಭಾರತ ಈಗ ಚಂದ್ರನ ಅಂಗಳದಲ್ಲಿ ಮೃದುವಾಗಿ ಇಳಿದಂತಹ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದ್ದರೆ ಚಂದ್ರನ ದಕ್ಷಿಣ ಧೃವದಲ್ಲಿ ತನ್ನ ಗಗನನೌಕೆ ಇಳಿಸಿರುವ ಜಗತ್ತಿನ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ.

ಕೆಲ ದಶಕಗಳ ಹಿಂದೆಯೆ ಅಮೆರಿಕ ಹಾಗೂ ಚೀನಾ ದೇಶಗಳು ಚಂದ್ರನ ಅಂಗಳದಲ್ಲಿ ತಮ್ಮ ತಮ್ಮ ನೌಕೆಗಳನ್ನು ಇಳಿಸಿರುವ ದಾಖಲೆಗಳನ್ನು ಬರೆದಿದ್ದು ಜಾಗತಿಕವಾಗಿ ಸ್ಪೇಸ್ ತಂತ್ರಜ್ಞಾನದಲ್ಲಿ ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ತಮ್ಮ ಪ್ರಭುತ್ವವನ್ನು ಹೊಂದಿವೆ.

ಸಹಜವಾಗಿ, ಹಲವಾರು ಮಂಚೂಣಿ ದೇಶಗಳು ತಾವು ಸಹ ಈ ಕ್ಷೇತ್ರದಲ್ಲಿ ಯಶಸ್ಸುಗಳಿಸಬೇಕೆಂಬ ಹಂಬಲ ಹೊಂದಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ಸಾಂಪ್ರದಾಯಿಕ ಬದ್ಧ ವೈರಿಗಳೆಂದೇ ಹೇಳಲಾಗುವ ಭಾರತ-ಪಾಕಿಸ್ತಾನ ದೇಶಗಳ ಮಧ್ಯೆ ಮುಂಚೆಯಿಂದಲೂ ಒಂದು ರೀತಿಯ ಅಲಿಖಿತ ಹೋಲಿಕೆ ಅಥವಾ ಸ್ಪರ್ಧೆಯಿದೆ.

ಪ್ರಸ್ತುತ ಭಾರತ ಪಾಕಿಸ್ತಾನಕ್ಕೆ ಹೋಲಿಸಿದರೆ ಅಗಾಧ ಪ್ರಗತಿ ಸಾಧಿಸಿದೆ. ಆ ದೇಶದೊಂದಿಗೆ ಭಾರತದ ಹೋಲಿಕೆ ಸದ್ಯ ಸಹ್ಯವಾದುದಲ್ಲ, ಆದರೂ ಪಾಕಿಸ್ತಾನಕ್ಕೆ ಭಾರತದೊಂದಿಗೆ ಯಾವುದಾದರೂ ವಿಷಯದಲ್ಲಿ ಏನಾದರೂ ಹೋಲಿಕೆ ಮಾಡಿಕೊಳ್ಳಲೇ ಬೇಕೆಂಬ ಮನಸ್ಥಿತಿ ಇರುವುದನ್ನು ಹಲವು ಬಾರಿ ಗಮನಿಸಬಹುದಾಗಿದೆ.

ಇದೀಗ ಭಾರತದ ಚಂದ್ರಯಾನದ ಯಶಸ್ಸು ಪಾಕಿಸ್ತಾನಕ್ಕೆ ಒಂದು ಬಗೆಯಲ್ಲಿ ನುಂಗಲಾರದ ಸಂಕಟವಾಗಿತ್ತೇನೋ ಗೊತ್ತಿಲ್ಲ, ಅದರ ಸಂಭಾವ್ಯ ಆ ರೀತಿ ಇದ್ದಿರಬಹುದಾದ ಬಯಕೆಯನ್ನು ಚೀನಾ ಮನಗಂಡಂತಿದ್ದು ತನ್ನ ಮಹತ್ವಾಕಾಂಕ್ಷೆಯ ಚಂದ್ರನೆಡೆಗೆ ಉಡಾಯಿಸಲು ಸಜ್ಜಾಗುತ್ತಿರುವ ರಾಕೆಟ್ ಯೋಜನೆಯಲ್ಲಿ ಪಾಕಿಸ್ತಾನದ ಕ್ಯೂಬ್ ಸ್ಯಾಟಲೈಟ್ ಒಂದನ್ನು ಹೊತ್ತೊಯ್ಯಲಾಗುವುದೆಂಬ ಭರವಸೆಯನ್ನು ಅದು ಪಾಕಿಸ್ತಾನಕ್ಕೆ ನೀಡಿದೆ ಎಂದು ವರದಿಯಾಗಿದೆ.

ಈ ಮೂಲಕ ಪಾಕಿಸ್ತಾನ ತಾನೂ ಸಹ ಅಂತರಿಕ್ಷ ಕ್ಷೇತ್ರದಲ್ಲಿ ಇರುವೆ ಎಂಬ ಸಂದೇಶವನ್ನು ಸಾರಲು ಹಾತೊರೆಯುತ್ತಿದೆ ಎನ್ನಬಹುದು.

ಚ್ಯಾಂಗ್ ಇ 6 ಮೂನ್ ಮಿಷನ್

ಚೀನಾ ತನ್ನ ಪ್ರತಿಷ್ಠಿತ ರೊಬೋಟಿಕ್ ಚ್ಯಾಂಗ್ ಇ 6 ಮೂನ್ ಮಿಷನ್ ಅನ್ನು 2024ರ ಮೊದಲಾರ್ಧದಲ್ಲಿ ಅನುಷ್ಠಾನಗೊಳಿಸಲು ಸಜ್ಜಾಗಿದ್ದು ಆ ಯೋಜನೆಯ ಒಂದು ಭಾಗವಾಗಿ ಅದು ಪಾಕಿಸ್ತಾನದ ICUBE-Q ಕ್ಯೂಬ್ ಸ್ಯಾಟ್ ಅನ್ನು ಚಂದ್ರನತ್ತ ಕೊಂಡೊಯ್ಯಲಿದೆ.

ಈ ಬಗ್ಗೆ ಚೀನಾ ಹೇಳಿಕೆಯನ್ನು ನೀಡಿದ್ದು ಅದರಲ್ಲಿ ಅದು ದೀರ್ಘವಾದ ಚರ್ಚೆಯ ನಂತರ ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ತನ್ನ ಚಂದ್ರನತ್ತ ಪಯಣದ ರಾಕೆಟ್ ಉಡಾವಣೆಯ ಭಾಗವಾಗಿ ಕೆಲವು ವೈಜ್ಞಾನಿಕ ಪರಿಕರಗಳನ್ನು ಫ್ರಾನ್ಸ್, ಇಟಲಿ, ಹಾಗೂ ಯುರೋಪಿಯನ್ ಸ್ಪೇಸ್ ಏಜನ್ಸಿಗಳಿಂದ ಹೊತ್ತೊಯ್ಯಲಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇವೆಲ್ಲದರ ಜೊತೆ ಪಾಕಿಸ್ತಾನದ ಕ್ಯೂಬ್ ಸ್ಯಾಟ್ ಅನ್ನು ಚೀನಾದ ರಾಕೆಟ್ ಆರ್ಬಿಟರ್ ನೊಂದಿಗೆ ಜೋಡಿಸಲಾಗುವುದೆಂದು ವರದಿಯಾಗಿದೆ.

ಚ್ಯಾಂಗ್ ಇ 6 ಮಿಷನ್ ಉದ್ದೇಶವೇನು?

ಈ ಚಂದ್ರ ಮಿಷನ್ನಿನ ಪ್ರಮುಖ ಉದ್ದೇಶ ಚಂದ್ರನ ಅಂಗಳದಲ್ಲಿರುವ ಧೂಳು ಹಾಗೂ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅದನ್ನು ಮರಳಿ ಭೂಮಿಗೆ ತರುವುದಾಗಿದೆ. ಚೀನಾದ ಗಗನನೌಕೆಯು ಆರ್ಬಿಟರ್, ಲ್ಯಾಂಡರ್, ಅಸೆಂಡರ್ ಹಾಗೂ ರಿ-ಎಂಟ್ರಿ ಮಾಡ್ಯೂಲ್ ಗಳನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಈ ಮಿಷನ್ನಿನ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಚೀನಾ ಸ್ಪೇಸ್ ಏಜನ್ಸಿಯ ಒಬ್ಬ ಹಿರಿಯ ಯೋಜನಾಗಾರರಾದ ಹು ಹಾವೊ ಅವರ ಪ್ರಕಾರ, ಎಲ್ಲವೂ ಯೋಜನಾಬದ್ಧವಾಗಿ ನಡೆದರೆ ಚೀನಾದ ರಾಕೆಟ್ ಚಂದ್ರನ ದಕ್ಷಿಣ ಧೃವದ ಒಂದು ಪ್ರದೇಶವಾದ ಐಟ್ಕೆನ್ ಬೆಸಿನ್ ಎಂಬಲ್ಲಿ ಇಳಿಯಲಿದ್ದು ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಲಿದೆ.

ಹು ಅವರ ಪ್ರಕಾರ, ಇದು ಯಶಸ್ವಿಯಾದಲ್ಲಿ ಇಂತಹ ಚಂದ್ರನ ದಕ್ಷಿಣದ ಪ್ರದೇಶದಿಂದ ಮಾದರಿ ಸಂಗ್ರಹಿಸಿ ಭೂಮಿಗೆ ತಂದ ಮೊದಲ ದೇಶ ಚೀನಾ ಆಗಲಿದೆ. ಇದು ಒಂದು ರೀತಿಯಲ್ಲಿ ಭಾರತ ಸಾಧಿಸಿದ ವಿಕ್ರಮವನ್ನು ಚೀನಾ ಅರಗಿಸಿಕೊಳ್ಳುತ್ತಿಲ್ಲವೇನೋ ಎಂಬ ಅನುಮಾನವನ್ನು ಸಹ ಹುಟ್ಟು ಹಾಕುತ್ತದೆ ಅಂದರೆ ತಪ್ಪಾಗಲಿಕ್ಕಿಲ್ಲ.

ಒಟ್ಟಿನಲ್ಲಿ ಚೀನಾದ ಈ ಮಿಷನ್ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ. ಇನ್ನು ಹರಿಯುವ ಗಂಗೆಯಲ್ಲಿ ತಮ್ಮ ಕೈಯನ್ನು ತೊಳೆದುಕೊಂಡರು ಎಂಬಂತಹ ಸ್ಥಿತಿ ಪಾಕಿಸ್ತಾನಕ್ಕೆ ಸಿಕ್ಕಿದ್ದು ಈ ಮೂಲಕ ಆ ದೇಶದ ಸ್ಪೇಸ್ ಏಜನ್ಸಿಯಾದ ಸುಪಾರ್ಕೊಗೆ ಇದರಿಂದ ನೈತಿಕ ಸ್ಥೈರ್ಯ ಸಿಗುವುದಂತೂ ಖಚಿತ.

ಪಾಕಿಸ್ತಾನಕ್ಕೇನಾಗಲಿದೆ ಕ್ಯೂಬ್ ಸ್ಯಾಟ್ ಲಾಭ?

ಇನ್ನು ಪಾಕಿಸ್ತಾನವು ತನ್ನಲ್ಲಿ ನಿರ್ಮಿತವಾದ ಚಿಕ್ಕ ಕ್ಯೂಬ್ ಸ್ಯಾಟ್ ಅನ್ನು ಒದಗಿಸಲಿದ್ದು ಈ ಮೂಲಕ ತಾನು ಚಂದ್ರನೆಡೆಗೆ ಹೊದ ದೇಶಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲಿದೆ. ವಾಸ್ತವದಲ್ಲಿ ಪಾಕಿಸ್ತಾನದ ಕ್ಯೂಬ್ ಸ್ಯಾಟ್ ಉಪಗ್ರಹದಿಂದ ಯಾವ ರೀತಿಯ ಲಾಭವೂ ಪಾಕಿಸ್ತಾನಕ್ಕೆ ಸಿಗುವುದಿಲ್ಲ, ಇದು ಕೇವಲ ಚಂದ್ರನೆಡೆಗೆ ನಾವು ಹೋಗಿದ್ದೇವೆ ಎಂಬುದನ್ನು ಮಾತ್ರ ಹೇಳಿಕೊಳ್ಳಲು ಸೀಮಿತವಾಗಿರುತ್ತದಷ್ಟೆ ಎನ್ನಬಹುದು.

Leave a Reply

Your email address will not be published. Required fields are marked *