Kannada News Buzz

Adi Guru Shankaracharya: ಆದಿ ಗುರು ಶಂಕರರ ಕುರಿತಾದ ಆಸಕ್ತಿಕರ ಪ್ರಸಂಗಗಳು ಮತ್ತು ಅವರ ಅದ್ಭುತ ಬೋಧನೆಗಳು

Adi Guru Shankaracharya

charset=Ascii binary comment

ಚಿತ್ರಕೃಪೆ: arshadrishti.org

ಅದ್ವೈತ ಸಿದ್ಧಾಂತವನ್ನು ಪಸರಿಸಿರುವ ಆದಿ ಗುರು ಶಂಕರ ಅರ್ಥಾತ್ ಶಂಕರಾಚಾರ್ಯರ ಹೆಸರು ಕೇಳಿದೊಡನೆಯೇ ಅವರ ಅನೇಕ ಭಕ್ತರ ಮೈಮನವೆಲ್ಲ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಭಾರತದ ಅಪ್ರತಿಮ ಗುರುಪರಂಪರೆಯಲ್ಲಿ ಕಾಣಬಹುದಾದ ಒಂದು ಹೆಸರು ಆದಿ ಶಂಕರಾಚಾರ್ಯರು. ನಿರಾಕಾರ ಪರಬ್ರಹ್ಮನ ಸಾರವನ್ನು ಒತ್ತಿ ಹೇಳಿದ ಈ ಮಹಾನ್ ಸಂತ ಬ್ರಹ್ಮನೇ ಸತ್ಯ ಈ ಜಗತ್ತು ಮಿಥ್ಯ ಎಂಬ ಸರಳವಾದ ಆದರೆ ಅತ್ಯಂತ ಆಳವಾದ ವಾಕ್ಯದ ಮೂಲಕ ಮನುಕುಲದ ಉದ್ಧಾರಕ್ಕೆ ದೀಪ ಬೆಳಗಿದ್ದಾರೆಂದರೂ ತಪ್ಪಾಗದು.

ಶಂಕರರು ಅಲ್ಪಾಯುಷಿಯಾದರೂ ತಮ್ಮ ಚಿಕ್ಕ ವಯಸ್ಸಿನಲ್ಲೇ ಅಭೂತಪೂರ್ವವಾದಂತಹ ಸಾಧನೆ ಮಾಡುವ ಮೂಲಕ ಆಧ್ಯಾತ್ಮಿಕ ಪಥದಲ್ಲಿ ಹೊಸ ಮೈಲಿಗಲ್ಲನ್ನೇ ನೆಟ್ಟಿದ್ದಾರೆಂದರೆ ಅತಿಶಯೋಕ್ತಿಯಾಗದು.

ಇನ್ನು ಶಂಕರರು ಚಿಕ್ಕವರಿದ್ದಾಗಲೇ ಸಾಧನಾ ಶಕ್ತಿ ಹೊಂದಿದ್ದರೇನೋ ಎಂಬುವಂತಹ ಹಲವು ಪ್ರಸಂಗಗಳು ಜರುಗಿವೆ. ಅಂತಹ ಎರಡು ಸ್ವಾರಸ್ಯಕರ ಪ್ರಸಂಗಗಳ ಬಗ್ಗೆ ಬನ್ನಿ ತಿಳಿಯೋಣ.

ಶಂಕರಾಚಾರ್ಯರ ಕೆಲ ವಿವರಗಳು

ಜನನ: ಕ್ರಿ.ಶ. 788
ಜನನ ಸ್ಥಳ: ಕಾಲಡಿ, ಕೇರಳ
ಇನ್ನೊಂದು ಹೆಸರು: ಭಗವತ್ಪಾದ ಆಚಾರ್ಯರು
ಗುರು: ಗೋವಿಂದ ಭಗವತ್ಪಾದರು
ತಂದೆ: ಶಿವಗುರು
ತಾಯಿ: ಆರ್ಯಾಂಬಾ
ಭೌತಿಕ ಶರೀರ ತ್ಯಜಿಸಿದ್ದು: ಕ್ರಿ.ಶ. 820 (ಕೇದಾರನಾಥ, ಉತ್ತರಾಖಂಡ)
ಸಮಾಧಿ: ಕೇದಾರನಾಥ

ಆದಿ ಶಂಕರರು ಸ್ಥಾಪಿಸಿರುವ ನಾಲ್ಕು ಪವಿತ್ರ ಪೀಠಗಳು/ಮಠಗಳು

ಉತ್ತರದಲ್ಲಿ ಬದ್ರಿಕಾಶ್ರಮ ಜ್ಯೋತಿರ್ಪಿಠ
ಪಶ್ಚಿಮದಲ್ಲಿ ದ್ವಾರಕೆಯಲ್ಲಿರುವ ಶಾರದಾ ಪೀಠ
ಪೂರ್ವದಲ್ಲಿ ಪುರಿಯಲ್ಲಿರುವ ಗೋವರ್ಧನ ಪೀಠ
ದಕ್ಷಿಣದಲ್ಲಿ ಚಿಕ್ಕಮಗಳೂರಿನ ಶೃಂಗೇರಿಯಲ್ಲಿರುವ ಶಾರದಾ ಪೀಠ

ಪ್ರಸಂಗ 1:

ಒಂದೊಮ್ಮೆ ಗುರುಕುಲದ ಶಿಕ್ಷಣ ಪಡೆದು ಶಂಕರರು ತಮ್ಮ ತಾಯಿ ಆರ್ಯಾಂಬೆ ಅವರ ಜೊತೆ ಮನೆಯಲ್ಲಿ ಇರುತ್ತಿದ್ದಂತಹ ಸಮಯವದು. ಅವರು ದಿನನಿತ್ಯದ ಚಟುವಟಿಕೆಗಳಲ್ಲಿ ತಮ್ಮ ತಾಯಿಗೆ ನೆರವಾಗುತ್ತ ಸಮಯ ಕಳೆಯುತ್ತಿದ್ದರು.

ಶಂಕರರ ತಾಯಿ ಆರ್ಯಾಂಬೆ ಅವರು ಬಲು ಶಿಸ್ತುಳ್ಳವರು. ಅವರ ಮನೆಯ ಬಳಿ ಪೂರ್ಣಾ ನದಿಯು ಹರಿಯುತ್ತಿತ್ತು. ಒಮ್ಮೆ ಆರ್ಯಾಂಬ ಅವರ ಆರೋಗ್ಯ ಚೆನ್ನಾಗಿರಲಿಲ್ಲ, ಆದರೂ ಅವರು ಸ್ನಾನವಿಲ್ಲದೆ ಇರುತ್ತಿರಲಿಲ್ಲ. ಆದರೆ ಅದು ಬೇಸಿಗೆಯ ಸಂದರ್ಭವಾಗಿದ್ದರಿಂದ ಪೂರ್ಣಾ ನದಿಯು ತನ್ನ ಪೂರ್ಣ ರೂಪದಲ್ಲಿರಲಿಲ್ಲ, ಅದರಲ್ಲಿರುವ ಸಾಕಷ್ಟು ನೀರು ಬತ್ತಿ ಹೋಗಿತ್ತು.

ಮೊದಲು ನೀರಿನಿಂದ ತುಂಬಿದ್ದ ತಳ ಈಗ ಹೊರಬಂದು ನೆಲವಾಗಿತ್ತು. ಹೀಗಿರುವಾಗ ಆರ್ಯಾಂಬೆಯವರು ನದಿಯಲ್ಲಿ ಸ್ನಾನ ಮಾಡಲು ಸ್ವಲ್ಪ ದೂರದವರೆಗೆ ನಡೆದುಕೊಂಡು ಹೋಗಬೇಕಾಗಿತ್ತು. ಆದರೆ ತಾಯಿಯ ಆರೋಗ್ಯ ಚೆನ್ನಾಗಿಲ್ಲದ ಕಾರಣ ಶಂಕರರು ಅವರನ್ನು ಕುರಿತು ನಡೆದುಕೊಂಡು ಹೋಗಬೇಡಿ ಎಂದರೂ ಆರ್ಯಾಂಬೆಗೆ ಸ್ನಾನವಿಲ್ಲದೆ ಇರುವ ಮನಸ್ಸು ಒಪ್ಪುತ್ತಿರಲಿಲ್ಲ.

ಹಾಗಾಗಿ ಅವರು ನಿತ್ರಾಣದಲ್ಲಿಯೂ ಮನೆಯಿಂದ ಆ ಕಲ್ಲು, ಬಂಡೆ, ದಿಬ್ಬಗಳಿಂದ ಕೂಡಿದ ನೆಲದ ಮೇಲೆ ನಡೆಯುತ್ತ ಸ್ನಾನ ಮಾಡಿ ಬರುವಾಗ ಅಶಕ್ತತೆಯಿಂದ ನಿಲ್ಲಲೂ, ನಡೆಯಲು ಆಗದೆ ಅಲ್ಲಿ ಕುಸಿದು ಬಿದ್ದರು. ಸುದ್ದಿ ತಿಳಿದ ಶಂಕರರು ತಾಯಿಯ ಬಳಿ ಹೋಗಿ ಅವರನ್ನು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಿದರು.

ಈಗ ಶಂಕರರ ಮನದಲ್ಲಿ ಒಂದೇ ಪ್ರಶ್ನೆ ಕಾಡುತ್ತಿತ್ತು. ಅದೇನೆಂದರೆ ತಾಯಿ ಸ್ನಾನವಿಲ್ಲದೆ ಇರುವುದಿಲ್ಲ, ನಾಳೆ ಮತ್ತೆ ಹೋಗಿಯೇ ಹೋಗುತ್ತಾರೆ, ಆದರೆ ನದಿಯ ಜಲವಿರುವುದು ಅಲ್ಪ ದೂರದಲ್ಲಿ.ಇದನ್ನು ಹೇಗೆ ನಿರ್ವಹಿಸಬೇಕು…ಎಂಬುದನ್ನೇ ಅವರು ಯೋಚಿಸುತ್ತಿದ್ದರು.

ತದನಂತರ ಅವರು ನಿಷ್ಠೆಯಿಂದ ತಮ್ಮ ಕೈಗಳನ್ನು ನಮಸ್ಕರಿಸುತ್ತ ನದಿ ದೇವತೆಯಾದ ಪೂರ್ಣಾ ದೇವಿಯನ್ನು ಸ್ತುತಿಸುತ್ತಾರೆ. ಆಗಲೇ ನೊಡಿ ಆಗಿದ್ದು ಅಚ್ಚರಿಯ ಸಂಗತಿ, ಪ್ರಕೃತಿಯ ವಿಲಕ್ಷಣತೆಯೋ, ಅಥವಾ ಶಂಕರರ ಅಪ್ರತಿಮ ಭಕ್ತಿಯೋ ಗೊತ್ತಿಲ್ಲ ಅಂದಿನ ರಾತ್ರಿಯೆಲ್ಲ ಮಳೆ ಭೋರ್ಗೆರೆದು ಬಿದ್ದಿತು ಹಾಗೂ ಮರುದಿನ ಬೆಳಗ್ಗೆ ಪೂರ್ಣಾ ನದಿಯು ಮೈದುಂಬಿ ಹರಿಯುತ್ತಿತ್ತು. ಶಂಕರ ಮನೆಯ ಪಕ್ಕದಲ್ಲೇ ನದಿಯ ದಂಡೆ ನಿರ್ಮಾಣವಾಗಿತ್ತು. ಈಗ ಆರ್ಯಾಂಬೆ ಅವರಿಗೆ ನಡೆದುಕೊಂಡು ಹೋಗುವ ತೊಂದರೆಯೇ ಇರಲಿಲ್ಲ.

ಪ್ರಸಂಗ 2:

ನಂಬಿಕೆಯ ಪ್ರಕಾರ, ಶಂಕರರು ಅಪಾರ ಸಾಧನೆಯುಳ್ಳವರಾಗಿದ್ದರು. ಅವರು ಕೆಲವೊಮ್ಮೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಮ್ಮ ಸಾಧನಾ ಶಕ್ತಿಯ ಮೂಲಕ ವಾಯುಮಾರ್ಗದಿಂದಲೂ ಹೋಗುತ್ತಿದ್ದರಂತೆ. ಹೀಗೊಮ್ಮೆ ಅವರು ವಾಯುಮಾರ್ಗದ ಮೂಲಕ ಹೋಗುತ್ತಿರುವಾಗ ಮಾರ್ಗ ಮಧ್ಯೆ ಗುರುವಾಯೂರು ಬಂದಿತಂತೆ.

ಗುರುವಾಯೂರಿನಲ್ಲಿ ಭಗವಾನ್ ಗುರುವಾಯೂರಪ್ಪನನ್ನು ದಿನದ ಮೂರು ಕಾಲ ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿತ್ತಿದ್ದರು. ಅಂದು ಸಹ ಶಂಕರರು ಹೋಗುತ್ತಿರುವಾಗ ಗುರುವಾಯೂರಪ್ಪನ ಮೆರವಣಿಗೆ ನಡೆದಿತ್ತು.

ಈ ಸಂದರ್ಭದಲ್ಲಾಗಿದ್ದೇನೆಂದರೆ ಶಂಕರರಿಗೆ ಆಗಸದ ಮೂಲಕ ಗುರುವಾಯೂರಪ್ಪನ ಮೆರವಣಿಗೆಯ ಸ್ಥಳ ಬಿಟ್ಟು ಮುಂದೆ ಚಲಿಸಲು ಆಗಲೇ ಇಲ್ಲವಂತೆ. ಅವರು ಕೊನೆಯದಾಗಿ ಗುರುವಾಯೂರಪ್ಪನ ದರುಶನ ಪಡೆಯಲು ನಮನ ಮಾಡಿ ಮುಂದೆ ಹೋಗಲು ಸಫಲರಾದರಂತೆ. ಅಂದಿನಿಂದ ಶಂಕರರು ಗುರುವಾಯೂರಪ್ಪನ ಪರಮ ಭಕ್ತರಾದರಂತೆ.

ಹೀಗೆ ಹಲವು ಬಗೆಯ ಆಸಕ್ತಿಕರ ವಿಷಯಗಳು ಶಂಕರರ ಕುರಿತು ಹಲವು ಪುಸ್ತಕಗಳನ್ನು ಓದಿದಾಗ ನಮಗೆ ದೊರೆಯುತ್ತವೆ.

ಶಂಕರರ ಕೆಲವು ಗಮನಸೆಳೆವ ಅದ್ಭುತ ಬೋಧನೆಗಳು

ಶಂಕರರು ಪ್ರಸರಿಸುತ್ತಿದ್ದ ತಾತ್ವಿಕ ಅಂಶಗಳೆಲ್ಲವನ್ನು ಒಂದೆ ವಾಕ್ಯದಲ್ಲಿ ಜೋಡಿಸಿ ಹೇಳಬೇಕೆಂದರೆ ಅದುವೆ, ಬ್ರಹ್ಮನೊಬ್ಬನೇ ಸತ್ಯ, ಜಗತ್ತೆಲ್ಲವೂ ಮಿಥ್ಯ ಎಂದು ಹೇಳಬಹುದು. ಇದೆಲ್ಲವೂ ಮಾಯಾಲೋಕ, ನಿರಾಕಾರ ಬ್ರಹ್ಮನೊಬ್ಬನೇ ಸತ್ಯ, ಸಕಲ ಜೀವಾತ್ಮಗಳು ಆ ಪರಮಾತ್ಮನ ಅಂಶವೇ ಆಗಿವೆ, ನಾನು ಆ ಪರಮಾತ್ಮನ ಅಂಶವೇ ಆಗಿರುವೆ, ಅಹಂ ಬ್ರಹ್ಮಾಸ್ಮಿ ಎಂಬುದೇ ಅವರ ತತ್ವದ ತಿರುಳು.

* ನಿನ್ನ ಯೋಚನೆಗಳು, ಆಲೋಚನೆಗಳು, ಕಲ್ಪನೆಗಳು ವಾಸ್ತವದಲ್ಲಿ ನೀನಲ್ಲ. ಆದರೆ ಅವುಗಳ ಬಗ್ಗೆ ಜಾಗೃತಿಯ ಭಾವನೆ ಹೊಂದಿರುವವನೇ ನೀನಾಗಿರುವೆ. ಯೋಚನೆಗಳು ಗೊಂದಲಕ್ಕೀಡು ಮಾಡುತ್ತವೆ, ನೋವನ್ನು ನೀಡುತ್ತವೆ, ಮತ್ತೊಬ್ಬರ ಕುರಿತು ದೂರುಗಳನ್ನು ಹೊಂದಿರುತ್ತವೆ, ಭವಿಷ್ಯದ ಚಿಂತೆಗಳನ್ನು ಹೊಂದಿರುತ್ತವೆ. ಹಾಗಾಗಿ ಆ ಯೋಚನೆಗಳು ಮೂಲತಃ ನಿನ್ನನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ನಿನ್ನ ಅಹಂ ನಿಂದ ರೂಪಗೊಂಡ ಪ್ರತಿಫಲನಗಳಾಗಿವೆ. ಹಾಗಾಗಿ ಆ ಯೋಚನೆಗಳ ಮಾಯಾಜಾಲದಲ್ಲಿ ಬಂಧಿಸಲ್ಪಡದೆ ಅದರ ಅರಿವನ್ನು ಹೊಂದುವುದೇ ಮೋಕ್ಷದ ದಾರಿಯೆಡೆಗೆ ಮೊದಲ ಹೆಜ್ಜೆ.

* ಪ್ರಸ್ತುತ ಅಥವಾ ವರ್ತಮಾನ ಸ್ಥಿತಿಯೆಂಬುದೇ ಸದ್ಯ ಅಸ್ತಿತ್ವದಲ್ಲಿರುವುದು ಹಾಗೂ ಜೀವನವೆಂಬುದು ಇರುವುದು ಅಲ್ಲೆ. “ಇದು” ಅಥವಾ “ಈಗ” ಎಂಬುದರ ಅರಿವು ಆದಾಗಲೇ ಋಣಾತ್ಮಕ ಯೋಚನೆಗಳಿಂದ ನೀವು ಅಂತರವನ್ನು ಕಾಪಾಡಿಕೊಳ್ಳಬಹುದು. ಪೂರ್ಣ ಸ್ಥಿತಿಪ್ರಜ್ಞ ಉಂಟಾದಾಗಲೇ ಜೀವನದ ವಿಶಿಷ್ಟ ಅನುಭೂತಿಯನ್ನು ಅನುಭವಿಸಲು ಪ್ರಾರಂಭಿಸುತ್ತೇವೆ.

* ಸದ್ಯದ ಪರಿಸ್ಥಿತಿ ಅಥವಾ ಸಂದರ್ಭ ಹೇಗಿದೆಯೋ ಅದನ್ನು ಹಾಗೆಯೇ ಸ್ವೀಕರಿಸು. ಇದನ್ನು ಸ್ವೀಕರಿಸಲು ಮನಸ್ಸು ಒಪ್ಪದೆ ಇದ್ದಾಗಲೇ ಎಲ್ಲ ರೀತಿಯ ನೋವು, ಸಂಕಟಗಳು ಉಂಟಾಗಲು ಪ್ರಾರಂಭಿಸುತ್ತವೆ.

* ಮನುಷ್ಯ ವೈಯಕ್ತಿಕವಾಗಿ ಅಥವಾ ಸಮುದಾಯದ ಪ್ರಭಾವಕ್ಕೊಳಗಾಗಿ ಹಲವಾರು ಭಾವನೆಗಳನ್ನು ತನ್ನಲ್ಲೇ ಮೂಡಿಸಿಕೊಂಡಿದ್ದಾನೆ. ಈ ವಿವಿಧ ಮಾನಸಿಕ ಭಾವನೆಗಳಿಂದ ಮನುಷ್ಯನು ಸದಾ ತೊಳಲಾಡುತ್ತಿರುತ್ತಾನೆ. ಹಾಗಾಗಿಯೇ ವ್ಯತಿರಿಕ್ತ ಪರಿಸ್ಥಿತಿಗಳಲ್ಲಿ ಮನುಷ್ಯ ಹತಾಶೆ ಅಥವಾ ಸಂಕಟಗಳನ್ನು ಅನುಭವಿಸುತ್ತಾನೆ. ಈ ಭಾವನೆಗಳು ಮೂಲತಃ ನನ್ನನ್ನು ಪ್ರತಿನಿಧಿಸುತ್ತಿಲ್ಲ, ಇದು ನಾನಲ್ಲ ಬದಲಾಗಿ ಈ ದೇಹದಲ್ಲಿ ಹುದುಗಿಕುಳಿತಿರುವ ಭಾವನೆಗಳಷ್ಟೇ ಎಂಬ ಸತ್ಯದ ಅರಿವಾದಾಗ ಮಾತ್ರ ಈ ಎಲ್ಲ ಸಂಕಟಗಳಿಂದ ಮುಕ್ತಿ ದೊರೆಯುತ್ತದೆ.

* ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು, ಜೀವಿ ತಮ್ಮದೇ ಆದ ಅಸ್ತಿತ್ವ, ಉದ್ದೇಶ ಹಾಗೂ ಸ್ಥಿತ ಪ್ರಜ್ಞೆಯನ್ನು ಹೊಂದಿವೆ. ಒಂದು ಚಿಕ್ಕ ಕಲ್ಲು ಸಹ ಮೂಲ ಪ್ರಜ್ಞೆಯನ್ನು ಹೊಂದಿದೆ, ಇಲ್ಲದೆ ಹೋದರೆ ಕಲ್ಲು ತನ್ನ ಅಸ್ತಿತ್ವವನ್ನೇ ಹೊದಿರುತ್ತಿರಲಿಲ್ಲ ಬದಲಾಗಿ ಅದರ ಎಲ್ಲ ಅಣುಗಳು ಎಲ್ಲೆಡೆ ಪಸರಿಸಿರುತ್ತಿದ್ದವು. ಈ ಜಗತ್ತು, ಸೂರ್ಯ, ಭೂಮಿ, ಮನುಷ್ಯ, ಪ್ರಾಣಿ ಎಲ್ಲವೂ ಜೀವಮಯವಾಗಿದೆ, ತಮ್ಮದೆ ಆದ ವಿವಿಧ ಮಟ್ಟಗಳಲ್ಲಿ ಅರಿವಿನ ಪ್ರಜ್ಞೆ ಹೊಂದಿವೆ. ಈ ಪ್ರಜ್ಞೆಯು ವಿವಿಧ ಬಗೆಯ ರೂಪ, ವೇಷ, ಆಕೃತಿ, ಗಾತ್ರ ಪಡೆದಂತೆ ಜಗತ್ತೆಂಬ ಅಂಶವು ಉದ್ಭವಿಸುತ್ತದೆ. ನಮ್ಮ ಭಾರಾತ ಪಾರ್ಚೀನ ಋಷಿಮುನಿಗಳು ಈ ಜಗತ್ತನ್ನು ಒಂದು ಮಾಯಾಜಾಲ ಅಥವಾ ಭಗವಂತ ಲೀಲೆ ಎಂದು ಕರೆದಿದ್ದಾರೆ. ಇದು ಪರಬ್ರಹ್ಮನಿಂದ ಸ್ರುಷ್ಟಿಸಲಾದ ಅವನ ಒಂದು ವಿನೋದಮಯ ಆಟವಾಗಿದೆ. ನೀವು ಪರಮಾತ್ಮನ ಒಂದು ಭಾಗವೇ ಆಗಿರುವಂತಹ ಸತ್ಯವನ್ನು ಅರಿತುಕೊಳ್ಳುವವರೆಗೂ ನಿಮ್ಮ ಅಸ್ತಿತ್ವ ಏನು, ನೀವು ಯಾರು ಎಂಬುದನ್ನು ಅರಿಯಲು ಸಾಧ್ಯವಿಲ್ಲ.

Exit mobile version