Photo Credit: Pexels
ಕಳೆದ ವರ್ಷವೆಲ್ಲ ಆಧಾರ್-ಪ್ಯಾನ್ ಲಿಂಕ್ ಮಾಡುವಂತೆ ಸಾಕಷ್ಟು ಪ್ರಚಾರ ಮಾಡಲಾಯಿತು. ಎರಡೆರಡು ಬಾರಿ ಗಡುವನ್ನೂ ಸಹ ವಿಸ್ತರಿಸಲಾಯಿತು. ಆದರೆ ಈಗ ಅಂತಿಮವಾಗಿ ಆ ಗಡುವು ಮುಗಿದಿದೆ. ಈಗ ಮತ್ತೆ ಎದುರಾಗಿರುವ ಒಂದು ಸಮಸ್ಯೆ ಅಂದರೆ ಅನಿವಾಸಿ ಭಾರತೀಯರು ಹಾಗೂ ಕೆಲವು ಆಧಾರ್-ಪ್ಯಾನ್ ಲಿಂಕ್ ಮಾಡದೆ ಇರುವವರದ್ದು.
ಏಕೆಂದರೆ ಈಗಾಗಲೇ ಇನ್ನೂ ಆಧಾರ್-ಪ್ಯಾನ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಂಡಿದೆ. ಅಂತಹವರು ಈಗ ಐಟಿಆರ್ ಅನ್ನು ಸಲಿಇಸಬಹುದೆ ಎಂಬುದರ ಬಗ್ಗೆ ಸಂದೇಹ ಎದ್ದಿದೆ. ಈ ಬಗ್ಗೆ ಸ್ವತಃ ಆದಾಯ ತೆರಿಗೆ ಇಲಾಖೆಯೇ ಟ್ವಿಟ್ ಒಂದನ್ನು ಮಾಡಿದ್ದು ಆ ಮೂಲಕ ಅಂತಹವರು ಸಹ ಐಟಿ ರಿಟರ್ನ್ಸ್ ಅನ್ನು ಫೈಲ್ ಮಾಡಬಹುದಾಗಿದೆ ಎಂಬ ಸ್ಪಷ್ಟನೆ ನೀಡಿದೆ.
ನಿಷ್ಕ್ರೀಯಗೊಂಡ ಪ್ಯಾನ್ ಕಾರ್ಡ್ ಹೊಂದಿರುವವರು ದಂಡ ಪಾವತಿಸುವ ಮೂಲಕ ಮತ್ತೆ ತಮ್ಮ ಪ್ಯಾನ್ ಅನ್ನು ಸಕ್ರಿಯಗೊಳಿಸಬಹುದಾಗಿದ್ದು ಅನಿವಾಸಿ ಭಾರತೀಯರು ಸಹ ತಮ್ಮ ಪ್ಯಾನ್ ಅನ್ನು ಐಟಿಆರ್ ಸಲ್ಲಿಸಲು ಬಳಸಬಹುದಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಅಷ್ಟಕ್ಕೂ, ಆದಾಯ ತೆರಿಗೆ ಇಲಾಖೆಯು ತಾನು ಮಾಡಿದ ಟ್ವಿಟ್ ನಲ್ಲಿ, “ಕೆಲವು ಅನಿವಾಸಿ ಭಾರತೀಯರು ಹಾಗೂ ಓಸಿಐ (ಓವರ್ಸೀಸ್ ಸಿಟಿಜನ್ಶಿಪ್ ಆಫ್ ಇಂಡಿಯಾ) ಗಳು ಅವರ ಪ್ಯಾನ್ ಕಾರ್ಡ್ ನಿಷ್ಕಿಯವಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ, ವಾಸ್ತವದಲ್ಲಿ ಅಂತಹವರಿಗೆ ತಮ್ಮ ಪ್ಯಾನ್-ಆಧಾರ್ ಲಿಂಕ್ ಜೋಡಣೆಯ ಪ್ರಕ್ರಿಯೆಯಿಂದ ವಿನಾಯಿತಿ ನೀಡಲಾಗಿದ್ದರೂ ಸದ್ಯ ಅವರ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಂಡ ಹಾಗೂ ಆ ಮೂಲಕ ಅವರು ಮುಂದೆ ಎದುರಿಸಬಹುದಾದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದೆ.
ಇನ್ನು ಈ ವರ್ಗದ ಅಡಿಯಲ್ಲಿ ಬರುವ ಅಂತಹ ಜನರು (NRI & OCI) ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾದೇಶಿಕ ಅಧಿಕಾರಿಗಳನ್ನು ಅವಶ್ಯಕವಾದ ದಾಖಲೆಗಳೊಂದಿಗೆ ಸಂಪರ್ಕಿಸಿ ಡೇಟಾ ಬೇಸ್ ನಲ್ಲಿ ತಮ್ಮ ವಿವರಗಳನ್ನು ದೃಢೀಕರಿಸಬಹುದಾಗಿದೆ ಎಂದು ಹೇಳಿರುವ ತೆರಿಗೆ ಇಲಾಖೆ ಅದಕ್ಕೆ ಅನುಕೂಲವಾಗಲೆಂದು ಅಧಿಕಾರಿಗಳ ಸಂಪರ್ಕ ಒಳಗೊಂಡಿರುವ ಲಿಂಕ್ ಅನ್ನು ಸಹ ಹಂಚಿಕೊಂಡಿದೆ.
ಇನ್ನು ಮುಂದುವರೆಯುತ್ತ, ಆದಾಯ ತೆರಿಗೆ ಇಲಾಖೆಯು ಐಟಿಆರ್ ತುಂಬುವಾಗ ನಿಷ್ಕಿಯಗೊಂಡ ಪ್ಯಾನ್ ಕಾರ್ಡ್ ಅಡ್ಡಿಯಾಗದು ಎಂದು ಹೇಳಿದೆ. ತೆರಿಗೆದಾರರು ತಮ್ಮ ನಿಷ್ಕ್ರೀಯಗೊಂಡಿರುವ ಪ್ಯಾನ್ ಬಳಸಿಯೂ ಐಟಿಆರ್ ಅನ್ನು ಫೈಲ್ ಮಾಡಬಹುದಾಗಿದೆ. ಆದರೆ ಅದಕ್ಕಾಗಿ ಅವರು ಕೆಲವು ಪರಿಣಾಮಗಳನ್ನು ಎದುರಿಸಬಹುದು, ಉದಾಹರಣಗೆ ಕಡಿತಗಳಿಗೆ ಹೆಚ್ಚಿನ ದರ, ಮರುಪಾವತಿ ವಿಳಂಬ ಇತ್ಯಾದಿ.
ಈಗಾಗಲೇ ತಮ್ಮ ನಿವಾಸದ ವಿವರಗಳನ್ನು ಅಪಡೇಟ್ ಮಾಡದ ಒಸಿಐ ಮತ್ತು ಅನಿವಾಸಿ ಭಾರತೀಯರ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಂಡಿದೆ. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಐಟಿಆರ್ ಫೈಲ್ ಮಾಡದ ಒಸಿಐ ಮತ್ತು ವಿದೇಶಿ ನಿವಾಸಿಗರ ಪ್ಯಾನ್ ಕಾರ್ಡುಗಳು ನಿಷ್ಕ್ರೀಯಗೊಂಡಿವೆ. ಅಂತಹ ಅನಿವಾಸಿ ಭಾರತೀಯರು ಮತ್ತು ಒಸಿಐಗಳು ಪ್ಯಾನ್ ಕಾರ್ಡ್ ಅಪಡೇಟ್ ಮಾಡಿಕೊಳ್ಳುವ ಮೂಲಕ ತಮ್ಮ ತೆರಿಗೆ ದಾಖಲಾತಿಗಳನ್ನು ಸರಾಗವಾಗಿ ನಿರ್ವಹಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಹಾಗಾಗಿ ಇಲ್ಲಿ ಉಲ್ಲೇಖಿಸಿರುವಂತೆ ನೀವು ಇಲ್ಲಿ ಹೇಳಲಾದ ಕೆಟಗರಿಯ ಜನರಲ್ಲಿ ಒಬ್ಬರಾಗಿದ್ದರೆ ಆದಾಯ ತೆರಿಗೆ ಇಲಾಖೆಯ ಟ್ವಿಟ್ ಓದಿಕೊಂಡು ಅಲ್ಲಿ ತಿಳಿಸಿದಂತೆ ಉಪಕ್ರಮ ಕೈಗೊಳ್ಳುವುದು ಉತ್ತಮವಾಗಿದೆ.
ಇನ್ನು ಆಧಾರ್-ಪ್ಯಾನ್ ಲಿಂಕೇಜ್ ಎಂಬುದು ಇನ್ಕಮ್ ಟ್ಯಾಕ್ಸ್ ಕಾಯಿದೆ 1961 ಅಡಿಯಲ್ಲಿ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯದ ನಿವಾಸಿಗಳಿಗೆ ಕಡ್ಡಾಯವಾಗಿಲ್ಲ ಹಾಗೂ ಭಾರತೀಯ ನಾಗರಿಕಲ್ಲದೆ ಇರುವ ಆದರೆ ಎಂಟು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಭಾರತದಲ್ಲಿರುವ ಜನರಿಗೂ ಇದು ಕಡ್ಡಾಯವಲ್ಲ.