ಸಾಂದರ್ಭಿಕ ಚಿತ್ರ, ಕೃಪೆ: Pexels
ಚಂದ್ರಯಾನ-3 ಅಡಿಯಲ್ಲಿ ಇಸ್ರೊ ತನ್ನ ಇನ್ನೊಂದು ಮಹತ್ವದ ಪ್ರಕ್ರಿಯೆಯಾದ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅನ್ನು ಇಂದು ಮಧ್ಯರಾತ್ರಿ ಅಂದರೆ ಅಗಸ್ಟ್ ಒಂದರಂದು ಚಾಲಿತಗೊಳಿಸಲಿದೆ.
ವೈಶ್ವಿಕ ಸ್ತರದಲ್ಲಿ ಐದನೇ ದೊಡ್ಡ ಆರ್ಥಿಕತೆಯಾಗಿ ಗಮನಸೆಳೆದಿರುವ ಭಾರತ ಇಂದು ಹಲವಾರು ಕ್ಷೇತ್ರಗಳಲ್ಲಿ ಹಿಂದೆಂದಿಗಿಂತಲೂ ಅದ್ಭುತ ಸಾಧನೆ ಮಾಡುತ್ತ ತನ್ನ ಅಭಿವೃದ್ಧಿಯ ನಾಗಾಲೋಟವನ್ನು ಮುಂದುವರೆಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ಅಂತರಿಕ್ಷ ಕ್ಷೇತ್ರದಲ್ಲಿಯೂ ಭಾರತ ಹಲವು ಸಾಧನೆಗಳನ್ನು ಮಾಡಿದೆ. ದೇಶದ ಸ್ಪೇಸ್ ತಂತ್ರಜ್ಞಾನ ಸಂಸ್ಥೆಯಾದ ಪ್ರತಿಷ್ಠಿತ ಇಸ್ರೊ ಈಗಾಗಲೇ ತನ್ನ ಗುರುತನ್ನು ಜಾಗತಿಕವಾಗಿ ಮೂಡಿಸಿದೆ. ಇತ್ತೀಚಿಗಷ್ಟೇ ಇಸ್ರೊ ಚಂದ್ರಯಾನ-೩ ಅಡಿಯಲ್ಲಿ ಯಶಸ್ವಿಯಾಗಿ ರಾಕೆಟ್ ಅನ್ನು ಉಡಾಯಿಸಿದೆ. ನಿರೀಕ್ಷೆಗೆ ಹಾಗೂ ಲೆಕ್ಕಾಚಾರಕ್ಕೆ ತಕ್ಕಂತೆ ರಾಕೆಟ್ ತನ್ನ ನಿಗದಿತ ಕಕ್ಷೆಗಳನ್ನು ಒಂದೊಂದಾಗಿ ದಾಟುತ್ತ ತನ್ನ ಯಾನವನ್ನು ಮುಂದುವರೆಸಿದೆ.
ಇದೀಗ, ಇಸ್ರೊ ತನ್ನ ಇನ್ನೊಂದು ಮಹತ್ವದ ಪ್ರಕ್ರಿಯೆಯಾದ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅನ್ನು ಇಂದು ಮಧ್ಯರಾತ್ರಿ ಅಂದರೆ ಅಗಸ್ಟ್ ಒಂದರಂದು ಚಾಲಿತಗೊಳಿಸಲಿದೆ. ಈಗಾಗಲೇ ರಾಕೆಟ್ ನೊಂದಿಗಿರುವ ಗಗನನೌಕೆ ವ್ಯಾಕ್ಯೂಮ್ ಸ್ಪೇಸ್ ನಲ್ಲಿ ನಿಗದಿತ ಹದಿನೈದು ದಿನಗಳನ್ನು ಪೂರೈಸಿದ್ದು ಇಂದು ರಾತ್ರಿ ಚಂದ್ರನ ಕಕ್ಷೆಯೆಡೆಗೆ ಕಾಲಿಡಲಿದೆ.
ಇಂದು ಮಧ್ಯರಾತ್ರಿ 12 ರಿಂದ 1 ಗಂಟೆಯ ಮಧ್ಯೆ (ಆಗಸ್ಟ್ 1) ಈ TLI ಪ್ರಕ್ರಿಯೆಯನ್ನು ಚಾಲನೆಗೊಳಿಸಲಿದೆ ಎಂದು ಇಂಡಿಯಾ ಟುಡೆ ಮಾಧ್ಯಮ ವರದಿಮಾಡಿದೆ. ಈ ಒಟ್ಟಾರೆ ಪ್ರಕ್ರಿಯೆ ಸಂಪನ್ನವಾಗಲು 28 ರಿಂದ 31 ನಿಮಿಷಗಳಷ್ಟು ಕಾಲಾವಧಿ ತಗುಲಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಟ್ರಾನ್ಸ್ ಲೂನಾರ್ ಇಂಜೆಕ್ಷನ್ (TLI) ಅಂದರೇನು?
ಗಗನನೌಕೆಯೊಂದು ಅಂತರಿಕ್ಷದಲ್ಲಿ ತನ್ನ ನಿಗದಿತ ಚಂದ್ರನ ಕಕ್ಷವನ್ನು ಸೇರಲು ಅದರ ಸಾಧನವನ್ನು ಪ್ರಚೋದಿಸುವ ಒಂದು ತಂತ್ರವನ್ನೇ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅಥವಾ ಟಿಎಲ್‍ಐ ಎಂದು ಕರೆಯಬಹುದಾಗಿದೆ.
ಅಂದರೆ ಭೂಮಿಯ ಗುರುತ್ವದ ಬಲದಿಂದ ಪ್ರತ್ಯೇಕವಾಗಿ ಚಂದ್ರನ ಕಕ್ಷೆ ತಲುಪಲು ರಾಕೆಟಿಗೆ ಹೆಚ್ಚಿನ ಬಲ ಹಾಗೂ ವೇಗದ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ರಾಕೆಟಿಗೆ ಒಂದು ನಿರ್ದಿಷ್ಟ ವ್ಯವಸ್ಥೆಯಲ್ಲಿ ಇಂಧನ ಸುಡುವಿಕೆಯ ಮೂಲಕ ಹೆಚ್ಚಿನ ಬಲ ಹಾಗೂ ವೇಗ ದಯಪಾಲಿಸುವ ರಾಸಾಯನಿಕಗಳನ್ನೊಳಗೊಂಡ ಒಂದು ಪ್ರಕ್ರಿಯೆ ಇದಾಗಿದೆ.
ರಾಕೆಟ್ ಈ ರೀತಿಯಾಗಿ ಹೆಚ್ಚಿನ ಶಕ್ತಿ ಹಾಗೂ ವೇಗ ಪಡೆದಾಗ ತನ್ನ ಭೂಕಕ್ಷೆಯಿಂದ ಬೇರ್ಪಟ್ಟು ವಿಭಿನ್ನವಾದ ಕೇಂದ್ರದ ಕಕ್ಷೆಯೆಡೆ ತನ್ನ ದಿಕ್ಕು ಬದಲಾಯಿಸುತ್ತದೆ. ಇದು ಸಂಕೀರ್ಣ ಪ್ರಕ್ರಿಯೆಯಾಗಿದ್ದು ಇದರ ಮೂಲಕವೇ ನೌಕೆಗೆ ಚಂದ್ರನೆಡೆ ಕರಾರುವಕ್ಕಾಗಿ ಹೋಗುವ ನಿರ್ದೇಶನವನ್ನು ಇಲ್ಲಿ ಸೆಟ್ ಮಾಡಲಾಗುತ್ತದೆ.
ಇಲ್ಲಿ ಇಂಧನ ಸುಡುವಿಕೆ ಬಲು ಮಹತ್ವದ ಪಾತ್ರವಹಿಸುತ್ತದೆ, ಏಕೆಂದರೆ ಇದರಲ್ಲಿ ನಿಖರವಾಗಿ ಸೆಟ್ ಮಾಡಲಾಗುವ ಸುಡುವಿಕೆಯ ಸಮಯವೇ ಮುಂದೆ ನೌಕೆಯು ಚಂದ್ರನ ಅತಿ ಸನೀಹದ ಬಿಂದುವಿನತ್ತ ತಲುಪಿಸಲಿದೆ.
ಇಲ್ಲಿಯವರೆಗೂ ರಾಕೆಟ್ ತನ್ನ ನಿಗದಿತ ಕಕ್ಷೆಯನ್ನು ಸುಸೂತ್ರವಾಗಿ ಪೂರ್ಣಗೊಳಿಸಿದ್ದು ಇನ್ನು ಚಂದ್ರನ ಕಕ್ಷೆಯನ್ನು ಹಿಡಿಯಬೇಕಿದೆ. ಈ ಚಂದ್ರಯಾನ ಪ್ರಕ್ರಿಯೆಗಳಲ್ಲಿರುವ ಕೆಲವು ಮಹತ್ತರ ಹಂತಗಳಲ್ಲಿ ಇದು ಸಹ ಒಂದು ಹಂತವಾಗಿದ್ದು ಇದನ್ನು ಇಸ್ರೋ ಇಂದು ರಾತ್ರಿ ನೆರವೇರಿಸಲಿದೆ.
ಒಂದೊಮ್ಮೆ ಚಂದ್ರನ ಕಕ್ಷೆ ಪ್ರವೇಶಿಸಿತೆಂದರೆ ತದನಂತರ ನೌಕೆಯು ಅಲ್ಲಿ ನಿಗದಿಪಡಿಸಿದಂತೆ ಸುತ್ತಿಗಳನ್ನು ಹಾಕುತ್ತ ಪೂರ್ವಭಾವಿಯಾಗಿ ನಿರ್ದಿಷ್ಟಪಡಿಸಿದಂತಹ ಸ್ಥಳಕ್ಕೆ ತೆರಳಿ ಅಲ್ಲಿಂದ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಹಂತಗಳು ಜರುಗಲಿವೆ.
ಚಂದ್ರಯಾನ-3 ಗಗನನೌಕೆಯು ತನ್ನ ಜೊತೆ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಕೊಂಡೊಯ್ದಿದ್ದು ಅವುಗಳ ಮೂಲಕ ಚಂದ್ರನ ಕುರಿತಾದ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸುವ ಯೋಜನೆ ಹೊಂದಿದೆ. ಈ ಮೂಲಕ ಭಾರತೀಯ ವಿಜ್ಞಾನಿಗಳಿಗೆ ಚಂದ್ರನ ಕುರಿತಾದ ಇನ್ನಷ್ಟು ಸ್ಪಷ್ಟವಾದ ಹಾಗೂ ಮಹತ್ವವಾದ ಮಾಹಿತಿ ಸಿಗುವ ಸಾಧ್ಯತೆಯಿದೆ.
ಈ ಯೋಜನೆಯ ಇನ್ನೊಂದು ವಿಶೇಷತೆ ಎಂದರೆ ಈ ಬಾರಿ ಇಸ್ರೊ ತನ್ನ ನೌಕೆಯನ್ನು ಚಂದ್ರನ ಇಲ್ಲಿಯವರೆಗೂ ಯಾರೂ ಅನ್ವೇಷಿಸದ ಅಂದರೆ ದಕ್ಷಿಣ ಗೋಳಾರ್ಧದಲ್ಲಿ ಲ್ಯಾಂಡ್ ಮಾಡಿಸುವ ಇರಾದೆ ಹೊಂದಿದ್ದು ಜಗತ್ತಿನಾದ್ಯಂತ ಎಲ್ಲ ಖಗೋಳ ಶಾಸ್ತ್ರಜ್ಞರ ಚಿತ್ತ ಇದರ ಮೇಲೆ ನೆಟ್ಟಿದೆ ಎನ್ನಬಹುದು.
ಚಂದ್ರಯಾನ-3 ಅನ್ನು ಜುಲೈ 14, 2023 ರಂದು ಆಂಧ್ರಪ್ರದೇಶದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಇಸ್ರೊದಿಂದ ಉಡಾಯಿಸಲಾಗಿತ್ತು. ಅಂದಿನಿಂದ ಈ ನೌಕೆ ತನ್ನ ನಿಗದಿತ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸುತ್ತ ಸಾಗಿದೆ.