ಜೀವನದಲ್ಲಿ ನೈತಿಕ ಮೌಲ್ಯಗಳ ಮಹತ್ವ ಸಾರುವ ಜಪಾನಿ ಸಂಸ್ಕೃತಿಯ ಈ ಪರಿಕಲ್ಪನೆಗಳ ಬಗ್ಗೆ ನಿಮಗೆ ತಿಳಿದಿದೆಯೇ?

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೈತಿಕ ಮೌಲ್ಯಗಳಿಗೆ ಅಪಾರವಾದ ಮನ್ನಣೆ ನೀಡಲಾಗಿದೆ. ಮನುಷ್ಯ ಜೀವನದಲ್ಲಿ ಸಾಗುತ್ತಿರುವಾಗ ಅನೇಕ ಸಲ ಕೆಲ ಸಂದರ್ಭಗಳಲ್ಲಿ ಅನಪೇಕ್ಷೀತ ಪರಿಸ್ಥಿತಿಗಳನ್ನು ಎದುರಿಸಬಹುದು.

ಪ್ರತಿಯೊಂದು ಪರಿಸ್ಥಿತಿಗಳು ಉತ್ತಮವಾದುದೇ ಎಂದು ಹೇಳಲಾಗದು. ಕೆಲವೊಮ್ಮೆ ನಮ್ಮನ್ನು ಪ್ರಚೋದಿಸುವಂತಹ, ಅಡ್ಡದಾರಿಗೆ ತಳ್ಳುವಂತಹ ಪ್ರಸಂಗಗಳು ಬರಬಹುದು. ಇಂತಹ ಸಂದರ್ಭದಲ್ಲಿ ನಾವು ಕೆಳಕ್ಕೆ ಕುಸಿಯದಂತೆ ತಡೆಯುವುದೇ ನಮ್ಮಲ್ಲಿರುವ ಅಥವಾ ಬೆಳೆಸಿಕೊಂಡಿರುವ ನೈತಿಕ ಮೌಲ್ಯಗಳು. ಸಹನೆ, ಮೌನ, ಸಹಾನುಭೂತಿ, ಶಾಂತತೆ, ಕರುಣೆ, ಕೃತಜ್ಞತೆ ಇತ್ಯಾದಿ ಮಾನವೀಯ ಮೌಲ್ಯಗಳ ಮಹತ್ವ ನಮ್ಮ ಸನಾತನ ಶಾಸ್ತ್ರಾದಿಗಳಲ್ಲಿ ಸಾಕಷ್ಟು ಉಲ್ಲೇಖಿಸಲಾಗಿದೆ.


Pexels

ಇನ್ನು, ಈ ರೀತಿಯ ನೀತಿಯ ಅಭ್ಯಾಸಗಳು ಕೇವಲ ಭಾರತದಲ್ಲಷ್ಟೇ ಪ್ರಚಲಿತದಲ್ಲಿವೆ ಎಂದು ಹೇಳಲು ಸಾಧ್ಯವಿಲ್ಲ. ಆಯಾ ಪ್ರದೇಶಗಳ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಕ್ಕನುಸಾರವಾಗಿ ವಿವಿಧ ದೇಶಗಳಲ್ಲೂ ಅವುಗಳದ್ದೇ ಆದ ಮಾನವೀಯ ಮೌಲ್ಯಗಳ ಬಗ್ಗೆ ಪರಿಕಲ್ಪನೆಗಳಿವೆ.

ಇಂದು ಈ ಲೇಖನದಲ್ಲಿ ಜಪಾನಿ ಸಂಸ್ಕೃತಿಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಐದು ಪ್ರಮುಖ ಪರಿಕಲ್ಪನೆಗಳ ಬಗ್ಗೆ ತಿಳಿಯೋಣ. ಈ ಮೂಲಕ ಜಪಾನಿ ಜನರು ಸಹ ಜೀವನದ ಮೌಲ್ಯಗಳ ಬಗ್ಗೆ ಅದೆಷ್ಟು ಅದ್ಭುತವಾಗಿ ತಿಳಿದುಕೊಂಡಿದ್ದಾರೆ ಎಂಬುದು ತಿಳಿದುಬರುತ್ತದೆ.

ಕಿಜುನಾ:

ಇತರರೊಡನೆ ಗಟ್ಟಿಯಾದ ಭಾವನಾತ್ಮಕ ಸಂಬಂಧವನ್ನು ಪೋಷಿಸುವ ಅಂಶವನ್ನೇ ಜಪಾನಿ ಸಂಸ್ಕೃತಿಯಲ್ಲಿ ಕಿಜುನಾ ಎಂದು ಹೇಳಲಾಗುತ್ತದೆ. ನಿಮ್ಮ ಸ್ನೇಹಿತರಾಗಲಿ ಅಥವಾ ಕುಟುಂಬದವರಾಗಲಿ ಅವರ ಬಗ್ಗೆ ಕಾಳಜಿ ಹೊಂದಿರಬೇಕು ಎಂಬುದನ್ನು ಈ ಮೌಲ್ಯ ಎತ್ತಿ ತೋರಿಸುತ್ತದೆ.

ಒಮೊಯಾರಿ:

ಇದು ಕೀಜುನಾದ ವಿಸ್ತರಿತವಾದ ಭಾಗ ಎಂದರೂ ತಪ್ಪಾಗದು. ಇದು ಮುಖ್ಯವಾಗಿ ಇತರರ ಬಗ್ಗೆ ಸಹಾನುಭೂತಿ ಹೊಂದಿರುವ ಪ್ರಮುಖ ಗುಣವಾಗಿದೆ. ಇತರರು ಯಾವ ರೀತಿ ಯೋಚಿಸುತ್ತಿದ್ದಾರೆ, ಅವರಲ್ಲಿರುವ ದುಗುಡ ದುಮಾನಗಳಾದರೂ ಏನು ಎಂಬುದರ ಬಗ್ಗೆ ಗ್ರಹಿಸಿ ಅವರಿಗೆ ಬೇಕಾದ ಧೈರ್ಯ, ಬೆಂಬಲ ಅಥವಾ ಸಾಂತ್ವನ ನೀಡುವ ಗುಣ ಇದಾಗಿದೆ. ಇದು ವೈಯಕ್ತಿಕವಾಗಿ ಪರಸ್ಪರರ ಮಧ್ಯೆ ಉತ್ತಮ ಬಾಂಧವ್ಯ ಮೂಡಿಸಲು ಸಹಾಯ ಮಾಡುತ್ತದೆ.

ಐಸಾತ್ಸು:

ನಾವು ಇನ್ನೊಬ್ಬರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ಅವರೇನಾದರೂ ನಿಮಗೆ ಗೌರವ ತೋರಿದರೆ ಅದನ್ನು ಸ್ವೀಕರಿಸಿ ಅದಕ್ಕೆ ಪ್ರತಿಯಾಗಿ ನೀವು ಯಾವ ರೀತಿ ಗೌರವ ನೀಡಬೇಕು ಎಂಬುದನ್ನು ಸೂಚಿಸುವುದೇ ಐಸಾತ್ಸು. ಇದು ಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ನೀವು ಭೇಟಿ ಮಾಡಿದಾಗ ನಿಮ್ಮ ನಡವಳಿಕೆ ಯಾವ ರೀತಿ ಇರಬೇಕು ಎಂಬುದನ್ನು ಸೂಚಿಸುವ ಮೌಲ್ಯ ಇದಾಗಿದೆ.

ವಾ:

ಸಾಮರಸ್ಯ, ಹೊಂದಾಣಿಕೆ, ಏಕತೆ ಇವೆಲ್ಲವನನ್ನು ಪ್ರತಿನಿಧಿಸುವ ನೀತಿ ಆಧಾರಿತ ಮೌಲ್ಯ ಇದಾಗಿದೆ. ಸಂಬಂಧಗಳಲ್ಲಿ ಒಮ್ಮೊಮ್ಮೆ ಅನೇಕ ರೀತಿಯ ಭಿನ್ನಾಭಿಪ್ರಾಯಗಳು, ಸಂಘರ್ಷಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಅವುಗಳನ್ನು ಹೊಂದಾಣಿಕೆ, ಸಾಮರಸ್ಯದೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಿ ಏಕತೆಯಿಂದಿರುವ ಪಾಠವನ್ನು ಇದು ಹೇಳುತ್ತದೆ.

ಸುಕಿಯಾಯಿ:

ಮನುಷ್ಯ ಒಬ್ಬ ಸಾಮಾಜಿಕ ಜೀವಿ. ಅಂದ್ರೆ ನಾವು ಒಮ್ಮೊಮ್ಮೆ ಏಕಾಂಗಿಯಾಗಿ ಇರಲು ಬಯಸಿದರೂ ಮೂಲತಃ ಎಲ್ಲರೊಂದಿಗೆ ಬೆರೆತು ಜೀವನ ನಡೆಸುವ ಗುಣ ರಕ್ತಗತವಾಗಿ ಬಂದಿರುತ್ತದೆ. ಹೀಗೆ ನಮ್ಮವರೊಂದಿಗೆ ಬೆರೆತು ಅದ್ಭುತ ಸಮಯವನ್ನು ಕಳೆಯುವ ಪಾಠವನ್ನು ಈ ಅಂಶ ಹೇಳುತ್ತದೆ.

ಈ ಮೇಲಿನ ಎಲ್ಲ ನೀತಿಪಾಠಗಳನ್ನು ನಾವು ನಮ್ಮ ಸಂಸ್ಕೃತಿಯಲ್ಲೂ ಕಾಣಬಹುದಾಗಿದೆ. ಆದಾಗ್ಯೂ ಹಲವರಿಗೆ ಜಪಾನಿ ಜನರ ಜೀವನಶೈಲಿಯ ಬಗ್ಗೆ ಅಪಾರ ಕುತೂಹಲವಿರುತ್ತದೆ. ನಿಮಗೂ ಸಹ ಅವರ ಜೀವನಶೈಲಿ ಸಾಕಷ್ಟು ಪ್ರಭಾವ ಬೀರಿದ್ದರೆ ಈ ಜಪಾನಿ ಮೌಲ್ಯಗಳನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮಗೆ ಲಾಭವೇ ಹೊರತು ಕಳೆದುಕೊಳ್ಳುವುದು ಏನೂ ಇಲ್ಲ…!

Leave a Reply

Your email address will not be published. Required fields are marked *