Kannada News Buzz

ನವರಾತ್ರಿಯ ಎರಡನೇ ದಿನದ ದೇವಿ ಬ್ರಹ್ಮಚಾರಿಣಿ ಯಾರು? ಹಿನ್ನೆಲೆ ಏನು? ಹೆಸರು ಹೇಗೆ ಬಂತು?

Brahmacharini Devi

ನವರಾತ್ರಿ ಉತ್ಸವದಲ್ಲಿ ಎರಡನೇ ಪವಿತ್ರ ದಿನವು ಮಾತೆ ಪಾರ್ವತಿಯ ಶಾಂತ ಹಾಗೂ ಅಷ್ಟೇ ಪ್ರಭಾವಿ ಶಕ್ತಿಯನ್ನು ಹೊಂದಿರುವ ಬ್ರಾಹ್ಮಚಾರಿಣಿ ದೇವಿಗೆ ಸಮರ್ಪಿತವಾಗಿದೆ.

ಹಾಗಾದರೆ ಈ ಬ್ರಹ್ಮಚಾರಿಣಿ ದೇವಿಯ ಹಿನ್ನೆಲೆ ಏನು? ಅವಳ ಮಹತ್ವವೇನು? ಈ ಹೆಸರು ಬರಲು ಕಾರಣವಾದರೂ ಏನು ಎಂಬಂತಹ ಕೆಲ ಕುತೂಹಲಕರ ವಿಷಯ ತಿಳಿಯಬೇಕೆಂದು ಬಹುತೇಕರಿಗೆ ಅನ್ನಿಸಬಹುದು. ನಿಮಗೂ ಸಹ ಈ ಬಗ್ಗೆ ತಿಳಿಯಬೇಕೆಂದಿದ್ದರೆ ಈ ಕಥೆಯನ್ನು ಪೂರ್ಣ ಓದಿ.

ಪಾರ್ವತಿ ದೇವಿಯು ತನ್ನ ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಪುತ್ರಿ ದೇವಿ ಸತಿಯಾಗಿದ್ದಳು ಎಂಬುದು ಬಹುತೇಕರಿಗೆ ತಿಳಿದಿರಬಹುದು. ಆ ಸಂದರ್ಭದಲ್ಲಿ ಒಮ್ಮೆ ದಕ್ಷ ರಾಜ ಸತಿಯ ಪತಿಯಾಗಿದ್ದ ಪರಮೇಶ್ವರನಿಗೆ ಮಹತ್ವದ ಯಜ್ಞವೊಂದಕ್ಕೆ ಆಮಂತ್ರಿಸದೇ ಘೋರ ಅಪಚಾರ ಮಾಡುತ್ತಾನೆ.

ಇದನ್ನು ಸಹಿಸದ ಸತಿ ದೇವಿಯು ಸ್ವಯಂ ಆಗ್ನಿ ಆಹುತಿ ಮಾಡಿಕೊಂಡ ಹಾಗು ನಂತರ ಪರಮೇಶ್ವರ ಉಗ್ರ ರೂಪನಾಗಿ ಶಿಕ್ಷೆ ವಿಧಿಸಿದ ಕಥೆ ಎಲ್ಲರಿಗೂ ತಿಳಿದೇ ಇದೆ. ಇದಾದ ನಂತರ ಪರಮೇಶ್ವರನು ತೀವ್ರವಾದ ಧ್ಯಾನದಲ್ಲಿ ಮುಳುಗುತ್ತಾನೆ.

ಇನ್ನೊಂದೆಡೆ ಭಯಂಕರ ರಕ್ಕಸ ತಾರಕಾಸುರ ತಪ ಮಾಡಿ ಶಿವನ ಮಗನಿಂದ ತನಗೆ ಸಾವು ಬರಬೇಕೆಂಬ ವಾರ ಪಡೆದು ದೇವತೆಗಳನ್ನೆಲ್ಲ ಸೋಲಿಸಿ ಹಿಂಸಿಸಲು ಪ್ರಾರಂಭಿಸುತ್ತಾನೆ, ಏಕೆಂದರೆ ಅವನಿಗೆ ಈಗ ಶಿವನಿಗೆ ಮಗನಾಗಲು ಸಾಧ್ಯವಿಲ್ಲ ಹಾಗೂ ಈ ಮೂಲಕ ತಾನು ಅಮರನಾಗಬಹುದೆಂಬ ಲೆಕ್ಕಾಚಾರ.

ಇನ್ನು ಸತಿ ದೇವಿಯೇ ತನ್ನ ಮರುಜನ್ಮದಲ್ಲಿ ಪಾರ್ವತಿ ದೇವಿಯಾಗಿರುತ್ತಾಳೆ… ಹಾಗು ಪರಮೇಶ್ವರನನನ್ನೇ ಒಲಿಸಿ ಕೊಳ್ಳಬೇಕೆಂಬ ಗುರಿ ಅವಳಿಗಿರುತ್ತದೆ. ಹಾಗಾಗಿ ನಾರದ ಮುನಿಗಳ ಉಪದೇಶದಂತೆ ಅವಳು ಶಿವನನ್ನು ಕುರಿತು ತಪಸ್ಸನಾಚರಿಸಲು ಪ್ರಾರಂಭಿಸುತ್ತಾಳೆ.

ಸಾವಿರ ವರ್ಷಗಳ ಕಾಲ ಅವಳು ಕೇವಲ ಎಲೆ-ಹಣ್ಣುಗಳನ್ನು ಮಾತ್ರವೇ ಸೇವಿಸುತ್ತಾ ತಪ್ಪಸ್ಸು ಮಾಡುತ್ತಾಳೆ. ತದನಂತರ ಮುಂದಿನ ಸಾವಿರ ವರ್ಷಗಳ ಕಾಲ ಕೇವಲ ಬಿಲ್ವ ಪತ್ರೆಗಳನ್ನಷ್ಟೇ ಸೇವಿಸುತ್ತಾ ತಪಸ್ಸು ಮಾಡುತ್ತಾಳೆ. ಇತ್ತ ಶಿವನಿಗೆ ಪಾರ್ವತಿ ದೇವಿಯು ಕಠಿಣ ತಪಸ್ಸು ಮಾಡುತ್ತಿರುವುದು ಗೊತ್ತಿರುತ್ತದೆ.

ಹಾಗಾಗಿ ಅವನು ವೇಷ ಬದಲಿಸಿಕೊಂಡು ಪಾರ್ವತಿ ದೇವಿಯನ್ನು ತನ್ನ ತಪ ಮಾಡುವ ಶಪತ್ತನ್ನು ಬಿಟ್ಟು ಬಿಡುವಂತೆ ಮನವೊಲಿಸಲು ಹಲವು ಬಾರಿ ಪ್ರಯತ್ನಿಸುತ್ತಾನಾದರೂ ಪಾರ್ವತೀ ದೇವಿ ಸ್ವಲ್ಪವೂ ವಿಚಲಿತವಾಗದೆ ತನ್ನ ಲಕ್ಷ್ಯವನ್ನೆಲ್ಲ ಶಿವನನ್ನು ಕುರಿತು ತಪಸ್ಸು ಮಾಡುವುದರಲ್ಲೇ ವ್ಯಯಿಸುತ್ತಾಳೆ.

ಅಂತಿಮವಾಗಿ ಅವಳು ಬಿಲ್ವಪತ್ರೆ ಸೇವಿಸುವುದನ್ನೂ ನಿಲ್ಲಿಸಿ ಇನ್ನಷ್ಟು ಘೋರ ಉಪವಾಸ ತಪಸ್ಸು ಮಾಡಲಾರಂಭಿಸುತ್ತಾಳೆ. ಇದೇ ಸಂದರ್ಭದಲ್ಲಿ ಪಾರ್ವತಿ ದೇವಿಗೆ ಅಪರ್ಣಾ ಎಂಬ ಹೆಸರು ಬಂದಿದ್ದು. ಪರ್ಣ ಎಂದರೆ ಎಲೆ ಎಂದಾಗುತ್ತದೆ ಹಾಗೂ ಬಿಲ್ವಪತ್ರದ ಎಳೆಗಳ ಸೇವನೆಯನ್ನೂ ಸಹ ಅವಳು ನಿಲ್ಲಿಸಿದ್ದರಿಂದ ಪಾರ್ವತಿ ದೇವಿಗೆ ಅಪರ್ಣ ಎಂಬ ಹೆಸರು ಬಂದಿದೆ.

ಅಂತಿಮವಾಗಿ ಶಿವನು ಪ್ರಸನ್ನನಾಗಿ ಪಾರ್ವತಿ ದೇವಿಯ ಆಸೆ ಈಡೇರಿಸು ತ್ತಾನೆ. ಹಾಗೂ ಅವರಿಬ್ಬರಿಗೆ ಜನಿಸಿದ ಮಗ ಕಾರ್ತಿಕೇಯನಿಂದ ತಾರಕಾಸುರನ ವಧೆಯಾಗುತ್ತದೆ.

ಒಟ್ಟಿನಲ್ಲಿ ಪಾರ್ವತಿ ದೇವಿಯು ತನ್ನ ನಿಷ್ಠೆಯ, ಹಾಗೂ ಎಂದಿಗೂ ತನ್ನ ಏಕಾಗ್ರತೆಯಿಂದ ವಿಚಲಿತಳಾಗದೆ ತಪಸ್ಸಿನ ಮೂಲಕ ಗುರಿ ಸಾಧಿಸಿದ್ದರಿಂದ ಅವಳನ್ನು ಬ್ರಹ್ಮಚಾರಿಣಿಯಾಗಿಯೂ ಪೂಜಿಸಲಾಗುತ್ತದೆ.

ಏಕೇಂದರೆ, ಈ ವೇದ, ತಪಸ್ಸು, ನಿಷ್ಠೆ ಇವೆಲ್ಲವೂ ಬ್ರಹ್ಮನ ಸ್ವರೂಪವೇ ಆಗಿರುವುದರಿಂದ ಅವಳ ಅವಿರತ ಹಾಗೂ ನಿರಂತರ ತಪಸ್ಸಿನ ಸಾಧನೆಯಿಂದಾಗಿಯೇ ಪಾರ್ವತಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ನವರಾತ್ರಿಯ ಎರಡನೇ ದಿನದಂದು ಪೂಜಿಸಲಾಗುತ್ತದೆ.

ಬ್ರಹ್ಮಚಾರಿಣಿಯ ರೂಪದಲ್ಲಿ ಪಾರ್ವತಿ ದೇವಿಯು ಶುಭ್ರವಾದ ಶ್ವೇತ ವಸ್ತ್ರದಲ್ಲಿದ್ದು ಒಂದು ಕೈಯಲ್ಲಿ ಕಮಂಡಲ ಹಾಗೂ ಇನ್ನೊಂದು ಕೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ.

ಬ್ರಹ್ಮಚಾರಿಣಿಯ ರೂಪದಲ್ಲಿ ದುರ್ಗೆಯನ್ನು ಪೂಜಿಸುವುದರಿಂದ ಏಕಾಗ್ರತೆ, ಕಷ್ಟಗಳನ್ನು ಎದುರಿಸಿ ಲಕ್ಷ್ಯವನ್ನೇ ಸಾಧಿಸುವಲ್ಲಿ ದೃಢಚಿತ್ತ ಹಾಗೂ ಯಶಸ್ಸು ದೊರೆಯುತ್ತದೆ ಎನ್ನಲಾಗುತ್ತದೆ. ಬಿಳಿ ಬಣ್ಣದ ಸುಗಂಧ ಸೂಸುವ ಹೂವುಗಳಿಂದ ಸಾಮಾನ್ಯವಾಗಿ ಬ್ರಹ್ಮಚಾರಿಣಿ ದೇವಿಯನ್ನು ಅಲಂಕರಿಸಲಾಗುತ್ತದೆ ಹಾಗೂ ಪೂಜಿಸಲಾಗುತ್ತದೆ.

ಆ ಬ್ರಹ್ಮಚಾರಿಣಿ ದೇವಿಯು ನಿಮ್ಮೆಲ್ಲರಿಗೂ ದೃಢ ಚಿತ್ತ ಹಾಗೂ ಆ ಮೂಲಕ ನಿಮ್ಮೆಲ್ಲರ ಕನಸು ಈಡೇರಿಸುವಂತಹ ವರದಾನ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Exit mobile version