ಚಿತ್ರಕೃಪೆ: Pexels
ಇತ್ತೀಚಿನ ದಿನಗಳಲ್ಲಿ ಓಟ್ ಹಾಲು ಯುವ ಜನತೆಯಲ್ಲಿ ಹಾಗೂ ಹೆಲ್ತ್ ಫ್ರೀಕ್ ಗಳಲ್ಲಿ ಸಾಕಷ್ಟು ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಇದು ಒಂದು ಸಸ್ಯಜನ್ಯ ಉತ್ಪನ್ನವಾಗಿರುವುದರಿಂದ ವೆಗನ್ ಜೀವನಶೈಲಿಯನ್ನು ಪಾಲಿಸುವವರಿಗೆ ಮತ್ತು ಹಾಲನ್ನು ಕುಡಿಯಲೇಬೇಕು ಎನ್ನುವವರಿಗೆ ಇದೊಂದು ಪರ್ಯಾಯ ಪದಾರ್ಥವಾಗಿದೆ.
ಇಷ್ಟೇ ಅಲ್ಲದೆ, ಇದು ಎಲ್ಲ ರೀತಿಯ ಡೈರಿ ಪದಾರ್ಥಗಳಿಂದ ಮುಕ್ತವಾಗಿರುವುದರಿಂದ ಅಂದರೆ ವೆಗನ್ ಹಾಲುಗಳಲ್ಲಿ ಲ್ಯಾಕ್ಟೋಸ್ ಇಲ್ಲದಿರುವುದರಿಂದ ಲ್ಯಕ್ಟೋಸ್ ಇಂಟಾಲರೆನ್ಸ್ ನಿಂದ ಬಳಲುತ್ತಿರುವವರೂ ಸಹ ಇದನ್ನು ಬಳಸಬಹುದು.
ಈ ರೀತಿಯ ಗ್ಲುಟನ್ ಮುಕ್ತ ಓಟ್ ಬಳಸಿ ತಯಾರಿಸುವ ಹಾಲನ್ನು ಗ್ಲುಟನ್ ಇಂಟಾಲರೆನ್ಸ್ ನಿಂದ ಬಳಲುತ್ತಿರುವವರೂ ಸಹ ಬಳಸಬಹುದು. ಓಟ್ ಮಿಲ್ಕ್ ಹೊರತುಪಡಿಸಿ ಇಂದಿನ ದಿನಮಾನಗಳಲ್ಲಿ ಬಾದಾಮಿ, ಗೋಡಂಬಿ, ಪೀಸ್ತಾಗಳಿಂದಲೂ ತಯಾರಿಸಲಾದ ಹಾಲುಗಳು ಸಾಕಷ್ಟು ಜನಪ್ರೀಯವಾಗುತ್ತಿವೆ.
ಇವು ಏಕೆ ಜನಪ್ರೀಯ?
ಇವೆಲ್ಲ ಇಷ್ಟು ಜನಪ್ರೀಯತೆ ಪಡೆದುಕೊಳ್ಳಲು ಇನ್ನೊಂದು ಮುಖ್ಯ ಕಾರಣವೆಂದರೆ, ಖ್ಯಾತ ಸೆಲೆಬ್ರಿಟಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಮಿತ್ತ ಈ ವೆಗನ್ ಹಾಲುಗಳನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಒಂದು ಭಾಗವನ್ನಾಗಿ ರೂಪಿಸಿಕೊಂಡಿದ್ದಾರೆ. ಹಾಗಾಗಿ ಅವರನ್ನು ಅನುಕರಣೆ ಮಾಡುವ ಯುವಜನತೆ ಈ ಹಾಲನ್ನು ಸೇವಿಸಲು ಹಾತೊರೆಯುತ್ತಾರೆ.
ಅಲ್ಲದೆ, ಈ ವೆಗನ್ ಹಾಲುಗಳು ಬಾಯಲ್ಲಿ ರುಚಿಕಾರಕಗಳಾಗಿರುವುದರಿಂದ ಹಾಗೂ ಅನನ್ಯವಾದ ಫ್ಲೇವರ್ ಗಳನ್ನು ಒದಗಿಸುವುದರಿಂದಲೂ ಅನೇಕ ಜನರು ಈ ರೀತಿಯ ಓಟ್, ಬಾದಾಮಿ, ಪಿಸ್ತಾಗಳಿಂದ ತಯಾರಿಸಲಾದ ಸಸ್ಯಜನಕ ಹಾಲುಗಳನ್ನು ಸೇವಿಸಲು ಹೆಚ್ಚು ಬಯಸುತ್ತಾರೆ.
ಹಸುವಿನ ಹಾಲಿನೊಂದಿಗೆ ಹೋಲಿಕೆ
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಓಟ್ ಹಾಲಿಗಿಂತ ಹಸುವಿನ ಹಾಲೇ ಉತ್ತಮವೆಂದು ತಿಳಿದುಬಂದಿದೆ ಎನ್ನಲಾಗಿದೆ. ಸಸ್ಯಜನ್ಯ ಹಾಲು ಹಸುವಿನ ಹಾಲಿಗಿಂತ ಕಡಿಮೆ ಪ್ರೋಟೀನ್ ಹೊಂದಿರುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿರುವ ವಿಷಯವಾಗಿದೆ.
ಎಲ್ಲ ರೀತಿಯ ಸಸ್ಯಜನ್ಯ ಹಾಲುಗಳಿಗೆ ಸಂಸ್ಕರಿಸಿದ ಅಥವಾ ಹೆಚ್ಚು ಭದ್ರಪಡಿಸಿದಂತಹ (ಫೋರ್ಟಿಫೈಡ್) ಓಟ್ ಹಾಲಿನಲ್ಲಿ ಶೇ. 76 ರಷ್ಟು ಕ್ಯಾಲ್ಸಿಯಮ್ ಮತ್ತು ವಿಟಮಿನ್ ಡಿ ಪೋಷಕಾಂಶಗಳನ್ನು ಹೊಂದಿರುವುದಾಗಿ ಸಂಶೋಧನೆಯಲ್ಲಿ ತಿಳಿದುಬಂದಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ.
ನಂತರದ ಸ್ಥಾನಗಳಲ್ಲಿ ಬಾದಾಮಿ ಮತ್ತು ಸೋಯಾ ಹಾಲುಗಳು ಸ್ಥಾನ ಪಡೆದಿರುವುದಾಗಿ ಸಂಶೋಧನೆಯನ್ನು ಆಧರಿಸಿ ಮಾಧ್ಯಮ ವರದಿಮಾಡಿದೆ.
ಸಂಶೋಧನೆಯ ಫಲಿತಾಂಶ
ಮಿನ್ನೆಸೋಟ್ ವಿವಿಯ ಪೌಷ್ಠಿಕಾಂಶ ಸಂಶೋಧನಾಕಾರರಾದ ಡಾ. ಅಬಿಗೈಲ್ ಜಾನ್ಸನ್ ಅವರು, ಹೇಳುವುದೇನೆಂದರೆ, ಸಸ್ಯಜನ್ಯ ಪರ್ಯಾಯ ಹಾಲುಗಳಿಗಿಂತ ಹಸುವಿನ ಹಾಲಿನಲ್ಲಿ ಹೆಚ್ಚಿನ ಪೌಷ್ಠಿಕಾಂಶಗಳಿವೆ.
ಇನ್ನು ಜುಲೈ 24 ರಂದು ಬೊಸ್ಟನ್ ನಲ್ಲಿ ಆಯೋಜಿಸಲಾದ ಅಮೆರಿಕನ್ ಸೊಸೈಟಿ ಫಾರ್ ನ್ಯೂಟ್ರಿಷನ್ ಕಾನ್ಫರನ್ಸಿನಲ್ಲಿ ಪ್ರಕಟಪಡಿಸಲಾದ ಮಾಹಿತಿಯ ಪ್ರಕಾರ, ಹಸುವಿನ ಹಾಲಿಗೆ ಹೋಲಿಸಿದಾಗ ಸಸ್ಯಜನ್ಯ ಹಾಲು ಸಾಮಾನ್ಯವಾಗಿ ಕಡಿಮೆ ಪ್ರಮಾಣದ ವಿಟಮಿನ್ ಡಿ, ಕ್ಯಾಲ್ಸಿಯಮ್ ಮತ್ತು ಪ್ರೋಟೀನ್ ಗಳನ್ನು ಹೊಂದಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು.
ಓಟ್ ಹಾಲು ಸೇವಿಸುವವರಿಗೊಂದು ಸಲಹೆ
ಸಸ್ಯ ಆಧಾರಿತ ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಮ್ ಅಂಶ ಕಡಿಮೆಯಿದೆ ಎಂದಾಕ್ಷಣ ಆ ಹಾಲು ಕುಡಿಯುವುದನ್ನು ಬಿಟ್ಟು ಹಸುವಿನ ಹಾಲನ್ನೇ ಸೇವಿಸುವ ಅಗತ್ಯವಿಲ್ಲ, ಸಸ್ಯ ಆಧಾರಿತ ಹಾಲಿನಲ್ಲಿ ಕೊರತೆಯಾದ ವಿಟಮಿನ್ ಡಿ, ಪ್ರೋಟೀನ್ ಕ್ಯಾಲ್ಸಿಯಮ್ ಅನ್ನು ನಿಮ್ಮ ದಿನನಿತ್ಯದ ಇತರೆ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನೀಗಿಸಿಕೊಳ್ಳಬಹುದಾಗಿದೆ.
ಈ ಸಂಶೋಧನೆಯ ಬಗ್ಗೆ ಕೆಲ ತಜ್ಞರ ಭಿನ್ನಾಭಿಪ್ರಾಯ
ಈ ಒಂದು ಸಂಶೋಧನೆ ಹಸುವಿನ ಹಾಲನ್ನು ಉತ್ತಮ ಎಂದು ಕಂಡುಕೊಂಡಿದ್ದರೆ ಕೆಲ ತಜ್ಞರು ಇದಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿಲ್ಲ ಎಂಬುದು ಇಲ್ಲಿ ಗಮನಿಸಬಹುದಾಗಿದೆ. ಸ್ಟ್ಯಾನ್ ಫೋರ್ಡ್ ಡಯಾಬಿಟೀಸ್ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಕ್ರಿಸ್ಟೋಫರ್ ಗಾರ್ಡನರ್ ಅವರು ಹಸುವಿನ ಹಾಲು ಹೆಚ್ಚು ಉತ್ತಮ ಎಂಬ ತರ್ಕವನ್ನು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಳ್ಳಿಹಾಕಿದ್ದಾರೆ.
“ಯಾವುದೇ ಸಸ್ಯಜನ್ಯ ಹಾಲು ಕೊಲೆಸ್ಟ್ರಾಲ್ ಅನ್ನು ಹೊಂದಿಲ್ಲ, ಅವುಗಳು ಕಡಿಮೆ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಅವುಗಳಲ್ಲಿ ಕೆಲವು ವಿಧಗಳು ಫೈಬರ್ ಅನ್ನು ಸಹ ಹೊಂದಿರುತ್ತವೆ. ಇದರ ಜೊತೆಗೆ ಡೈರಿ ಹಾಲಿನಲ್ಲಿ ಕೊಲೆಸ್ಟ್ರಾಲ್ ಇರುತ್ತದೆ, ಸ್ಯಾಚುರೇಟೆಡ್ ಕೊಬ್ಬಿರುತ್ತದೆ ಮತ್ತು ಫೈಬರ್ ಇರುವುದಿಲ್ಲ” ಎಂದು ಕ್ರಿಸ್ಟೋಫರ್ ತಿಳಿಸಿದ್ದಾರೆ.