Kannada News Buzz

Oppenheimer : ಏನು ಈ ಚಿತ್ರದ ವಿವಾದ..? ಇದರ ಹೊರತಾಗಿಯೂ ಭಾರತದಲ್ಲಿ ಚಿತ್ರದ ಬಾಕ್ಸ್ ಆಫಿಸ್ ಕಲೆಕ್ಷನ್ ಹೇಗಿದೆ?

ಭಾರತೀಯ ಚಲನಚಿತ್ರೋದ್ಯಮದಲ್ಲಿ ಚಿತ್ರಗಳಿಗೆ ಸಂಬಂಧಿಸಿದಂತೆ ವಿವಾದ ಏರ್ಪಡುವುದು ಅಪರೂಪದ ಮಾತೇನಲ್ಲ. ಈ ಹಿಂದೆಯೂ ಹಲವಾರು ಸನ್ನಿವೇಶಗಳಲ್ಲಿ ಚಿತ್ರಗಳಿಗೆ ಸಂಬಂಧಿತ ವಿವಾದ ಉಂಟಾಗಿವೆ. ಆದರೆ ಇದೀಗ ಹಾಲಿವುಡ್ ಚಿತ್ರ Oppenheimer ಸಹ ವಿವಾದದ ಮೊದಲ ರುಚಿ ಅನುಭವಿಸಿದೆ.

“ನಾನು ಈಗ ಸಾವಿನ ಪ್ರತಿರೂಪವಾಗಿರುವೆ, ಜಗತ್ತುಗಳ ವಿನಾಶಕನಾಗಿರುವೆ” ಹೀಗೊಂದು ಭಾವಾರ್ಥವಿರುವ ನುಡಿಯು ಭಗವದ್ಗೀತೆಯಲ್ಲಿ ಬರುತ್ತದೆ. ಇದು ಶ್ರೀಕೃಷ್ಣನು ಅರ್ಜುನನಿಗೆ ಭೋದನೆ ಮಾಡುವಾಗ ಸರ್ವಶಕ್ತನ ಅನಂತ ಶಕ್ತಿಯ ಕುರಿತು ವಿವರಣೆ ನೀಡುವಾಗ ಬರುವ ಒಂದು ವಾಕ್ಯ. ಪ್ರಸ್ತುತ ಈ ವಾಕ್ಯವನ್ನು Oppenheimer ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.

ವಾಕ್ಯ ಬಳಸಿಕೊಂಡರೆ ವಿವಾದ ಏಕೆ?

ಹೌದು, ಅದೆಷ್ಟೋ ಚಿತ್ರಗಳಲ್ಲಿ ಕೆಲವೊಮ್ಮೆ ಪ್ರಸಿದ್ಧ ಪುಸ್ತಕಗಳ ವಾಕ್ಯಗಳಿಂದ ಪ್ರೇರಣೆ ಪಡೆದು ಚಿತ್ರದ ಕೆಲ ಸಂದರ್ಭಗಳಿಗೆ ಸೂಕ್ತವೆನಿಸುವಂತೆ ಬಳಸಿಕೊಳ್ಳಲಾಗುವುದು ದೊಡ್ಡ ವಿಷಯವೇನಲ್ಲ. ಅದರಂತೆ ಗೀತೆಯ ಈ ವಾಕ್ಯವನ್ನು ಬಳಸಿಕೊಂಡರೆ ಅದರಲ್ಲಿ ತಪ್ಪೇನು ಎಂದು ಹಲವರಿಗೆ ಅನಿಸಬಹುದು. ಆದರೆ ಇಲ್ಲೇ ಇದೆ ನೋಡಿ ಒಂದು ಟ್ವಿಸ್ಟ್…

ವಾಸ್ತವದಲ್ಲಿ ಚಿತ್ರದ ನಾಯಕ ಪಾತ್ರವಾದ ಓಪನ್‍ಹೈಮರ್ ಸಂಭೋಗದ ದೃಶ್ಯವೊಂದರಲ್ಲಿ ತೊಡಗಿದ್ದಾಗ ಈ ವಾಕ್ಯವನ್ನು ಹೇಳುತ್ತಾರೆ. ಅಷ್ಟಕ್ಕೂ ಓಪನ್‍ಹೈಮರ್ ಅನಧಿಕೃತ ವಿವಾಹೇತರ ಸಂಬಂಧ ಹೊಂದಿದ್ದು ಜೀನ್ ಟ್ಯಾಟ್ಲಾಕ್ ಎನ್ನುವವರ ಜೊತೆ ದೈಹಿಕ ಸಂಪರ್ಕ ಹೊಂದಿರುತ್ತಾರೆ.

ಇಬ್ಬರ ನಡುವಿನ ಈ ಸಂಭೋಗ ಹೊಂದುವಂತಹ ದೃಶ್ಯದಲ್ಲಿ ಗೀತೆಯ ಈ ವಾಕ್ಯ ಬಂದಿರುವುದು ಹಾಗೂ ಪುಸ್ತಕವನ್ನು ಆ ಸಮಯದಲ್ಲಿ ತೋರಿಸಲಾಗಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ದೃಶ್ಯವಿದ್ದರೂ ಅದನ್ನು ಕ್ಲಿಯರ್ ಮಾಡಿರುವ ಸೆನ್ಸರ್ ಮಂಡಳಿಯ ವಿರುದ್ಧವೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದ ಗಲ್ಲಾಪೆಟ್ಟಿಗೆ ಪ್ರದರ್ಶನದ ಬಗ್ಗೆ ಮಾಹಿತಿ

ಮುಂಚಿನಿಂದಲೂ Oppenheimer ಚಿತ್ರವು ಭಾರತದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು ಎನ್ನಬಹುದು. ಏಕೆಂದರೆ ನಾಯಕ ಪಾತ್ರಧಾರಿ ಹಿಂದೂ ಧರ್ಮದ ಭಗವದ್ಗೀತೆಯಿಂದ ಸಾಕಷ್ಟು ಪ್ರಭಾವಿತರಾಗಿದ್ದರು ಎಂಬ ವಿಚಾರಗಳು ಹರಿದಾಡಿದ್ದ ಕಾರಣ ಈ ಚಿತ್ರಕ್ಕಾಗಿ ಒಂದು ರೀತಿಯಲ್ಲಿ ಜನರು ಕಾಯುತ್ತಿದ್ದರು ಎಂತಲೇ ಹೇಳಬಹುದು.

ಇನ್ನು ನಿರೀಕ್ಷೆಗೆ ತಕ್ಕಂತೆ ಚಿತ್ರ ಭಾರತದಲ್ಲಿ ಜುಲೈ 21 ರಂದು ಬಿಡುಗಡೆಯಾಗಿ ಮೊದಲ ದಿನದಲ್ಲೇ 14.5 ಕೋಟಿ ರೂಪಾಯಿಯನ್ನು ಗಳಿಸಿತ್ತು. ಹಾಲಿವುಡ್ ಚಿತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಇದೊಂದು ಉತ್ತಮ ಓಪನಿಂಗ್ ಎಂದೇ ಹೇಳಬಹುದು.

ಸದ್ಯ ಒಂದು ವಾರದ ನಂತರವೂ ಚಿತ್ರ ತನ್ನ ಓಟವನ್ನು ಮುಂದುವರೆಸಿದ್ದು Sacnilk ಪ್ರಕಾರ ಎಂಟನೇ ದಿನದಂದು ಚಿತ್ರ ಬಾಕ್ಸ್ ಆಫಿಸ್ ನಲ್ಲಿ 4.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಇಲ್ಲಿಯವರೆಗೂ ಭಾರತದಲ್ಲಿ ಈ ಚಿತ್ರ ಒಟ್ಟಾರೆ 77.70 ಕೋಟಿ ರೂಪಾಯಿ ಬಾಚಿರುವುದಾಗಿ ವರದಿಗಳು ಹೇಳಿವೆ.

ಚಿತ್ರವು ಮೊದಲ ವಾರಾಂತ್ಯದಲ್ಲಿ 73.27 ಕೋಟಿ ರೂಪಾಯಿಗಳಿಸಿತ್ತು ಹಾಗೂ ಇದರ ಆಂಗ್ಲ ಆವೃತ್ತಿಯು 64.24 ಕೋಟಿ ರೂ. ಗಳಿಸಿದ್ದರೆ ಹಿಂದಿ ಡಬ್ಬಿಂಗ್ 9.03 ಕೋಟಿ ರೂ. ಗಳಿಸಿತ್ತು. ಇನ್ನು ಜಾಗತಿಕ ಮಟ್ಟದಲ್ಲಿ ಇನ್ನೊಂದು ಚಿತ್ರವಾದ ಬಾರ್ಬಿ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದು ಇಲ್ಲಿಯವರೆಗೆ ಜಾಗತಿಕವಾಗಿ 549 ಮಿಲಿಯನ್ ಡಾಲರ್ ಸಂಪಾದಿಸಿದರೆ ಓಪನ್‍ಹೈಮರ್ 239 ಮಿಲಿಯನ್ ಡಾಲರ್ ಬಾಚಿಕೊಂಡಿದೆ.

ಇದೀಗ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಸ್ವಾಗತಿಸಲ್ಪಡುತ್ತದೆ ಎಂಬುದರ ಮೇಲೆ ಓಪನ್‍ಹೈಮರ್ ಪ್ರದರ್ಶನ ಪ್ರಭಾವಿತಗೊಳ್ಳುವ ಸಾಧ್ಯತೆಯಿದೆ.

ಅಲಿಯಾ ಭಟ್ ಹಾಗೂ ರಣವೀರ್ ಸಿಂಗ್ ನಟಿಸಿರುವ ಕರಣ್ ಅವರ ಈ ಚಿತ್ರವು ಬಿಡುಗಡೆಯಾದ ಮೊದಲ ದಿನದಂದು 11.5 ಕೋಟಿ ರೂ. ಬಾಚಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.

Exit mobile version