Kannada News Buzz

ಸೈಬರ್ ವಂಚನೆ: ಯುಟ್ಯೂಬ್ ವಿಡಿಯೋ ಲೈಕ್ ಮಾಡಿ ಹಣಗಳಿಸಿ ಎಂಬ ಆಫರ್ ಬರುತ್ತಿದೆಯೆ..? ಹುಷಾರಾಗಿರಿ ಇದು ಟ್ರ್ಯಾಪ್ ಕೂಡ ಆಗಿರಬಹುದು..!

ಸೈಬರ್ ವಂಚನೆ

Image by rawpixel.com on Freepik

ಸೈಬರ್ ವಂಚನೆ ಎಂಬುದು ಈಗಿನ ಕಾಲದಲ್ಲಿ ಬಲು ಸಾಮಾನ್ಯವಾದಂತಹ ವಿಷಯವಾಗುತ್ತಿದ್ದು ಆನ್ಲೈನ್ ಬಳಕೆದಾರರು ಈ ರೀತಿಯ ಮೋಸದ ಜಾಲಗಳಲ್ಲಿ ಬೀಳದೆ ಇರಲು ಹೆಚ್ಚಿನ ಜಾಗರೂಕತೆ ವಹಿಸುವುದು ಮುಖ್ಯವಾಗಿದೆ.

ನಿಮಗೆ ಮನೆಯಲ್ಲೇ ಕುಳಿತು ಕೇವಲ ಯುಟ್ಯೂಬ್ ವಿಡಿಯೋ ಲೈಕ್ ಮಾಡಿ ಹಣಗಳಿಸಿ, ಅಥವಾ ಗೂಗಲ್ ರಿವ್ಯೂವ್ ಬರೆದು ಹಣಗಳಿಸಿ ಎಂಬಂತಹ ಆಫರ್ ಗಳು ಬರುತ್ತಿವೆಯೆ? ಹಾಗಾದರೆ, ಸ್ವಲ್ಪ ಹುಷಾರಾಗಿರಿ, ಏಕೆಂದರೆ ಇಂತಹ ಕೆಲಸಗಳ ಮೂಲಕ ನೀವು ಸುಲಭವಾಗಿ ಮೋಸ ಹೋಗಬಹುದು. ಯಾವುದಕ್ಕೂ ಡಬಲ್ ಪರಿಶೀಲನೆ ಮುಖ್ಯ ಎಂಬುದು ಗಮನದಲ್ಲಿರಿಸಿಕೊಳ್ಳಿ.

ಇತ್ತೀಚಿನ ಕೆಲ ಸಮಯದಿಂದ ಆನ್ಲೈನ್ ಮೂಲಕ ಮೋಸದಿಂದ ಕೂಡಿದ ಕೆಲಸಗಳನ್ನು ನೀಡುವ ಹಾವಳಿ ಜಾಸ್ತಿಯಾಗುತ್ತಿದೆ. ಕೇವಲ ಸರಳವಾದ ಆನ್ಲೈನ್ ಕೆಲಸ ಮಾಡಲು ಹೇಳಿ ಉತ್ತಮ ಆದಾಯ ನೀಡಲಾಗುತ್ತಿರುವಂತಹ ಕೆಲಸಗಳ ಬಗ್ಗೆ ಸುದ್ದಿಯಾಗುತ್ತಿದೆ.

ಇದರ ಹಿಂದೆ ಯಾವ ಮೋಸ ಅಡಗಿದೆಯೋ ಗೊತ್ತಿಲ್ಲ, ಏಕೆಂದರೆ ಇಂತಹ ಕೆಲಸಗಳ ಆಮೀಷ ಒಡ್ಡುತ್ತಿದ್ದಂತಹ ವಂಚನಾ ಜಾಲವೊಂದನ್ನು ಹೈದರಾಬಾದ್ ಪೋಲಿಸಿನ ಸೈಬರ್ ವಿಂಗ್ ಪತ್ತೆ ಮಾಡಿರುವುದಾಗಿ ಟೈಮ್ಸ್ ಮಾಧ್ಯಮ ವರದಿ ಮಾಡಿದೆ.

700 ಕೋಟಿ ರೂ. ಮೌಲ್ಯದ ಮೋಸದ ಹೂಡಿಕೆ ಮತ್ತು ಪಾರ್ಟ್ ಟೈಮ್ ಕೆಲಸಗಳನ್ನು ನೀಡುತ್ತಿದ್ದ ಜಾಲವೊಂದನ್ನು ಕಳೆದ ಶನಿವಾರದಂದು ಹೈದರಾಬಾದ್ ಸೈಬರ್ ವಿಂಗ್ ಪೋಲಿಸರು ಪತ್ತೆಹಚ್ಚಿದ್ದಾರೆಂದು ತಿಳಿದುಬಂದಿದೆ.

ಲೆಬನಾನ್ ಮೂಲದ ಹೆಜ್ಬೊಲ್ಲಾ ಆತಂಕಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಅರೋಪಿಸಲಾದ ಚೀನಾ ಮೂಲದ ಕೆಲ ನಿರ್ವಾಹಕರಿಂದ ಈ ಮೋಸದ ಜಾಲ ನಡೆಸಲಾಗುತ್ತಿತ್ತೆಂಬುದರ ಬಗ್ಗೆಯೂ ವರದಿಯಾಗಿದೆ.

ಈ ಟೆರರ್ ಫಂಡಿಂಗ್ ಕುರಿತಾದ ಸುಳಿವನ್ನು ಕ್ರಿಪ್ಟೋ ಏಜನ್ಸಿಯೊಂದು ನೀಡಿದೆ ಎನ್ನಲಾಗಿದ್ದು ಆತಂಕಿ ಸಂಘಟನೆಯ ವಾಲೆಟ್ ನಲ್ಲಿ ಅನುಮಾನಾಸ್ಪದವಾಗಿ ಆದ ಬಿಟ್ಕಾಯಿನ್ ಗಳ ಕ್ರೆಡಿಟ್ ಇದಕ್ಕೆ ಕಾರಣವಾಗಿರುವುದಾಗಿ ತಿಳಿದುಬಂದಿದೆ.

ಟೈಮ್ಸ್ ಮಾಧ್ಯಮ ವರದಿ ಮಾಡಿರುವಂತೆ, ಈ ವಂಚನಾ ಜಾಲದ ಮೂಲಕ ಕಳೆದ ಒಂದು ವರ್ಷದಿಂದ ಭಾರತದಲ್ಲಿ ಸಾವಿರಾರು ಜನರನ್ನು ಮೋಸಗೊಳಿಸಲಾಗಿದೆ. ಈ ಜಾಲವು ಪಾರ್ಟ್ ಟೈಮ್ ಕೆಲಸಗಳ ಆಮೀಷ ಒಡ್ಡುತ್ತಿದ್ದವು ಎಂದು ತಿಳಿದುಬಂದಿದ್ದು ಅವರು ಒದಗಿಸುತ್ತಿದ್ದ ಕೆಲಸಗಳು ತೀರ ಸರಳವಾಗಿದ್ದವು ಎನ್ನಲಾಗಿದೆ, ಅಂದರೆ ಯುಟ್ಯೂಬ್ ವಿಡಿಯೋ ಲೈಕ್ ಮಾಡುವುದು, ಗೂಗಲ್ ವಿಮರ್ಶೆಗಳನ್ನು ಬರೆಯುವುದು ಇತ್ಯಾದಿ ಕೆಲಸಗಳನ್ನು ಇವು ಒಳಗೊಂಡಿದ್ದವು ಎನ್ನಲಾಗಿದೆ.

ಈ ವಂಚನಾ ಜಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ದೇಶಾದ್ಯಂತ ಒಂಭತ್ತು ಜನರನ್ನು ಬಂಧಿಸಲಾಗಿರುವುದಾಗಿ ಹೈದರಾಬಾದ್ ಪೋಲಿಸ್ ಸೈಬರ್ ವಿಂಗ್ ಮಾಹಿತಿ ನೀಡಿದೆ. ಇವರಲ್ಲಿ ನಾಲ್ಕು ಜನರು ಹೈದರಾಬಾದ್ ಮೂಲದವರಾಗಿದ್ದರೆ, ಮೂರು ಜನ ಅಹ್ಮದಾಬಾದ್ ಮೂಲದವರಾಗಿದ್ದು ಇಬ್ಬರು ಮುಂಬೈ ಮೂಲದವರಾಗಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಹೈದರಾಬಾದ್ ಪೋಲಿಸ್ ಆಯುಕ್ತರಾದ ಸಿವಿ ಆನಂದ್ ಅವರು ಮಾತನಾಡುತ್ತ, ಇಂತಹ ವಂಚನೆಗೆ ಒಳಗಾದವರಲ್ಲಿ ಶಿವಕುಮಾರ್ ಎಂಬ ವ್ಯಕ್ತಿಯು ಈಗಾಗಲೇ 28 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.

ಶಿವಕುಮಾರ್ ಅವರ ಪ್ರಕರಣವನ್ನು ಭೇದಿಸುತ್ತಾ ಇನ್ನಷ್ಟು ಆಳಕ್ಕೆ ಹೋದಾಗ ಬ್ಲೇಡ್ ಕಂಪನಿಗಳ ೪೮ ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು ಅವುಗಳ ಒಟ್ಟಾರೆ ಮೌಲ್ಯವು 584 ಕೋಟಿ ರೂಪಾಯಿಗಳಾಗಿತ್ತೆಂದು ತಿಳಿದು ಬಂದಿರುವುದಾಗಿ ಆನಂದ್ ಮಾಹಿತಿ ನೀಡಿದ್ದಾರೆ.

ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದಾಗ ರೂ. 128 ಕೋಟಿ ಮೌಲ್ಯದ ಮತ್ತಷ್ಟು ಬ್ಯಾಂಕ್ ಖಾತೆಗಳು ಪತ್ತೆಯಾಗಿರುವುದಾಗಿ ಆಯುಕ್ತರಾದ ಆನಂದ್ ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲ ಖಾತೆಗಳನ್ನು ಗಲ್ಫ್ ಮೂಲದ ಗುಂಪೊಂದು ನಿರ್ವಹಿಸುತ್ತಿತ್ತು ಎಂಬುದು ತಿಳಿದು ಬಂದಿದ್ದು ಆ ಗುಂಪು ಚೀನಾ ಮೂಲದ ಜಾಲವೊಂದಕ್ಕೆ ಸಂಪರ್ಕ ಹೊಂದಿತ್ತೆಂದು ತಿಳಿದುಬಂದಿದೆ.

ಈ ಗುಂಪು ಭಾರತದಲ್ಲಿರುವ ಖಾತೆಗಳನ್ನು ನಿರ್ವಹಿಸುತ್ತಿತ್ತು ಹಾಗೂ ಹಣವನ್ನು ಕ್ರಿಪ್ಟೋ ವ್ಯಾಲೆಟ್ ನಲ್ಲಿ ವರ್ಗಾಯಿಸುತ್ತಿತ್ತು, ಅಲ್ಲದೆ ಅಹ್ಮದಾಬಾದ್ ಮೂಲದ ಇಬ್ಬರು ಬಂಧಿತರು ಕ್ರಿಪ್ಟೋ ವ್ಯಾಲೆಟ್ ಗಳನ್ನು ಹೊಂದಿದ್ದರು ಮತ್ತು ಹಣವನ್ನು ನೇರವಾಗಿ ವರ್ಗಾಯಿಸುತ್ತಿದ್ದರು ಎಂಬ ಮಾಹಿತಿಯನ್ನು ಆಯಿಕ್ತ ಆನಂದ್ ಅವರು ಹಂಚಿಕೊಂಡಿದ್ದಾರೆ.

ಹೈದರಾಬಾದ್ ಪೋಲಿಸ್ ಹಾಗೂ ಗೃಹ ಸಚಿವಾಲಯದ ಸೈಬರ್ ಕ್ರೈಮ್ ಸಹಯೋಗ ಕೇಂದ್ರದ ಗಮನಕ್ಕೆ ಬಂದಿರುವಂತೆ ಹಣದ ಒಂದು ಭಾಗವನ್ನು ಹೆಜ್ಬೊಲ್ಲಾ ಆತಂಕಿ ಸಂಘಟನೆಯು ನಿರ್ವಹಿಸುತ್ತಿದೆ ಎನ್ನಲಾದ ಕ್ರಿಪ್ಟೋ ಖಾತೆಗೆ ಹಾಕಲಾಗುತ್ತಿತ್ತು.

ಅಹ್ಮದಾಬಾದ್ ಮೂಲದ ಬಂಧಿತನೊಬ್ಬ ಚೀನಾ ಮೂಲದ ನಿರ್ವಾಹಕರೊಂದಿಗೆ ನೇರವಾದ ಹಾಟ್ ಲೈನ್ ಸಂಪರ್ಕ ಹೊಂದಿದ್ದ ಮತ್ತು ಅವರಿಗೆ ಭಾರತೀಯ ಖಾತೆಗಳ ಮಾಹಿತಿ, ಒಟಿಪಿ ಮುಂತಾದವುಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಆಯುಕ್ತರು ತಿಳಿಸಿದ್ದಾರೆ.

Exit mobile version