ಮಾಲ್ ಲೂಟಿ ಮಾಡುವುದು ಎಂದರೆ ಸುಲಭವೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಹೌದು ಇದು ಬಲು ಸುಲಭ ಎಂದು ತೋರಿಸಿಕೊಟ್ಟಿದೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಘಟನೆ. ಹೌದು ಅಕ್ಷರಶಃ ನೂರಾರು ಜನರು ಭದ್ರತೆಯನ್ನೂ ಮೀರಿಸಿ ಮಾಲಿನೊಳಗೆ ನುಗ್ಗಿ ಕೈಗೆ ಸಿಕ್ಕ ಎಲ್ಲ ವಸ್ತುಗಳನ್ನು ಲೂಟಿ ಮಾಡಿ ಇತರೆ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ ಘಟನೆ ಪಾಕಿಸ್ತಾನದ ಕರಾಚಿಯಿಂದ ವರದಿಯಾಗಿದೆ.
ಕಳೆದ ಶುಕ್ರವಾರದಂದು ಪಾಕಿಸ್ತಾನದ ಕರಾಚಿಯಲ್ಲಿರುವ ಡ್ರೀಮ್ ಬಜಾರ್ ಎಂಬ ಮಾಲ್ ಜನರಿಗೆ ಅತಿ ಅಗ್ಗದ ಬೆಲೆಯಲ್ಲಿ ಸಾಮಾನು ಮಾರಾಟ ಮಾಡುವ ಉದ್ದೇಶದಿಂದ ದೊಡ್ಡ ವಿನಾಯಿತಿಯನ್ನು ಘೋಷಿಸಿತ್ತು. ನಿಜಕ್ಕೂ ಜನರಿಗೆ ಹಾಗೂ ಮಾಲಿಗೆ ಒಂದು ಉತ್ತಮ ದಿನವಾಗಬೇಕಿದ್ದ ಶುಕ್ರವಾರ ಮಾಲಿಗೆ ಮಾತ್ರ ನರಕಯಾತನೆಯಾದಂತಿತ್ತು.
ಪಾಕಿಸ್ತಾನಿ ಕರೆನ್ಸಿಯ ಕನಿಷ್ಠ 50 ರೂ. ನಿಂದ ಮಾರಾಟದ ಭರವಸೆ ನೀಡಿದ್ದ ಡ್ರೀಮ್ ಬಜಾರ್ ಇನ್ನೆಂದಿಗೂ ಇಂತಹ ಡ್ರೀಮ್ ಕಾಣಲು ಸಾಧ್ಯವಿಲ್ಲದಂತಹ ಸ್ಥಿತಿಗೆ ತಲುಪಿತು. ಅದ್ಭುತ ಮಾರಾಟದ ಅನುಭವ ಪಡೆಯಬೇಕಿದ್ದ ಆ ದಿನ ಕೊನೆಯಾಗಿದ್ದು ಮಾತ್ರ ಹಿಂಸೆ ಹಾಗೂ ವಿಧ್ವಂಸಕ ಕೃತ್ಯದಿಂದ ಎಂದರೆ ನಂಬಲೇಬೇಕು.
ಅಷ್ಟಕ್ಕೂ ಈ ಘಟನೆಯ ಸಾಕಷ್ಟು ಮುಂಚೆ ಸಾಮಾಜಿಕ ಮಾಧ್ಯಮದಲ್ಲಿ ಡ್ರೀಮ್ ಬಜಾರ್ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಬಟ್ಟೆಗಳಿಂದ ಹಿಡಿದು ಹೋಮ್ ವೇರ್ ವಸ್ತುಗಳವರೆಗೆ ಎಲ್ಲವೂ ಕೈಗೆಟಕುವ ಬೆಲೆಯಲ್ಲಿ ಮಾರಾಟ ಮಾಡುವ ಭರವಸೆ ನೀಡಲಾಗಿತ್ತು ಮಾಲ್ ನಡೆಸುವವರಿಂದ.
ಈ ಬಗ್ಗೆ ತಿಳಿದ ಸಾವಿರಾರು ಜನರು ಶುಕ್ರವಾರದಂದು ಮಾಲ್ ಮುಂದೆ ಜಮಾಯಿಸಿದ್ದರು. ಈ ಪರಿಯಲ್ಲಿ ಜನರು ಬರುತ್ತಾರೆಂದು ಬಹುಶಃ ಊಹಿಸದಿದ್ದ ಮಾಲ್ ಆಡಳಿತ ಮಂಡಳಿಗೆ ಅಷ್ಟೊಂದು ಜನರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಯಿತು.
ಇನ್ನು ನಮ್ಮಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರಿತ ಮಾಲ್ ಮಾಂಡಳಿ ಕೊನೆಗೆ ಮಾಲ್ ಅನ್ನು ಮುಚ್ಚಲು ಪ್ರಯತ್ನಿಸಿದಾಗ ದೊಣ್ಣೆ ಹಿಡಿದಿದ್ದ ಜನರು ಗುಂಪು ಗುಂಪಾಗಿ ಗಾಜಿನ ಬಾಗಿಲು ಒಡೆದು ಮಾಲ್ ಒಳನುಗ್ಗಲು ಪ್ರಯತ್ನಿಸಿದರು.
ಪರಿಸ್ಥಿತಿ ಎಷ್ಟೊಂದು ಪ್ರಕ್ಷುಬ್ಧವಾಯಿತೆಂದರೆ ನಗರದ ಟ್ರಾಫಿಕ್ ನಿಂತೇ ಬಿಟ್ಟಿತು. ಇನ್ನಷ್ಟು ಸಾವಿರಾರು ಜನರು ಮಾಲಿನ ಮುಂದೆ ಜಮಾಯಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲ ಪ್ರತ್ಯಕ್ಷ ದರ್ಶಿಗಳು ಮಾಧ್ಯಮಕ್ಕೆ ಹೇಳುವ ಪ್ರಕಾರ, ಕಟ್ಟಡದೊಳಗೆ ಸಾಕಷ್ಟು ಆಸ್ತಿ-ಪಾಸ್ತಿಯನ್ನು ನಾಶಮಾಡಲಾಯಿತು. ಕೆಲ ಸಂಖ್ಯೆಯಲ್ಲಷ್ಟೆ ಇದ್ದ ಭದ್ರತಾ ಸಿಬ್ಬಂದಿಗಳಿಗೆ ಪರಿಸ್ಥಿತಿ ನಿಯಂತಿರುವುದು ಅಸಾಧ್ಯವಾಗಿತ್ತು.
ಪೊಲೀಸರು ಹೊರಗಡೆ ನಿಂತಿದ್ದ ಜನರ ಮೇಲೆ ಮಾತ್ರ ಲಾಠಿ ಬೀಸುತ್ತಿದ್ದುದಾಗಿ ಹಲವು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಅಲ್ಲಿನ ಪರಿಸ್ಥಿತಿ ನಿಯಂತ್ರಣ ಮಾಡುವುದು ಕೈಮೀರಿ ಹೋಗಿತ್ತು.
ಇನ್ನು ಮಾಲಿನೊಳಗೆ ನುಗ್ಗಿದ್ದ ಹಲವರು ತಮಗೆ ಸಿಕ್ಕಿದ್ದ ಬಟ್ಟೆ ಸರಂಜಾಮುಗಳನ್ನು ಲೂಟಿ ಮಾಡುತ್ತ ಸೆಲ್ಫಿ ವಿಡಿಯೋ ಸಹ ಮಾಡುತ್ತಿದ್ದರೆಂಬುದು ಅಲ್ಲಿ ಉಪಸ್ಥಿತರಿದ್ದ ಹಲವರ ಹೇಳಿಕೆಯಿಂದ ತಿಳಿದುಬಂದಿದೆ. ಮಧ್ಯಾಹ್ನ 3 ಗಂಟೆಗೆ ಮಾಲ್ ಬಾಗಿಲು ತೆರೆಯುತ್ತಿದ್ದಂತೆ ಈ ಘಟನೆ ವಿಕೃತ ಸ್ವರೂಪ ಪಡೆದು ಕೇವಲ ಮೂವತ್ತು ನಿಮಿಷಗಳಲ್ಲೇ ಅಂದರೆ 3:30ರ ವರೆಗೆ ಅಲ್ಲಿದ್ದ ವಸ್ತುಗಳನ್ನು ಕ್ಲಿನ್ ಸ್ವೀಪ್ ಮಾಡಲಾಯಿತು ಎನ್ನುತ್ತಾರೆ ಇನ್ನೊಬ್ಬ ಪ್ರತ್ಯಕ್ಷದರ್ಶಿ ಎಂದು ಮಾಧ್ಯಮ ವರದಿ ತಿಳಿಸಿದೆ.
ಈ ಕೃತ್ಯ ನೋಡುತ್ತಾ ತಮ್ಮಿಂದ ಏನು ಮಾಡಲಾಗದೆ ಮೂಕವೇತನೆಯಿಂದ ಮಾಲಿನ ಉದ್ಯೋಗಿಗಳು ದಿಗ್ಭ್ರಾಂತರಾಗಿದ್ದರು ಎಂದು ತಿಳಿದುಬಂದಿದ್ದು ಮೂಲತಃ ಹೊರದೇಶದಲ್ಲಿರುವ ಪಾಕಿಸ್ತಾನಿ ಮೂಲದ ವ್ಯಕ್ತಿಗಳಿಂದ ಈ ಮಾಲ್ ನಿರ್ಮಾಣವಾಗಿತ್ತು ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಬ್ಬ ಪಾಕಿಸ್ತಾನಿ ಎಕ್ಸ್ ಬಳಕೆದಾರ ಈ ಬಗ್ಗೆ ಪ್ರತಿಕ್ರಯಿಸುತ್ತ, “ಒಂದು ವೇಳೆ ದೇಶಕ್ಕಾಗಿ ಈ ರೀತಿ ಜನರು ಮುನ್ನುಗ್ಗಿ ಬಂದರೆ ನಿಜಕ್ಕೂ ಒಳ್ಳೆಯದಾಗುತ್ತದೆ, ಆದರೆ ಅಷ್ಟು ಜನರಿಗೆ ಆದ್ಯತೆ ಕೇವಲ ೫೦ ರೂ. ಬೆಲೆಬಾಳುವ ಶರ್ಟ್ ಮಾತ್ರವೇ ಆಗಿದೆ” ಎಂದಿದ್ದಾರೆ.
ಪಾಕಿಸ್ತಾನದ ಆರ್ಥಿಕ ಸ್ಥಿತಿ
ಇತ್ತೀಚಿಗಷ್ಟೇ ವಿಶ್ವ ಬ್ಯಾಂಕ್ ಪಾಕಿಸ್ತಾನದಲ್ಲಿ ಹತ್ತಿರ ಹತ್ತಿರ ೪೦% ದಷ್ಟು ಜನರು ಬಡತನ ರೇಖೆಗಿಂತ ಕಡಿಮೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿತ್ತು. ಅಲ್ಲದೆ, ಈ ರೀತಿಯ ಘಟನೆ ಪಾಕಿಸ್ತಾನ ಅದರಲ್ಲೂ ವಿಶೇಷವಾಗಿ ಕರಾಚಿಯಂತಹ ನಗರ ಆರ್ಥಿಕವಾಗಿ ಎಷ್ಟು ದುರ್ಬಲವಾಗಿದೆ ಎಂಬುದರ ಸಂಕೇತವಾಗಿದೆ.
ಅಲ್ಲಿನ ಫೆಡರಲ್ ಸರ್ಕಾರ ಪ್ರತಿನಿತ್ಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಅಭಿವೃದ್ಧಿಗೆ ಮೀಸಲಾದ ಬಜೆಟ್ ಅನ್ನು ಮೊಟಕುಗೊಳಿಸಲಾಗಿದೆ. ಇನ್ನೊಂದೆಡೆ ಹಣದುಬ್ಬರ ಅಲ್ಲಿ ಸಾಕಷ್ಟು ಆತಂಕಕಾರಿ ಪ್ರಾಮಾಣದಲ್ಲಿ ಏರುತ್ತಿದೆ. ಇದು ಸರಾಸರಿ ಆದಾಯವಿರುವ ಶ್ರೀಸಾಮಾನ್ಯನೂ ಎರಡು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಬೇರೆ ಯಾವ ವಸ್ತು ಕೊಂಡುಕೊಳ್ಳುವುದು ಕನಸಿನ ಮಾತಂತೆಯೇ ಆಗಿದೆ.