Kannada News Buzz

Israel, Palestin, Hamas, ಯುದ್ಧ…ಏನಿದೆಲ್ಲ, ಗೊತ್ತಾಗುತ್ತಿಲ್ಲವೆ? ಇಲ್ಲಿದೆ ನಿಮಗಾಗಿ ಒಂದಿಷ್ಟು ಪರಿಚಯ ಹಾಗೂ ಸಂಕ್ಷಿಪ್ತ ಹಿನ್ನೆಲೆ

File photo of war

ಸಾಂದರ್ಭಿಕ ಚಿತ್ರ ಹಾಗೂ ಕೃಪೆ: pexels

ದಿನ ಬೆಳಗಾದರೆ, ಸ್ವಲ್ಪ ಟಿವಿಯಲ್ಲಿ ಸುದ್ದಿ ನೋಡೋಣ ಅಂತ ಟಿವಿ ಹಚ್ಚಿದ್ರೆ ಸಾಕು ಎಲ್ಲ ಕಡೆ Israel, Hamas ಆತಂಕ, ಗಾಜಾ ಪಟ್ಟಿ, Palestin ಇದೇ ಸುದ್ದಿಗಳು. ಅದೆಷ್ಟೋ ಜನರಿಗೆ ಈ ಬಗ್ಗೆ ಅರಿವಿದೆ, ಇನ್ನೂ ಕೆಲವರಿಗೆ ಈ ಕುರಿತು ಇತಿಹಾಸವೂ ಗೊತ್ತಿರಬಹುದು, ಆದರೆ ಈ ಬಗ್ಗೆ ಏನೂ ಗೊತ್ತಿರದ ಹಲವು ಜನರಿರಬಹುದು.

ಹಾಗಾಗಿ ನಿಮಗೆ ಈ ಬಗ್ಗೆ ಸ್ವಲ್ಪವೇ ಗೊತ್ತಿರಲಿ, ಅಥವಾ ಏನೂ ಗೊತ್ತಿಲ್ಲದಿರಲಿ, ಈ ಲೇಖನದ ಮೂಲಕ ಆ ಬಗ್ಗೆ ತಿಳಿಯಿರಿ.

ಸದ್ಯ ನಡೆಯುತ್ತಿರುವುದೇನು?

ಈಗ ಸದ್ಯಕ್ಕೆ ನಡೆದಿರುವ ವಿದ್ಯಮಾನದ ಬಗ್ಗೆ ಹೇಳಬೇಕೆಂದರೆ, ಇಸ್ರೇಲ್ ಗಾಜಾದ ಉತ್ತರದಲ್ಲಿರುವ ಜನರಿಗೆ ತ್ವರಿತವಾಗಿ ಗಾಜಾದ ದಕ್ಷಿಣಕ್ಕೆ ತೆರಳಲು ಸೂಚಿಸಿದೆ. ಏಕೆಂದರೆ ಗಾಜಾ ಉತ್ತರದ ಪ್ರತಿಯೊಂದು ಸ್ಥಳಗಳನ್ನು ಇಸ್ರೇಲ್ ಪಡೆ ಪರಿಶೀಲಿಸಿ ಹಮಾಸ್ ಉಗ್ರರ ಎಲ್ಲ ಸಂಪನ್ಮೂಲಗಳನ್ನು ಹಾಗೂ ಅಡಗಿ ಕುಳಿತಿದ್ದರೆ ಅಂತಹ ಉಗ್ರರನ್ನೂ ನಿರ್ನಾಮ ಮಾಡಲು ಯೋಜಿಸಿದೆ.

ಗಾಜಾ ಪಟ್ಟಿಯು ಬಲು ಸಣ್ಣದಾದ ಪಟ್ಟಿಯಾಗಿದ್ದು ಉತ್ತರ ಗಾಜಾ ಪ್ರದೇಶದಲ್ಲಿ ಏನಿಲ್ಲವೆಂದರೂ ಎರಡು ಮಿಲಿಯನ್ ಗಿಂತಲೂ ಅಧಿಕ ಜನರಿದ್ದಾರೆ. ಇದೀಗ ಅವರೆಲ್ಲರಿಗೂ ದಕ್ಷಿಣ ಗಾಜಾ ಕಡೆ ತೆರಳುವಂತೆ ಇಸ್ರೇಲ್ ಸೂಚಿಸಿದೆ. ಈ ಮಧ್ಯೆ ಹಮಾಸ್ ಸಂಘಟನೆಯು ಜನರಿಗೆ ಇಸ್ರೇಲ್ ಪಡೆಯಿಂದ ಬಂದ ಸೂಚನೆಗೆ ಕಿವಿಗೊಡದೆ ತಮ್ಮ ಸ್ಥಳ ತೆರವುಗೊಳಿಸದಂತೆ ಜನರಿಗೆ ಹೇಳುತ್ತಿದೆ ಎಂಬುದು ತಿಳಿದುಬಂದಿದೆ.

ಇಸ್ರೇಲ್ ಸೈನ್ಯವು ಹಮಾಸ್ ಆತಂಕವಾದಿ ಸಂಘಟನೆಗಳು ಅಡಗಿ ಕುಳಿತಿವೆ ಎನ್ನಲಾದ ಹಾಗೂ ಆ ಸಂಘಟನೆ ತನ್ನ ಅಸ್ತಿತ್ವ ಹೊಂದಿರುವ ಗಾಜಾ ಪಟ್ಟಿಯ ಮೇಲೆ ಆಕ್ರಮಣ ಮಾಡುತ್ತಿದೆ.

ಈಗಾಗಲೇ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದರು ಎನ್ನಲಾದ ಹಲವಾರು ಕಟ್ಟಡಗಳನ್ನು ಇಸ್ರೇಲಿ ಸೈನ್ಯವು ಗುರುತಿಸಿ ಅವುಗಳ ಮೇಲೆ ಬಾಂಬ್ ಸಿಡಿಸುವ ಮೂಲಕ ಧ್ವಂಸಗೊಳಿಸಿದೆ.

ಸದ್ಯದ ಮಟ್ಟಿಗೆ ಸುದ್ದಿ ಮಾಧ್ಯಮಗಳ ಪ್ರಕಾರ, ಇಸ್ರೇಲ್ ಈಗ ಸಿರಿಯಾದ ಮೇಲೆಯೂ ದಾಳಿ ಮಾಡಿದೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಎರಡೂ ಕಡೆಗಳಿಂದಲೂ ಸಾವಿರಾರು ಜನರ ಪ್ರಾಣ ಹಾನಿಗಳಾಗಿವೆ. ಯುಎನ್ ಪ್ರಕಾರ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಜನರು ನಿರ್ಗತಿಕರಾಗಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಅದು ಅಕ್ಟೋಬರ್ 7, 2023. ಬೆಳ್ಳಂಬೆಳಗ್ಗೆ ಗಾಜಾ ಪಟ್ಟಿಯಿಂದ ಸಾವಿರಾರು ರಾಕೆಟ್ ಗಳು ಇಸ್ರೇಲಿನತ್ತ ತೂರಿ ಬಂದವು. ಅಷ್ಟೆ, ಅಲ್ಲ, ಇಸ್ರೇಲ್-ಗಾಜಾ ಮಧ್ಯದಲ್ಲಿದ್ದ ಗಡಿ ಗೋಡೆಯನ್ನೂ ಸಹ ಹಮಾಸ್ ಸಂಘಟನೆಯ ಉಗ್ರವಾದಿಗಳು ಬುಲ್ಡೋಜರ್ ಬಳಸಿ ಕಿತ್ತೆಸೆದು ಇಸ್ರೇಲ್ ನಗರಕ್ಕೆ ಪ್ರವೇಶಿಸಿ ಆಕ್ರಮಣ ಮಾಡಿದರು, ಇನ್ನೊಂದೆಡೆ ಸಮುದ್ರದ ಮೂಲಕವೂ ಸಹ ಸ್ಪೀಡ್ ಬೋಟ್ ಬಳಸಿ ಉಗ್ರಗಾಮಿಗಳು ಇಸ್ರೇಲಿನತ್ತ ಆಕ್ರಮಣ ಮಾಡಲು ಬಂದಿಳಿದರು.

ಹಮಾಸ್ ತನ್ನ ಈ ಘೋರ ಕಾರ್ಯಾಚರಣೆಗೆ ಆಪರೇಷನ್ ಅಲ್-ಅಕ್ಸಾ ಫ್ಲಡ್ ಎಂದು ಹೆಸರಿಸಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಎನ್ನದೆ ಈ ಉಗ್ರಗಾಮಿಗಳು ಅಕ್ಷರಶಃ ನರಹಂತಕರಾಗಿ ಸಾವಿರಾರು ಇಸ್ರೇಲಿ ಜನರ ಪ್ರಾಣ ಹರಣ ಮಾಡಿದ್ದು ಬಲು ಆಘಾತಕಾರಿ.

ಇದಾದ ನಂತರ ಮರುದಿನವೇ ಇಸ್ರೇಲ್ ಹಮಾಸ್ ನೊಂದಿಗೆ ಪೂರ್ಣ ಪ್ರಮಾಣದ ಯುದ್ಧ ಘೋಷಣೆ ಮಾಡಿತು. ಅಂದಿನಿಂದ ಪ್ರಾರಂಭವಾದ ಯುದ್ಧ ಈಗಲೂ ಮುಂದುವರೆಯುತ್ತಿದೆ. ಈ ನಡುವೆ ಇಸ್ರೇಲ್ ಸೇನಾಪಡೆಗಳು ಹಮಾಸ್ ಕಾರ್ಯಾಚರಣೆ ನಡೆಸುತ್ತಿರುವ ಎನ್ನಲಾದ ವಿವಿಧ ಕಟ್ಟಡಗಳನ್ನು ಬಾಂಬ್ ಸಿಡಿಸುವ ಮೂಲಕ ನಾಶ ಮಾಡುತ್ತಿದೆ.

ಆಕ್ರಮಣಕ್ಕೂ ಮುನ್ನ ಇಸ್ರೇಲ್ ನೀಡಿದ ಎಚ್ಚರಿಕೆ

ಅಷ್ಟಕ್ಕೂ ಪ್ರತಿ ಬಾರಿ ಇಸ್ರೇಲ್-ಪ್ಯಾಲೆಸ್ತೀನಿಯನ್ ಮಧ್ಯದ ಕಿರಿಕಿರಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿತ್ತಾದರೂ ಈ ಬಾರಿ ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಈ ಭೀಕರ ಯುದ್ಧ ತಲೆದೋರಿದೆ. ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸಂಘಟನೆ ತಾನು ಪ್ಯಾಲೆಸ್ತೀನಿಯರ ಹಕ್ಕುಗಳಿಗಾಗಿ ಹಾಗೂ ಅವರ ಪರವಾಗಿ ಹೋರಾಡುತ್ತಿರುವುದಾಗಿ ಹೇಳಿಕೊಂಡಿದೆ. ಒಟ್ಟಿನಲ್ಲಿ ಈ ಸಂಘಟನೆಯ ಪ್ರಮುಖ ಉದ್ದೇಶ ಇಸ್ರೇಲ್ ದೇಶವನ್ನು ನಿರ್ನಾಮ ಮಾಡುವುದೇ ಆಗಿದೆ ಎಂದು ಹೇಳಲಾಗುತ್ತದೆ.

ಇನ್ನು, ಇಸ್ರೇಲ್ ಹಮಾಸ್ ವಿರುದ್ಧ ತನ್ನ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಿದಾಗ ಮೊದಲಿಗೆ ಇಸ್ರೇಲ್ ಕಡೆಯಿಂದ ಗಾಜಾದಲ್ಲಿ ಸಾಮಾನ್ಯವಾಗಿ ಬದುಕುತ್ತಿರುವ ಜನರಿಗೆ (ಪ್ಯಾಲೆಸ್ತೀನಿಯರು) ಹಲವು ಗಂಟೆಗಳಷ್ಟು ಕಾಲಾವಧಿ ನೀಡಿ ಜಾಗ ತೊರೆಯುವಂತೆ ಎಚ್ಚರಿಸಲಾಯಿತು ಹಾಗೂ ಗಾಜಾ ಪಟ್ಟಿ ಮತ್ತು ಇಸ್ರೇಲ್ ಗಡಿ ಮಧ್ಯ ಸ್ಥಿತವಿರುವ ಹಲವು ಇಸ್ರೇಲ್ ದೇಶದ ಗ್ರಾಮಗಳನ್ನು ತೆರವುಗೊಳಿಸಲಾಯಿತು. ಇವೆಲ್ಲವೂ ಆದದ್ದು ಕೇವಲ ಒಂದೇ ದಿನದಲ್ಲಿ…!

ತದನಂತರ ಇಸ್ರೇಲ್ ಪಡೆ ಮುಂಚಿತವಾಗಿ ಯೋಜಿಸಿದಂತೆ ನಿರಂತರ ಶೆಲ್ಲಿಂಗ್ ಹಾಗೂ ಬಾಂಬಿಂಗ್ ಆಕ್ರಮಣವನ್ನು ಗಾಜಾದಲ್ಲಿ ಮಾಡಲು ಪ್ರಾರಂಭಿಸಿತು.

ಇತಿಹಾಸ ಏನು ಹೇಳುತ್ತದೆ?

ಇತಿಹಾಸ ತಜ್ಞರು ವಿಶ್ಲೇಷಿಸಿರುವ ಹಾಗೆ ಇಸ್ರೇಲ್ ಇತಿಹಾಸ ನಮ್ಮನ್ನು ಹಿಬ್ರು ಭಾಷೆಯಲ್ಲಿ ರಚಿತವಾದ ಹಿಬ್ರು ಬೈಬಲ್ ಕಾಲಕ್ಕೆ ಕರೆದೊಯ್ಯುತ್ತದೆ. ಪುಸ್ತಕದ ಪ್ರಕಾರ, ಇಸ್ರೇಲ್ ಮೂಲವನ್ನು ಅಬ್ರಹಾಂ ಕಾಲದೊಂದಿಗೆ ಗುರುತಿಸಬಹುದಾಗಿದೆ. ಜುಡಾಯಿಸಂನ ಹರಿಕಾರ ಅಥವಾ ತಂದೆಯೆಂದು ಅಬ್ರಹಾಂ ಅವರನ್ನು ಪರಿಗಣಿಸಲಾಗಿದೆ.

ಡೇವಿಡ್ ಮತ್ತು ಸೊಲೋಮೋನ್

ಕ್ರಿ.ಪೂ 1000 ರಲ್ಲಿ ಇಂದಿನ ಇಸ್ರೇಲ್ ಪ್ರದೇಶವನ್ನು ರಾಜ ಡೇವಿಡ್ ಆಳುತ್ತಿದ್ದ. ತದನಂತರ ಅವನ ಮಗನಾದ ಸೊಲೋಮೋನ್ ಈ ಪ್ರದೇಶವನ್ನು ಆಳಿದ. ಅವನು ಆಳುತ್ತಿದ್ದ ಸಂದರ್ಭದಲ್ಲೇ ಯಹೂದಿಯರ ಪವಿತ್ರ ದೇವಾಲಯವನ್ನು ಜೇರುಸಲೇಮ್ ನಲ್ಲಿ ನಿರ್ಮಿಸಲಾಯಿತು.

ಕ್ರಿ.ಪೂ 931 ರಲ್ಲಿ ಈ ಪ್ರದೇಶವು ಉತ್ತರ ಇಸ್ರೇಲ್ ಹಾಗೂ ದಕ್ಷಿಣದಲ್ಲಿ ಜುಡಾ ಎಂದು ವಿಭಾಗಿಸಲ್ಪಟ್ಟವು ಎಂದು ತಿಳಿದುಬರುತ್ತದೆ. ಕ್ರಿ.ಪೂ 722 ರಲ್ಲಿ ಅಸ್ಸಿರಿಯನ್ನರು ಇಸ್ರೇಲ್ ಮೇಲೆ ದಂಡೆತ್ತಿ ಬಂದು ನಾಶ ಮಾಡಿದರು. 568 ರಲ್ಲಿ ಬ್ಯಾಬಿಲೇನಿಯನ್ನರು ಜೆರುಸಲೇಮ್ ಮೇಲೆ ಆಕ್ರಮಣ ಮಾಡಿ ಯಹೂದಿಯರ ಮೊದಲ ಪವಿತ್ರ ದೇವಸ್ಥಾನ ಧ್ವಂಸಗೊಳಿಸಿದರು. ನಂತರ 516 ರಲ್ಲಿ ಅದೇ ಸ್ಥಳದಲ್ಲಿ ಮತ್ತೊಮ್ಮೆ ಮಂದಿರವನ್ನು ನಿರ್ಮಿಸಲಾಯಿತು ಎನ್ನುತ್ತದೆ ಇತಿಹಾಸ.

ತದನಂತರ, ಪ್ರಸ್ತುತ ಇಸ್ರೇಲ್ ದೇಶವನ್ನು ಹಲವು ನೂರು ವರ್ಷಗಳ ಕಾಲ ಪರ್ಷಿಯನ್ನರು, ಗ್ರೀಕರು, ಅರಬ್ಬರು, ಫಾತಿಮಿಡಿಗಳು, ಸೆಲ್ಜುಕ್ ಟರ್ಕ್ಸ್, ಈಜಿಪ್ಷಿಯನ್ನರು ಹೀಗೆ ಹಲವು ಸಮುದಾಯದವರು ಆಳುತ್ತಾ ಬಂದರು.

ಸುಮಾರು 1517-1917ರ ವರೆಗೆ ಮಧ್ಯಪ್ರಾಚ್ಯ ಒಳಗೊಂಡಂತೆ ಆಧುನಿಕ ಇಸ್ರೇಲ್ ಪ್ರದೇಶವೆಲ್ಲ ಒಟ್ಟೋಮನ್ ಸಾಮ್ರಾಜ್ಯದ ಅಧೀನದಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಈ ನಡುವೆ ಮೊದಲ ವಿಶ್ವಯುದ್ಧ ಪ್ರಾರಂಭವಾಗಿ ಅದು 1918 ರಲ್ಲಿ ಮುಕ್ತಾಯವಾಗುತ್ತಲೇ ಒಟ್ಟೋಮನ್ ಸಾಮ್ರಾಜ್ಯವು ಪತನವಾಯಿತು. ತದನಂತರ ಆಧುನಿಕ ಇಸ್ರೇಲ್ ದೇಶವು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತು.

ಈ ಸಂದರ್ಭದಲ್ಲಿ ಬ್ರಿಟೀಷ್ ವಿದೇಶಿ ಕಾರ್ಯದರ್ಶಿಯಾದ ಅರ್ಥರ್ ಜೇಮ್ಸ್ ಬೆಲ್ಫೋರ್ ಪ್ಯಾಲೆಸ್ತೀನಿಯನ್ ಪ್ರದೇಶದಲ್ಲಿ ಯಹೂದಿಯರ ಪ್ರದೇಶ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಪತ್ರೋಲ್ಲೇಖ ಘೋಷಿಸಿದರು. ಇದನ್ನೆ ಬೆಲ್ಫೋರ್ ಡಿಕ್ಲರೇಷನ್ ಎಂದು ಕರೆಯಲಾಯಿತು. 1922 ರಲ್ಲಿ ರಾಷ್ಟ್ರಗಳ ಒಕ್ಕೂಟವು ಈ ಡಿಕ್ಲರೇಷನ್ ಗೆ ತಮ್ಮ ಅನುಮೋದನೆ ನೀಡಿದವು. ಆದರೆ ಅಲ್ಲಿದ್ದ ಅರಬ್ಬರು ಮಾತ್ರ ಇದಕ್ಕೆ ಪ್ರತಿರೋಧವನ್ನು ವ್ಯಕ್ತಪಡಿಸಿದರು.

ಅಂದಿನಿಂದ ಯಹೂದಿ ಮತ್ತು ಪ್ಯಾಲೆಸ್ತೀನಿ ಅರಬ್ಬರ ಮಧ್ಯೆ ಜಟಾಪಟಿ ನಡೆಯುತ್ತಲೇ ಬಂದಿದೆ. ಎರಡನೇ ವಿಶ್ವಯುದ್ಧ ಮುಗಿಯುವ ಹೊತ್ತಿಗೆ 1947 ರಲ್ಲಿ ಇಸ್ರೇಲ್ ಒಂದು ಸ್ವತಂತ್ರ ದೇಶವಾಗಿ ಹೊರಹೊಮ್ಮಿತು.

ಇದಕ್ಕೂ ಮುಂಚೆ ವಿಶ್ವಸಂಸ್ಥೆಯು ಈ ಪ್ರದೇಶದಲ್ಲಿ ಎರಡು ದೇಶಗಳ ಅಸ್ತಿತ್ವದ ಸೂತ್ರದಡಿಯಲ್ಲಿ ಈ ಪ್ರದೇಶವನ್ನು ಪ್ಯಾಲೆಸ್ತೀನ್ ಅರಬ್ಬರ ದೇಶ ಹಾಗೂ ಯಹೂದಿಗಳ ದೇಶ ಎಂಬ ಎರಡು ಪ್ರತ್ಯೇಕ ರಾಷ್ತ್ರ ರಚನೆಗಳ ಯೋಜನೆಯನ್ನು ಸಿದ್ಧಪಡಿಸಿತು. ಯಹೂದಿಯರು ಇದನ್ನು ಒಪ್ಪಿಕೊಂಡರೆ ಅರಬ್ಬರು ಇದನ್ನು ವಿರೋಧಿಸಿದರು.

ಮೇ, 1948 ರಂದು ಇಸ್ರೇಲ್ ಅಧಿಕೃತವಾಗಿ ಸ್ವತಂತ್ರ ದೇಶವಾಗಿ ಚಾಲ್ತಿಗೆ ಬಂದಿತು ಹಾಗೂ ಯಹೂದಿಯರ ಮುಖ್ಯ ನಾಯಕರಾಗಿದ್ದ ಡೆವಿಡ್ ಬೆನ್ ಗುರಿಯನ್ ದೇಶದ ಮೊದಲ ಪ್ರಧಾನಿಯಾಗಿ ಆಡಳಿತವಹಿಸಿಕೊಂಡರು.

ಯಹೂದಿಯರಿಗೆ ಇದೊಂದು ಐತಿಹಾಸಿಕ ಗೆಲುವಾಗಿ ಕಂಡುಬಂದರೆ ಮತ್ತೊಂದೆಡೆ ಈ ಘಟನೆ ಮುಂದೆ ನಡೆದ ಹಲವು ಯಹೂದಿ-ಪ್ಯಾಲೆಸ್ತೀನಿಯರ ದಂಗೆಗಳಿಗೆ ಮುನ್ನುಡಿಯನ್ನೂ ಹಾಡಿತು. ಇಲ್ಲಿ ಮುಖ್ಯವಾಗಿ ಕಾಲದ ವಿವಿಧ ಸಮಯದಲ್ಲಿ ನಡೆದ ಸುಯೆಜ್ ಕಾಲುವೆ ವಿವಾದ, ಆರು ದಿನಗಳ ಯುದ್ಧ, ಯೊಮ್ ಕಿಪ್ಪುರ್ ಯುದ್ಧ, ಲೆಬನಾನ್ ಯುದ್ಧ, ಮೊದಲ ಇಂತಿಫಾದಾ, ಎರಡನೇ ಇಂತಿಫಾದಾ, ಎರಡನೇ ಲೆಬನಾನ್ ಯುದ್ಧ ಹಾಗೂ ಹಮಾಸ್ ಯುದ್ಧ ಮುಂತಾದವುಗಳು ಪ್ರಮುಖವಾಗಿವೆ.

ಇಲ್ಲಿ ಪ್ರಮುಖವಾಗಿ ಮೊದಲ ಪ್ಯಾಲೆಸ್ತೀನ್ ಇಂತಿಫಾದಾವನ್ನು ಗಮನಿಸಬಹುದು. ಈ ಯುದ್ಧವು ಒಸ್ಲೊ ಶಾಂತಿ ಒಪ್ಪಂದದನ್ವಯ ಕೊನೆಗೊಂಡಿತು. ಈ ಒಪ್ಪಂದದಡಿಯಲ್ಲಿ ಪ್ಯಾಲೆಸ್ತೀನಿಯನ್ ಪ್ರಾಧಿಕಾರ ರಚಿಸಲಾಯಿತು ಹಾಗೂ ಅದು ಕೆಲವು ಭಾಗಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿತು. ಇದನ್ನು ಮಾನ್ಯ ಮಾಡುತ್ತಾ 1997 ರಲ್ಲಿ ವೆಸ್ಟ್ ಬ್ಯಾಂಕ್ ನ ಹಲವು ಭಾಗಗಳನ್ನು ಇಸ್ರೇಲ್ ಸೇನಾಪಡೆ ಪ್ಯಾಲೇಸ್ಟಿನಿಯರಿಗೆ ಬಿಟ್ಟುಕೊಟ್ಟಿತು.

ಆದರೂ ಇಬ್ಬರ ಮಧ್ಯದ ಬಿಕ್ಕಟ್ಟು ಇಂದಿಗೂ ಮುಂದುವರೆದಿದೆ. ಅದರಲ್ಲೂ ವಿಶೇಷವಾಗಿ 2006 ರಲ್ಲಿ ಪ್ಯಾಲೆಸ್ತೀನಿಯರ ಪ್ರತಿನಿಧಿಯಾಗಿ ಹಮಾಸ್ ಎಂಬ ಪಡೆಯು ತನ್ನನ್ನು ತಾನು ಪ್ಯಾಲೆಸ್ತೀನಿಯರ ಶಕ್ತಿ ಎಂದು ಗುರುತಿಸಿಕೊಂಡು ಪ್ರವರ್ಧಮಾನಕ್ಕೆ ಬಂದಿತು. ಅಂದಿನಿಂದ ವಿವಿಧ ಸಮಯಗಳಲ್ಲಿ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಆಗಾಗ ಸಣ್ಣ ಪ್ರಮಾಣದ ದಾಳಿಗಳು ಜರುಗುತ್ತಲೇ ಇವೆ. ಈ ಪಡೆಯನ್ನು ವಿಶ್ವಸಂಸ್ಥೆ ಹಾಗು ಯುಎಸ್ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿದೆ.

ಒಟ್ಟಿನಲ್ಲಿ ಸದ್ಯ ಇಸ್ರೇಲ್ ಇರುವ ಭೂಭಾಗವು ಇಸ್ರೇಲ್, ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿಗಳಾಗಿ ವಿಭಾಗಿಸಲ್ಪಟ್ಟಿವೆ. ಹಮಾಸ್ ಗಾಜಾದಲ್ಲಿ ತಮ್ಮ ಪ್ರಬಲ ಅಸ್ತಿತ್ವ ಹೊಂದಿದ್ದಾರೆ. ಮೊನ್ನೆ ನಡೆದ ಹಮಾಸ್ ದಾಳಿಯು ಕಳೆದ ಕೆಲವು ದಶಕಗಳಲ್ಲೇ ಘೋರ ಕೃತ್ಯವಾಗಿದ್ದು ಇಸ್ರೇಲ್ ಅದಕ್ಕೆ ಪ್ರತಿಕಾರವಾಗಿ ಹಮಾಸ್ ಅನ್ನೇ ಸರ್ವನಾಶ ಮಾಡುವ ಪ್ರತಿಜ್ಞೆ ಮಾಡಿ ದಾಳಿ ಮಾಡುತ್ತಿದೆ.

ಪ್ರಸ್ತುತ ಸಮಯ

ಇದೀಗ ಈ ಯುದ್ಧವು ಹಲವು ತಿರುವುಗಳನ್ನು ಪಡೆಯುತ್ತಿದೆ. ಇಸ್ರೇಲ್ ಅನ್ನು ಈಗಾಗಲೇ ಸಾಕಷ್ಟು ದೇಶಗಳು ಬೆಂಬಲಿಸಿವೆ. ಇತ್ತ ಇಸ್ರೇಲ್ ನಡೆಸುತ್ತಿರುವ ಭೀಕರ ಪ್ರಹಾರಕ್ಕೆ ಕೆಲವು ಮುಸ್ಲೀಮ್ ದೇಶಗಳು ವಿರೋಧ ವ್ಯಕ್ತಪಡಿಸಿವೆ. ಇದು ಮುಂದೆ ಯಾವ ಸ್ವರೂಪ ಪಡೆಯಲಿದೆ, ಎಲ್ಲ ಇಸ್ಲಾಮಿಕ್ ದೇಶಗಳು ಒಗ್ಗಟ್ಟಾಗಿ ಇಸ್ರೇಲ್ ಮೇಲೆ ದಾಳಿ ನಡೆಸಬಹುದೆ ಅಥವಾ ಈ ಯುದ್ಧರಂಗದಲ್ಲಿ ಇನ್ನೂ ಕೆಲ ಊಹಿಸದ ದೇಶಗಳು ಪ್ರವೇಶ ಪಡೆಯಬಹುದೆ…ಎಂಬೆಲ್ಲ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

ಅಂತಿಮವಾಗಿ ಹೇಳಬೇಕೆಂದರೆ, ಏನೇ ಆದರೂ ಅದು ಬೇಗ ಪೂರ್ಣಗೊಳ್ಳಲಿ ಮತ್ತು ಶಾಂತಿ ಎಂಬುದು ಮತ್ತೊಮ್ಮೆ ಸ್ಥಾಪಿತವಾಗಲಿ.

Exit mobile version