Kannada News Buzz

ಹೊಟ್ಟೆಯ ಬೊಜ್ಜು ಕರಗಿಸಲು ಮನೆಯಲ್ಲೇ ಸರಳವಾಗಿ ಮಾಡಬಹುದಾದ ಈ ಪಾನೀಯಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ

ಈಗ ಎಲ್ಲಿ ನೋಡಿದರೂ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ವಿಶೇಷವಾಗಿ ಹೊಟ್ಟೆಯ ಬೊಜ್ಜು ಈ ಸ್ಥಿತಿಯನ್ನು ಅನೇಕರು ಅನುಭವಿಸುತ್ತಿದ್ದು ಅದರಿಂದ ಮುಕ್ತಿಪಡೆಯಲು ಏನೆಲ್ಲಾ ಹರಸಾಹಸ ಪಡುತ್ತಿದ್ದಾರೆ.

ಡಯೆಟ್, ವರ್ಕೌಟ್ ಹೀಗೆ ಹಲವಾರು ಜೀವನಶೈಲಿಯ ಬದಲಾವಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆಂದರೆ ಸುಳ್ಳಲ್ಲ. ಹೌದು, ಹೊಟ್ಟೆಯ ಬೊಜ್ಜು ಅನೇಕ ಬಗೆಯ ಕಾಯಿಲೆಗಳಿಗೆ ಪ್ರವೇಶದ್ವಾರ ಇದ್ದಂತೆ ಎಂಬುದನ್ನು ಅನೇಕ ವೈದ್ಯರು ಹಾಗೂ ತಜ್ಞರು ಅಭಿಪ್ರಾಯಪಡುತ್ತಾರೆ.

ಹಾಗಾಗಿ, ಹೊಟ್ಟೆಯ ಹೆಚ್ಚುವರಿ ಬೊಜ್ಜನ್ನು ಕರಗಿಸುವುದರಲ್ಲೇ ಸುಸ್ಥಿರ ಆರೋಗ್ಯದ ಗುಟ್ಟು ಅಡಗಿದೆ ಎಂಬುದು ಬಹುತೇಕರ ನಂಬಿಕೆಯಾಗಿದೆ ಹಾಗೂ ಈ ಬಗ್ಗೆ ಹಲವು ಸಂಶೋಧನಾವರದಿಗಳೂ ಸಹ ಲಭ್ಯವಿದೆ.

ಆದಾಗ್ಯೂ, ಹೊಟ್ಟೆಯ ಬೊಜ್ಜನ್ನು ವರ್ಕೌಟ್ ಮಾಡಿ ಕೇವಲ ಕ್ಯಾಲೋರಿ ಸುಡುವುದರಿಂದ ಸಮರ್ಪಕವಾಗಿ ಕರಗಿಸಲು ಕಷ್ಟವಾಗಬಹುದು, ಜೊತೆಗೆ ಅದಕ್ಕೆ ಬೆಂಬಲ ನೀಡುವಂತೆ ನಮ್ಮ ಸೇವನೆಗಳೂ ಸಹ ಪೂರಕವಾಗಿರಬೇಕು.

ಕೆಲವು ಮನೆಯಲ್ಲೇ ಸರಳವಾಗಿ ಮಾಡಬಹುದಾದ ಪಾನೀಯಗಳು ನಿಮ್ಮ ಹೊಟ್ಟೆಯ ಬೊಜ್ಜು ಪರಿಣಾಮಕಾರಿಯಾಗಿ ಕರಗಲು ಗರಿಷ್ಠ ಸಹಾಯ ಮಾಡುವುದಲ್ಲದೆ ಅದು ಸುಸ್ಥಿರವಾಗಿ ಇರುವಂತೆಯೂ ನೋಡಿಕೊಳ್ಳಲು ಸಹಯೋಗ ನೀಡುತ್ತವೆ. ನಿಮಗೂ ಸಹ ಈ ರೀತಿಯಾಗಿ ಸರಳವಾಗಿ ಬೊಜ್ಜು ಕರಗಿಸುವ ಬಯಕೆ ಇದ್ದಲ್ಲಿ ಇಲ್ಲಿ ಹೇಳಲಾಗಿರುವ ಈ ಸರಳ ಪಾನೀಯಗಳನ್ನು ನಿಯಮಿತವಾಗಿ ಪ್ರಯತ್ನಿಸಿ ನೋಡಿ.

ಮಜ್ಜಿಗೆ:

ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ಇದು ಸಾಮಾನ್ಯವಾಗಿ ಎಲ್ಲೆಡೆ ಬಳಸುವ ಅದ್ಭುತ ಪಾನೀಯವಾಗಿದೆ. ಇದನ್ನು ಮಾಡುವುದೂ ಸುಲಭ ಹಾಗೂ ಇದು ರುಚಿಕರವಾಗಿಯೂ ಇರುತ್ತದೆ.

ಇದು ಕೇವಲ ಹೊಟ್ಟೆಯ ಬೊಜ್ಜು ಕರಗಿಸಲಷ್ಟೇ ಅಲ್ಲದೆ ಹಲವು ಬಗೆಯ ಪೋಷಕಾಂಶಗಳನ್ನು ದೇಹದಲ್ಲಿ ಹೀರಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಇದು ಪ್ರೋಬಯಾಟಿಕ್ ಪಾನೀಯವಾಗಿರುವುದರಿಂದ ಜೀರ್ಣಕ್ರಿಯೆಯಲ್ಲೂ ಅಪಾರವಾದ ಕೊಡುಗೆ ನೀಡುತ್ತದೆ.

ಜೀರಿಗೆ ನೀರು:

ಮೇಲೊಗರ ಅಥವಾ ಒಗ್ಗರಣೆ ಮಾಡುವಾಗ ಮುಖ್ಯವಾಗಿ ಬಳಸುವ ಪದಾರ್ಥಗಳ ಪೈಕಿ ಜೀರಿಗೆ ಸಹ ಒಂದು. ಒಗ್ಗರಣೆಗೆ ಎಷ್ಟು ರುಚಿಯನ್ನು ನೀಡುತ್ತದೆಯೋ ಈ ಜೀರಿಗೆ ಆರೋಗ್ಯದ ವಿಷಯ ಬಂದಾಗಲೂ ಹಿಂದೆ ಸರಿಯುವುದಿಲ್ಲ. ಇದರಲ್ಲಿರುವ ಥೈಮೋಕ್ವಿನಾನ್ ಎಂಬ ಸಂಯುಕ್ತವು ಅತ್ಯಂತ ಶಕ್ತಿಶಾಲಿ ಘಟಕಾಂಶವಾಗಿದ್ದು ತೂಕ ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ಅಪಾರ ಸಹಾಯ ನೀಡುವ ಒಂದು ಅದ್ಭುತ ಟೂಲ್ ಎನ್ನಬಹುದು.

ಹಾಗಾಗಿ ಇದರ ಬಳಕೆ ನಿಶ್ಚಿತವಾಗಿ ಉತ್ತಮ ಫಲಿತಾಂಶ ನೀಡದೇ ಇರದು. ಇನ್ನು ಜೀರಿಗೆ ನೀರು ಹೇಗಪ್ಪಾ ಮಾಡುವುದು ಎಂಬ ಚಿಂತೆ ಬೇಕಿಲ್ಲ, ಯಾಕಂದ್ರೆ ಇದು ಬಲು ಸುಲಭ. ಒಂದು ಗ್ಲಾಸಿನಲ್ಲಿ ನೀರು ಹಾಕಿ ಮಧ್ಯಮ ಟೀ ಸ್ಪೂನ್ ನಷ್ಟು ಜೀರಿಗೆ ಹಾಕಿ ಕುದಿಸಿದರಾಯಿತು, ನಿಮ್ಮ ಈ ಪಾನೀಯ ರೆಡಿ. ಆದ್ರೆ ಇದು ಬೆಚ್ಚಗಾದ ನಂತರ ಆರಾಮಾಗಿ ಸೇವಿಸಿ.

ಲಿಂಬೆ ನೀರು:

ನಿಂಬು ಪಾನಿ ಎಂದೇ ಜನಪ್ರೀಯವಾಗಿ ಕರೆಯಲ್ಪಡುವ ಈ ಪಾನೀಯ ಮಾಡಲು ಸುಲಭವೂ ಹೌದು ಸೇವಿಸುವಾಗ ರುಚಿಕರವೂ ಹೌದು. ನಿಮ್ಮ ದೇಹವನ್ನು ನಿರ್ವಿಷೀಕರಣ ಮಾಡಬೇಕೆಂದಿದ್ದಲ್ಲಿ ಲಿಂಬೆ ಬಲು ಉಪಯೋಗಕಾರಿ, ಅಲ್ಲದೆ ಇದು ಚಯಾಪಚಯ ದರವನ್ನು ಉತ್ತೇಜಿಸುತ್ತದೆ. ನಿಮಗೆ ಲಿಂಬೆ ನೀರು ಸವಿಯಲು ಸ್ವಲ್ಪ ಹುಳಿ ಅನಿಸಿದರೆ ಅದರಲ್ಲಿ ಸ್ವಲ್ಪ ಜೇನುತುಪ್ಪವನ್ನು ಹಾಕಿ ಸೇವಿಸಿ.

ಅರ್ಧ ಲಿಂಬೆ ರಸ ಹಾಗೂ ಕಾಲು ಜೇನುತುಪ್ಪವನ್ನು ಬಿಸಿನೀರಿನಲ್ಲಿ ಹಾಕಿ ಬೆಚ್ಚಗಾದ ಮೇಲೆ ಸೇವಿಸಿ. ನಿಯಮಿತವಾಗಿ ಇದನ್ನು ಪಾಲಿಸುವುದರಿಂದ ನಿಮ್ಮ ದೇಹದಲ್ಲುಂಟಾಗುವ ವ್ಯತ್ಯಾಸ ನೀವೇ ಗಮನಿಸಬಹುದು.

ಗ್ರೀನ್ ಟೀ/ಚಹಾ

ಮೊದಲಿನಿಂದಲೂ ಗ್ರೀನ್ ಟೀಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಅನೇಕರು ಇದರ ಆರೋಗ್ಯವರ್ಧಕ ಗುಣಗಳಿಗಾಗಿ ಪ್ರಶಂಸಿಸಿದ್ದಾರೆ. ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವ ಈ ಚಹಾ ಕ್ಯಾಲೊರಿಗಳನ್ನು ತೊಡೆದು ಹಾಕಲು ನಿಮಗೆ ಸಾಕಷ್ಟು ಸಹಾಯ ಮಾಡುವುದರಲ್ಲಿ ಸಂಶಯವೇ ಇಲ್ಲ.

ಆದ್ರೆ ನೆನಪಿಡಿ ಗ್ರೀನ್ ಟೀ ತಯಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಟೆಚಿನ್ ಇದ್ದಾಗ ಮಾತ್ರ ಅದರ ಅದ್ಭುತ ಪ್ರಯೋಜನ ನಿಮಗೆ ಸಿಗಬಹುದು. ಕ್ಯಾಟೆಚಿನ್ ಒಂದು ಆಂಟಿಆಕ್ಸಿಡೇಂಟ್ ಆಗಿದ್ದು ಚಯಾಪಚಯ ದರವನ್ನು ವೃದ್ಧಿಸುವುದಲ್ಲದೆ ಫ್ಯಾಟ್ ಅನ್ನು ಕರಗಿಸಲು ನೆರವಾಗುತ್ತದೆ. ನಿಮಗೆ ಒಳ್ಳೆಯ ಗುಣಮಟ್ಟದ ಗ್ರೀನ್ ಟೀ ಲಭಿಸದೆ ಹೋದರೆ ಜಪಾನಿಗರು ಸೇವಿಸುವ ಮಾಚಾದೊಂದಿಗೆ ಪ್ರಯತ್ನಿಸಿ. ಇದ್ರಲ್ಲಿ ಕ್ಯಾಟೆಚಿನ್ ಅಂಶ ಸಮೃದ್ಧವಾಗಿರುತ್ತದೆ.

ದಾಲ್ಚಿನಿ ಟೀ/ಚಹಾ

ಆರೊಮ್ಯಾಟಿಕ್ ಅಂದ್ರೆ ಘಮ ಘಮ ಸುವಾಸನೆಯುಳ್ಳ ದಾಲ್ಚಿನಿಯು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಗ್ರೀನ್ ಟೀಯಂತೆ ದಾಲ್ಚಿನಿ ಚಹಾ ಸಹ ಅದ್ಭುತ ಆರೋಗ್ಯ ಪ್ರಯೋಜನ ಹೊಂದಿದೆ. ಹೆಚ್ಚುವರಿಯಾಗಿ ಶೇಖರಣೆಗೊಂಡ ಕೊಬ್ಬನ್ನು ತೊಡೆದು ಹಾಕಲು ದಾಲ್ಚಿನಿ ಸಖತ್ ಸಹಾಯ ಮಾಡುತ್ತದೆ.

ಮುಸ್ಸಂಜೆಯ ತಂಪಾದ ಗಾಳಿಯಲಿ ಬಿಸಿ ಬಿಸಿಯಾದ ದಾಲ್ಚಿನಿ ಚಹಾಸೇವಿಸುವ ಮೂಲಕ ನಿಮ್ಮ ದೇಹದಲ್ಲಿ ಚಯಾಪಚಯ ದರ ವೇಗಗೊಳ್ಳುವಂತೆ ನಿಮಗೆ ನೀವೇ ಸಹಾಯ ಮಾಡಬಹುದು.

ದಾಲ್ಚಿನಿಯಲ್ಲಿ ಹಲವಾರು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಈ ಮಿಶ್ರಣವು ಡಿಟಾಕ್ಸ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ರುಚಿಕರವಾಗಿಸಲು, ನೀವು ಅದನ್ನು ಸಿಹಿಗೊಳಿಸಲು ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು.

ಈ ಮೇಲೆ ಹೇಳಲಾದ ಎಲ್ಲ ಪಾನೀಯಗಳು ಮನೆಯಲ್ಲೇ ಮಾಡಲು ಬಹಳ ಸರಳವಾಗಿದ್ದು ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಇವುಗಳಲ್ಲಿ ನಿಮ್ಮ ದೇಹಕ್ಕೆ ಯಾವುದಾದರೂ ಒಪ್ಪಬಹುದಾದ ಪಾನೀಯವನ್ನು ನೀವೇ ಪ್ರಯತ್ನಿಸಿ ಆಯ್ಕೆ ಮಾಡಿಕೊಳ್ಳಬೇಕು.

ಏಕೆಂದರೆ ಎಲ್ಲರಿಗೂ ಈ ಎಲ್ಲ ಪಾನೀಯಗಳು ಒಗ್ಗಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ನೀವೇ ಸ್ವತಃ ಪ್ರಯತ್ನಿಸಿ ನೋಡಿ ಹಾಗೂ ಒಂದೊಮ್ಮೆ ನಿಮಗೆ ಸರಿ ಹೊಂದುವ ಪಾನೀಯ ನೀವು ಆಯ್ಕೆ ಮಾಡಿದ್ದಲ್ಲಿ ನಿಯಮಿತವಾಗಿ ಅದನ್ನು ಸೇವಿಸಲು ಪ್ರಯತ್ನಿಸಿ.

ಸಾಮಾನ್ಯವಾಗಿ ಈ ಎಲ್ಲ ಪಾನೀಯಗಳು ಸುರಕ್ಷಿತವಾಗಿದ್ದು ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಆದಾಗ್ಯೂ ನಿಮಗೆ ಯಾವುದಾದರೂ ಅದೇ-ತಡೆ ಉಂಟಾದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಜೊತೆಗೆ ನಿಮ್ಮ ಎಂದಿನಂತಿನ ಚಟುವಟಿಕೆ, ವ್ಯಾಯಾಮ ಮುಂತಾದವನ್ನು ತಪ್ಪಿಸದೇ ಮಾಡುತ್ತೀರಿ. ಹೀಗಿದ್ದಾಗ ಮಾತ್ರ ಹೆಚ್ಚಿನ ಕೊಬ್ಬನ್ನು ಅಥವಾ ಹೊಟ್ಟೆಯ ಬೊಜ್ಜನ್ನು ನೀವು ಕಳೆದುಕೊಂಡು ಮತ್ತೆ ಹುರುಪು ಹಾಗೂ ಉತ್ಸಾಹದಿಂದ ಇರಬಹುದು.

Exit mobile version