Kannada News Buzz

ಬನ್ನಿ, ನೋಡಿ, ಆನಂದಿಸಿ…ಅಪ್ಸರೆಯರೇ ಇಷ್ಟಪಟ್ಟ ಅಪ್ಸರಕೊಂಡ ಜಲಪಾತ

ಹೆಸರೇ ಸೂಚಿಸುವಂತೆ ಅಪ್ಸರಕೊಂಡ ಇದು ಅಪ್ಸರೆಯರ ಕೊಂಡ ಅಥವಾ ಹೊಂಡ ಎಂತಲೂ ಅನ್ನಬಹುದು. ಐವತ್ತು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ನೀರು ಹಾಗೂ ಅದು ಬೀಳುವ ಸ್ಥಳದಲ್ಲಿ ನಿರ್ಮಾಣವಾಗಿರುವ ಹೊಂಡ, ಅದರ ಸುತ್ತಲೂ ಇರುವ ದಟ್ಟ ಹಸಿರಿನ ಹಾಸಿಗೆ, ಇಷ್ಟು ಸಾಕು ನಿಮ್ಮ ಮನವನ್ನು ಕದಿಯಲು.

ಈಗಂತೂ ಮಳೆಗಾಲ, ಕಡು ಬೇಸಿಗೆಯಿಂದ ಕೊತ ಕೊತ ಕಾಯ್ದಿದ್ದ ಭೂತಾಯಿಯು ತಂಪಾದ ಮಳೆನೀರಿನಲ್ಲಿ ತನ್ನನ್ನು ತಾನು ಮಿಂದು ತಂಪಾದ ಹಿತ ಅನುಭವ ಪಡೆಯುವ ಅದ್ಭುತ ಕಾಲ. ಒಂದೆಡೆ ಇದು, ಏಪ್ರಿಲ್-ಮೇ ಬೇಸಿಗೆಯಿಂದ ಬಸವಳಿದಿದ್ದ ಜನರಲ್ಲೂ ಉತ್ಸಾಹದ ಅಲೆ ಚಿಮ್ಮಿಸುವ ಕಾಲವಾದರೆ ಇನ್ನೊಂದೆಡೆ ಪ್ರಕೃತಿ ತನ್ನ ವೈಭವೋಪೇತ ಹಸಿರಿನ ಸಂಪತ್ತನ್ನು ಮರಳಿ ಪಡೆಯುವ ಕಾಲ.

ಹೌದು, ಈ ಸಮಯದಲ್ಲಿ ಎಲ್ಲೆಡೆ ಪ್ರಕೃತಿಯ ಹಸಿರು ಮತ್ತೆ ಚಿಗುರೊಡೆದು ತನ್ನ ಅದ್ಭುತ ಸೌಂದರ್ಯದಿಂದ ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತದೆ. ನದಿ, ಹಳ್ಳ, ಝರಿ-ತೊರೆಗಳು ಮೈದುಂಬಿ ಹರಿಯುತ್ತವೆ. ಜಲಪಾತಗಳು ಭೋರ್ಗೆರೆಯುತ್ತವೆ. ಒಟ್ಟಾರೆಯಾಗಿ ನಿಸರ್ಗದ ಅದ್ಭುತ ದೃಶ್ಯಗಳನ್ನು ಮನದುಂಬಿಕೊಳ್ಳಲು ಇದು ಸೂಕ್ತವಾದ ಕಾಲ ಎನ್ನಬಹುದು.


ಕೃಪೆ: Tiruka.yatrika

ಪ್ರಕೃತಿ ಪ್ರಿಯ ಪ್ರವಾಸಿಗರು ಸಮಾನ್ಯವಾಗಿ ಇಂತಹ ಸಮಯದಲ್ಲಿ ಪ್ರವಾಸದ ಯೋಜನೆಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. ನಿಮಗೂ ಸಹ, ಒಂದು, ಎಂದಿಗೂ ಮರೆಯಲಾಗದ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿರುವ ಅದ್ಭುತ ತಾಣಕ್ಕೊಂದು ಪ್ರವಾಸ ಹೊರಡಬೇಕೆಂಬ ಮನಸ್ಸಾಗಿದೆಯೇ..? ಹಾಗಿದ್ದರೆ ಯಾವ ಸ್ಥಳಕ್ಕೆ ಹೋಗಲಿ ಎಂಬ ರೀಸರ್ಚ್ ಮಾಡೋದು ಬಿಡಿ ನಾವು ಹೇಳುತ್ತಿರುವ ಈ ಸುಂದರ ತಾಣಕ್ಕೊಮ್ಮೆ ಭೇಟಿ ಕೊಟ್ಟು ನೋಡಿ.

ಅಪ್ಸರಕೊಂಡ

ಹೆಸರೇ ಸೂಚಿಸುವಂತೆ ಅಪ್ಸರಕೊಂಡ ಇದು ಅಪ್ಸರೆಯರ ಕೊಂಡ ಅಥವಾ ಹೊಂಡ ಎಂತಲೂ ಅನ್ನಬಹುದು. ಐವತ್ತು ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ನೀರು ಹಾಗೂ ಅದು ಬೀಳುವ ಸ್ಥಳದಲ್ಲಿ ನಿರ್ಮಾಣವಾಗಿರುವ ಹೊಂಡ, ಅದರ ಸುತ್ತಲೂ ಇರುವ ದಟ್ಟ ಹಸಿರಿನ ಹಾಸಿಗೆ, ಇಷ್ಟು ಸಾಕು ನಿಮ್ಮ ಮನವನ್ನು ಕದಿಯಲು.

ಪ್ರಾಚೀನ ಜಲಪಾತ

ಇದೊಂದು ಜಲಪಾತವನ್ನೂ ಹೊಂದಿರುವ ತಾಣವಾಗಿದ್ದು ಇಲ್ಲಿರುವ ಜಲಪಾತವು ಬಲು ಪ್ರಾಚೀನವಾದುದು ಎಂದು ನಂಬಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಂತಕಥೆಯೊಂದು ಚಾಲ್ತಿಯಲ್ಲಿದೆ. ಆ ಪ್ರಕಾರ, ಹಿಂದೆ ಸ್ವರ್ಗದ ಅಪ್ಸರೆಯರು ಭೂಮಿಯಲ್ಲಿ ಸುತ್ತುತ್ತಿರುವಾಗ ಈ ಸ್ಥಳವನ್ನು ನೋಡಿ ಎಷ್ಟು ಆಕರ್ಷಿತರಾದರೆಂದರೆ ಇಲ್ಲಿಳಿದು ಮಿಂದು, ವಿಶ್ರಾಂತಿ ಪಡೆಯುತ್ತ ಆನಂದಿಸಿದರಂತೆ. ಹಾಗಾಗಿಯೇ ಇದಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಹೆಸರಿಗೆ ತಕ್ಕ ಹಾಗೆಯೇ ಇಲ್ಲಿನ ದೃಶ್ಯಾವಳಿ ಕಂಡುಬರುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನು ಇಲ್ಲಿರುವ ಜಲಪಾತದ ಕೆಳಗಿನ ಬಿಂದುವರೆಗೂ ಸರಾಗವಾಗಿ ಇಳಿಯಬಹುದಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಜಲಪಾತದ ಧಾರೆ ಬೀಳುವ ನೆಲದವರೆಗೂ ಮೆಟ್ಟಿಲುಗಳನ್ನು ನಿರ್ಮಿಸಿದ್ದು ಅವುಗಳ ಮೂಲಕ ಸುಲಭವಾಗಿ ಇಳಿಯಬಹುದಾಗಿದೆ.


ಕೃಪೆ: Akasmita

ಅಷ್ಟೇ ಅಲ್ಲ, ಇಲಾಖೆಯು ಈ ಸ್ಥಳವನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಹಲವಾರು ಉಪಕ್ರಮಗಳನ್ನು ಸಹ ತೆಗೆದುಕೊಂಡಿದೆ. ಇದನ್ನು ಸ್ವತಃ ನೀವಲ್ಲಿಗೆ ಭೇಟಿ ನೀಡಿದಾಗ ಕಾಣಬಹುದು. ಇಲ್ಲಿನ ಇನ್ನೊಂದು ಸೋಜಿಗ ಎಂದರೆ ಕೇವಲ ಧುಮ್ಮಿಕ್ಕುತ್ತಿರುವ ಜಲಪಾತವಲ್ಲ, ಬದಲಾಗಿ ಆ ಜಲಪಾತ ಯಾವ ರೀತಿ ಭೂಮಿಗೆ ಬೀಳುತ್ತಿದೆ ಎಂಬುದಾಗಿದೆ.

ಹೌದು, ಹಳೆಯ ಅರಳಿ ಮರವೊಂದರ ಬೇರುಗಳ ಮೂಲಕ ನೀರು ದಾರಿ ಮಾಡಿಕೊಂಡು ಮೇಲಿನಿಂದ ಕೆಳಗೆ ಬೀಳುವುದು ಇಲ್ಲಿನ ಜಲಪಾತದ ವಿಶೇಷತೆ ಎನ್ನಬಹುದು. ಅಷ್ಟೆ ಅಲ್ಲ, ಇಲ್ಲಿನ ಹಳೆಯ ಮರದ ಬೇರುಗಳ ಹಿಂದೆ ಅವಿತಿರುವಂತೆ ನೈಸರ್ಗಿಕವಾಗಿ ಮೂಡಿರುವ ಗುಹೆಗಳಿರುವುದು ಇನ್ನೊಂದು ವಿಶೇಷ.

ಗುಹೆಗಳು

ಇಲ್ಲಿರುವ ಗುಹೆಗಳು ಸಾಕಷ್ಟು ಆಕರ್ಷಕವಾಗಿದ್ದು ಕುತೂಹಲ ಕೆರಳಿಸುವಂತಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಗುಹೆಗಳನ್ನು ಅನ್ವೇಷಿಸದೆ ಇರಲು ಯಾವುದೇ ಕಾರಣಗಳಿಲ್ಲ. ಇವುಗಳನ್ನು ಪಾಂಡವರ ಗುಹೆಗಳು ಎಂದೂ ಸಹ ಕರೆಯಲಾಗುತ್ತದೆ.

ಪಾಂಡವರು ತಮ್ಮ ವಾನಪ್ರಸ್ಥದ ಸಮಯದಲ್ಲಿ ಈ ಗುಹೆಗಳಲ್ಲಿ ತಂಗಿದ್ದರೆಂಬ ಪ್ರತೀತಿಯಿದೆ. ಹಾಗಾಗಿಯೇ ಇವುಗಳನ್ನು ಪಾಂಡವರ ಗುಹೆಗಳೆಂದು ಕರೆಯಲಾಗುತ್ತದೆ. ಈ ಆಕರ್ಷಣೆಯ ಸುತ್ತಮುತ್ತಲಿನಲ್ಲಿ ಹಲವಾರು ದೇವಾಲಯಗಳಿವೆ ಹಾಗೂ ಪ್ರಸಿದ್ಧ ರಾಮಚಂದ್ರ ಮಠದ ಒಂದು ಶಾಖೆಯೂ ಇದ್ದು ಪ್ರವಾಸಿಗರಲ್ಲಿ ಇವೆಲ್ಲ ಜನಪ್ರೀಯ ಭೇಟಿ ನೀಡಬಹುದಾದ ಆಕರ್ಷಣೆಗಳಾಗಿವೆ.

ಟ್ರೆಕ್ಕಿಂಗ್/ಚಾರಣ

ಟ್ರೆಕ್ಕಿಂಗ್ ಪ್ರಿಯರು ಈ ತಾಣಕ್ಕೆ ಟ್ರೆಕ್ ಮಾಡಬಹುದಾಗಿದ್ದು ಈ ಮಾರ್ಗವು ಅದ್ಭುತವಾದ ಪ್ರಾಕೃತಿಕ ಸೊಬಗಿನಿಂದ ಕೂಡಿದೆ. ಅಂದರೆ ನೀವು ಚಾರಣ ಮಾಡುವಾಗ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತೀರಿ ಅನ್ನುವುದರಲ್ಲಿ ಸಂದೇಹವೇ ಇಲ್ಲ.

ಆದರೆ ನೆನಪಿಡಿ ಟ್ರೆಕ್ಕಿಂಗ್ ಮಾಡುವಾಗ ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಪಥದಲ್ಲಿ ಬರುವ ಕಲ್ಲು-ಬಂಡೆಗಳು ಸಾಕಷ್ಟು ಜರಿಯುತ್ತಿರುತ್ತವೆ. ಹಾಗಾಗಿ ಬಲು ಎಚ್ಚರಿಕೆಯಿಂದ ಕಾರಣ ಮಾಡಬೇಕು.

ಅಪ್ಸರಕೊಂಡದಲ್ಲಿ ಎತ್ತರದ ಗುಡ್ಡವೊಂದಿದ್ದು ಅಲ್ಲಿಗೂ ಹತ್ತಬಹುದಾಗಿದೆ. ಅಲ್ಲಿನ ವಿಶೇಷತೆ ಎಂದರೆ ಆ ಗುಡ್ಡದ ತುದಿಯಿಂದ ಕಂಡುಬರುವ ಪ್ರಕೃತಿಯ ವಿಹಂಗಮ ನೋಟ. ಹೌದು, ಅಲ್ಲಿಂದ ನೀವು ಅರಬ್ಬಿ ಸಮುದ್ರ ಸುಂದರ ಸೂರ್ಯಾಸ್ತ ದೃಶ್ಯ ನೋಡಬಹುದಾಗಿದ್ದು ಪ್ರಶಾಂತವಾದ ಅರಬ್ಬಿ ಕಡಲ ತೀರದ ನೋಟವನ್ನೂ ಸಹ ಆನಂದಿಸಬಹುದು.


ಕೃಪೆ: Isroman.san

ಒಟ್ಟಾರೆ ಈ ತಾಣಕ್ಕೆ ಭೇಟಿ ನೀಡುವುದು ನಿಮ್ಮ ಎಲ್ಲ ವೆಚ್ಚಕ್ಕೆ ತಕ್ಕ ನ್ಯಾಯ ಎಂತಲೇ ಹೇಳಬಹುದು. ಹಾಗಾದರೆ ಇನ್ನೇಕೆ ತಡ, ಇಂದೇ ಅಪ್ಸರಕೊಂಡದ ಒಂದು ಪ್ರವಾಸಕ್ಕೆ ಸಿದ್ಧರಾಗಿ ಹಾಗೂ ನಿಮ್ಮ ಕುಟುಂಬದವರೋ ಅಥವಾ ಸ್ನೇಹಿತರೊಂದಿಗೋ ಪ್ರವಾಸ ಮಾಡಿ ಬಿಡಿ.

ಹೋಗೋದು ಹೇಗೆ? ಎಲ್ಲಿದೆ ಈ ಸ್ಥಳ?

ಮಳೆಗಾಲದಲ್ಲಿ ಅಂದರೆ ಜೂನ್ ನಿಂದ ಅಕ್ಟೋಬರ್-ನವಂಬರ್ ವರೆಗೂ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಳಿ ಸ್ಥಿತವಿದೆ.

ಹೊನ್ನಾವರದಿಂದ ಆರು ಕಿ.ಮೀ ಗಳಷ್ಟು ದೂರದಲ್ಲಿ ಅಪ್ಸರಕೊಂಡ ಸ್ಥಿತವಿದ್ದು ಪ್ರವಾಸಿಗರು ಮೊದಲು ಹೊನ್ನಾವರಕ್ಕೆ ಬಂದು ಅಲ್ಲಿಂದ ಸ್ಥಳೀಯ ಸಾರಿಗೆ ಮೂಲಕ ಅಪ್ಸರಕೊಂಡವನ್ನು ತಲುಪಬಹುದಾಗಿದೆ. ವಿಮಾನದ ಮೂಲಕ ಹೋಗಲಿಚ್ಛಿಸುವವರು ಹುಬ್ಬಳ್ಳಿಗೆ ತಲುಪಿ ಅಲ್ಲಿಂದ ಬಸ್ಸುಗಳ ಮೂಲಕ ಹೊನ್ನಾವರಕ್ಕೆ ತೆರಳಬಹುದಾಗಿದೆ.

ಹೊನ್ನಾವರ ರೈಲು ನಿಲ್ದಾಣವನ್ನು ಸಹ ಹೊಂದಿದ್ದು ಕರ್ನಾಟಕದ ಹಲವು ಪ್ರಮುಖ ನಗರಗಳಿಂದ ಇಲ್ಲಿಗೆ ರೈಲಿನ ಸಂಪರ್ಕವಿದೆ. ಕ್ಯಾಬ್, ಟ್ಯಾಕ್ಸಿ ಮಾಡಲಿಚ್ಚಿಸುವವರು ಹೊನ್ನಾವರದಿಂದ ಅಥವಾ ಹುಬ್ಬಳ್ಳಿಯಿಂದ ಹಾಗೆ ಮಾಡಬಹುದು
ಸೋ, ಈಗ ಗೊತ್ತಾಯ್ತಲ್ಲ ಸ್ನೇಹಿತರೆ, ಇನ್ನೂ ಮಳೆಗಾಲ ಮುಗಿದಿಲ್ಲ, ಸ್ವಲ್ಪ ಸಮಯ ಮಾಡಿಕೊಂಡು ಕರ್ನಾಟಕದಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲದೆ ಇರುವ ಅಥವಾ ಕಡಿಮೆ ಜನರಿಂದ ಮಾತ್ರವೇ ಅನ್ವೇಷಿಸಲಾಗಿರುವ ಈ ಅದ್ಭುತ ತಾಣಕ್ಕೊಮ್ಮೆ ಭೇಟಿ ನೀಡಿ.

ವಾರಾಂತ್ಯದ ಪ್ರವಾಸಕ್ಕೂ ಇದು ಸೂಕ್ತವಾಗಿದ್ದು ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಗಳಂತಹ ನಗರಗಳಿಂದ ಕಾರು ಅಥವಾ ಟ್ಯಾಕ್ಸಿ ಬುಕ್ ಮಾಡಿಕೊಂಡು ಈ ಸುಂದರ ತಾಣಕ್ಕೆ ಭೇಟಿ ನೀಡಿ ಒತ್ತಡದ ಜೀವನದಲ್ಲಿ ಮತ್ತೆ ಪುಟಿದೇಳುವಂತೆ ರಿಚಾರ್ಜ್ ಆಗಬಹುದು.

ಕರ್ನಾಟಕದ ಎಲ್ಲ ಪ್ರಮುಖ ನಗರಗಳಿಂದಲೂ ರಸ್ತೆ ಸಂಪರ್ಕ ಸುಗಮವಾಗಿದ್ದು ಹುಬ್ಬಳ್ಳಿ ಅಥವಾ ಕಾರವಾರಕ್ಕೆ ಬರಬಹುದು. ಅಲ್ಲಿಂದ ನಿಮಗೆ ಹೊನ್ನಾವರಕ್ಕೆ ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ಲಭ್ಯವಿದೆ.

Exit mobile version