Kannada News Buzz

ಒಂದೇ ಕೈ ಇದ್ದ ಹುಡುಗ ಕರಾಟೆ ಚಾಂಪಿಯನ್ ಆದ ಕಥೆ

ಚಿತ್ರಕೃಪೆ: Pexels

ಡಾ. ಗುರುರಾಜ್ ಕರ್ಜಗಿ ಅವರು ಒಂದೊಮ್ಮೆ ಕರಾಟೆ ಬಗ್ಗೆ ಹೇಳಿದ ಕಥೆಯಿಂದ ಇದು ಪ್ರೇರಿತವಾಗಿದೆ. ಈ ಕಥೆ ನೀಡುವ ಸಂದೇಶ ನಿಜಕ್ಕೂ ಮನಸ್ಸಿಗೆ ನಾಟುವ ಹಾಗಿದೆ. ನಿಮಗೂ ಸಹ ಪ್ರೇರಣೆ ಸಿಗಲಿ ಎಂಬ ಆಸೆ ನಮ್ಮದು.

ಹಿಂದೆ ಜಪಾನಿನಲ್ಲಿ ಒಂದು ಸುಂದರ ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದಲ್ಲಿ ಗಂಡ-ಹೆಂಡತಿ ಹಾಗೂ ಅವರಿಗೆ ಒಬ್ಬ ಮುದ್ದಾದ ಮಗನಿದ್ದ. ಮಗನಿಗೆ ಚಿಕ್ಕಂದಿನಿಂದಲೂ ಕರಾಟೆ ಪಂದ್ಯಗಳೆಂದರೇ ಎಲ್ಲಿಲ್ಲದ ಪ್ರೀತಿ. ಸದಾ ಟಿವಿಯಲ್ಲಿ ಕರಾಟೆ ಪಂದ್ಯಗಳನ್ನು ತುಂಬಾ ಆಸಕ್ತಿ ಹಾಗೂ ಶೃದ್ಧೆಯಿಂದ ನೋಡುತ್ತಿದ್ದ. ಅಪ್ಪನಿಗೆ ತನ್ನ ಮಗ ಕರಾಟೆ ಬಗ್ಗೆ ಹೊಂದಿರುವ ಆಸಕ್ತಿ ತಿಳಿದು ಅವನಿಗೆ ಹತ್ತಿರದ ಒಂದು ಕರಾಟೆ ಕಲಿಸುವ ಶಾಲೆಗೆ ಸೇರಿಸಿದ.

ಮಗನಿಗೆ ಎಲ್ಲಿಲ್ಲದ ಸಂತಸ ಉಂಟಾಯಿತು. ನಿತ್ಯ ತನ್ನ ಓದು ಬರಹ ಮುಗಿಸಿಕೊಂಡು ಕರಾಟೆ ಶಾಲೆಗೆ ಹೋಗಿ ತರಬೇತಿ ಪಡೆಯುತ್ತಿದ್ದ. ಅವನಿಗೆ ತಮ್ಮ ಊರಿನಲ್ಲಿ ವಾರ್ಷಿಕವಾಗಿ ನಡೆಯುವ ಕರಾಟೆ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಪಡೆಯಬೇಕೆಂಬ ಅಗಾಧ ಇಚ್ಛೆ ಹಾಗೂ ಕನಸಿತ್ತು. ಆ ಹುಡುಗನಿಗೆ ಕರಾಟೆ ಕಲಿಸಿಕೊಡುವ ಗುರು ಸಹ ಹುಡುಗನ ಉತ್ಕಟ ಆಸಕ್ತಿ ಹಾಗೂ ಅವನು ಅತಿ ಶೃದ್ಧೆಯಿಂದ ಕಲಿಯುವ ಪರಿಯನ್ನು ನೋಡಿ ಪುಳಕಿತನಾಗಿದ್ದ ಹಾಗೂ ತನ್ನ ಎಲ್ಲ ಪ್ರತಿಭೆಯನ್ನು ಅವನಿಗೆ ಕಲಿಸಿಕೊಟ್ಟು ಅವನ ಕನಸನ್ನು ಈಡೇರಿಸಲು ಪ್ರಯತ್ನಿಸುವುದಾಗಿ ನಿರ್ಧರಿಸಿದ.

ಹೀಗೆ ಹಲವು ದಿನಗಳು ಉರುಳಿದವು. ಒಮ್ಮೆ ಹುಡುಗ ಮತ್ತು ಅವನ ಪೋಷಕರು ಕಾರಿನಲ್ಲಿ ತೆರಳುತ್ತಿರುವಾಗ ದುರದೃಷ್ಟವಶಾತ್ ಅಪಘಾತ ಉಂಟಾಯಿತು. ಸದ್ಯ ಯಾರ ಪ್ರಾಣಕ್ಕೂ ಹಾನಿಯಾಗದೆ ಇದ್ದರೂ ಪಾಪ..ಹುಡುಗ ಮಾತ್ರ ತನ್ನ ಒಂದು ಕೈಯನ್ನು ಆ ಅಪಘಾತದಲ್ಲಿ ಕಳೆದುಕೊಳ್ಳಬೇಕಾಯಿತು.

ಈಗ ಮನೆಯಲ್ಲಿ ಒಂದು ಕೈಕಳೆದುಕೊಂಡ ಹುಡುಗ ಅತಿ ದುಖಿತನಾಗಿದ್ದಾನೆ. ಏಕೆಂದರೆ ಅವನು ಕರಾಟೆ ಕಲಿತು ಚಾಂಪಿಯನ್ ಆಗಬೇಕೆಂಬ ಗುರಿ, ಕನಸು ನುಚ್ಚು ನೂರಾಗಿತ್ತು. ಕೆಲ ದಿನಗಳ ನಂತರ ಕರಾಟೆ ಕಲಿಸುವ ಗುರು ಒಮ್ಮೆ ಹುಡುಗನ ಮನೆಗೆ ಬಂದು ಹುಡುಗನನ್ನು ಕುರಿತು ಯಾಕೆ ಕಲಿಯಲು ತರಗತಿಗೆ ಬರುತ್ತಿಲ್ಲ ಎಂದು ವಿಚಾರಿಸಿದ.

ಹುಡುಗನ ಕಣ್ಣುಗಳಿಂದ ಒಂದೇ ಸಮನೆ ನೀರು ಸುರಿಯಿತು…..ತನ್ನ ಪರಿಸ್ಥಿತಿಯನ್ನು ತೋರಿಸುತ್ತ, ತನಗಿನ್ನೇಲ್ಲಿ ಕರಾಟೆ…ಎಲ್ಲವೂ ನಾಶವಾಯಿತು… ಎಂದು ಅಳತೊಡಗಿದ. ಆಗ ಗುರು ಹೇಳಿದ, ಮಗನೇ ನೀನು ಚಾಂಪಿಯನ್ ಆಗಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಬೇಕೆಂದಿದ್ದರೆ ಕೇವಲ ಎರಡು ಕೆಲಸ ಮಾಡು…..ಒಂದು ನನಗೆ ಏನನ್ನು ಪ್ರಶ್ನಿಸಬೇಡ….ಎರಡನೆಯದ್ದು ನನ್ನನ್ನು ನಂಬು…ಇಷ್ಟು ಹೇಳಿ ನಾಳೆಯಿಂದ ತರಗತಿಗೆ ಬಾ ಎಂದು ಹೇಳಿ ಹೋದ.

ಈಗ ಹುಡುಗನಿಗೆ ಮೊದಲೇ ಕರಾಟೆ ಎಂದರೆ ಪಂಚ ಪ್ರಾಣ….ಅದರಲ್ಲೂ ಸ್ವತಃ ಗುರುವೇ ನನ್ನ ಮೇಲೆ ನಂಬಿಕೆಯಿರಿಸಿರುವಾಗ ನಾ ಯಾಕೆ ಹಿಂದುಳಿಯಬೇಕು ಎಂದು ನಿರ್ಧರಿಸಿ ಮರುದಿನ ಮೊದಲಿನಂತೆ ಕರಾಟೆ ಶಾಲೆಗೆ ತೆರಳಿದ.

ಅಲ್ಲಿ ಬಂದಿದ್ದ ಇತರೆ ಹುಡುಗರಿಗೆ ತರಬೇತಿ ನೀಡಿದ ನಂತರ ಗುರು ಆ ಹುಡುಗನ ಬಳಿ ಬಂದು, ನೀನು ತುಂಬಾ ಒಳ್ಳೆಯ ಕೆಲಸ ಮಾಡಿದೆ….ನಿನಗಾಗಿ ನಾನು ಪ್ರತ್ಯೇಕವಾಗಿ ತರಬೇತಿ ನೀಡುವೆ. ನಾನು ಕೇವಲ ಒಂದೇ ಒಂದು ತಂತ್ರವನ್ನು ನಿನಗೆ ಕಲಿಸಿಕೊಡುವೆ….ಈ ತಂತ್ರ ಅಸಾಧಾರಣ ತಂತ್ರವಾಗಿದೆ….ಇದನ್ನು ಪ್ರತಿಯೊಬ್ಬರೂ ಕಲಿಯುವುದು ಅಷ್ಟು ಸುಲಭವಲ್ಲ….ನೀನು ಮಾತ್ರ ನಾನು ಹೇಳಿ ಕೊಡುವ ಹಾಗೆಯೇ ಮಾಡು….ನೆನಪಿರಲಿ ನಾನು ಹೇಳಿರುವಂತೆ ನನಗೆ ಏನನ್ನೂ ಪ್ರಶ್ನಿಸಬೇಡ….ಹಾಗೂ ನನ್ನ ಮೇಲೆ ವಿಶ್ವಾಸವಿಡು ಅಷ್ಟೆ ಎಂದ.

ಅದರಂತೆ ನಿತ್ಯ, ಗುರು ತನ್ನ ಪ್ರಿಯ ಶಿಷ್ಯನಿಗೆ ಅದೊಂದು ಮಾಸ್ಟರ್ ತಂತ್ರ ಅಥವಾ ಪೇಚವನ್ನು ಕಲಿಸಿ ಅದನ್ನು ನಿತ್ಯ ಅಭ್ಯಸಿಸಲು ಹೇಳಿದ….ಹುಡುಗ ಬಲು ನಿಷ್ಠೆಯಿಂದ ಆ ಕರಾಟೆಯ ಪೇಚನ್ನು ನಿತ್ಯ ಅಭ್ಯಸಿಸಲು ಆರಂಭಿಸಿದ. ಹೀಗೆ ದಿನಗಳು, ಉರುಳಿದವು….ತಿಂಗಳುಗಳು ಕಳೆದವು…ನಂತರ ವರ್ಷವೇ ಆಯಿತು. ಈಗ ಹುಡುಗ ತನ್ನ ಪೇಚಿನ ಮೇಲೆ ಅತ್ಯಂತ ಹಿಡಿತ ಸಾಧಿಸಿದ್ದ. ಈಗ ಗುರು ಹುಡುಗನನ್ನು ಕುರಿತು…ಇಗೋ ನೀನು ಈಗ ಎಲ್ಲ ರೀತಿಯಿಂದ ಸಿದ್ಧನಾಗಿರುವೆ….ಸ್ಪರ್ಧೆಯಲ್ಲಿ ನಿನೀಗ ಭಾಗವಹಿಸಬಹುದು ಎಂದ.

ಎಂದಿನಂತೆ ವಾರ್ಷಿಕವಾಗಿ ಬರುವ ಆ ಊರಿನ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆ ಬಂದಿತು. ಒಂದು ಕೈ ಇಲ್ಲದ ಈ ಹುಡುಗನೂ ಸಹ ಅದರಲ್ಲಿ ಸ್ಪರ್ಧಾಳುವಾಗಿ ಹೆಸರು ಬರೆಸಿದ. ಈಗ ಎಲ್ಲೆಡೆ ಹುಡುಗನದ್ದೇ ಸುದ್ದಿ….ಒಂದು ಕೈ ಇಲ್ಲದ ಹುಡುಗ ಕರಾಟೆ ಸ್ಪರ್ಧೆಯಲ್ಲಿ ಬರುತ್ತಿದ್ದಾನೆಂದು….

ಅಂತು ಸ್ಪರ್ಧೆಯ ಮೊದಲ ಹಂತ ಪ್ರಾರಂಭವಾಯಿತು. ಹುಡುಗನ ಮುಂದೆ ಪ್ರತಿಸ್ಪರ್ಧಿ ಬಂದು ಅವನನ್ನು ನೋಡಿ ಕುಹುಕು ನಗೆ ಬೀರಿದ…ಏಕೆಂದರೆ ಒಂದು ಕೈ ಇಲ್ಲದ ಈ ಹುಡುಗನನ್ನು ನಿರಾಯಾಸವಾಗಿ ಸೋಲಿಸಬಲ್ಲೆನೆಂಬ ಇರಾದೆ ಅವನದ್ದಾಗಿತ್ತು. ಅದರಂತೆ ಅಲ್ಲಿ ನೆರೆದಿದ್ದವರೂ ಸಹ ಹುಡುಗನ ಅವಸ್ಥೆ ನೋಡಿ ನಗಲು ಆರಂಭಿಸಿದರು.

ಪಂದ್ಯ ಪ್ರಾರಂಭವಾಯಿತು….ರೆಫರಿ ಸಿಳ್ಳೆ ಹೊಡೆಯುತ್ತಿದ್ದ ಹಾಗೇ ಆ ಹುಡುಗ ತಾನು ಅತ್ಯದ್ಭುತವಾಗಿ ಕಲಿತಿದ್ದ ಆ ಕರಾಟೆಯ ಪೇಚನ್ನು ಬೆಳಕಿನ ವೇಗದಂತೆ ರಭಸವಾಗಿ ಹಾಕಿದಾಗ ಪ್ರತಿಸ್ಪರ್ಧಿ ಕೆಳಗೆ ಬಿದ್ದು ಮಣ್ಣು ಮುಕ್ಕಿದ್ದ….ಏಳಲು ಸಾಧ್ಯವೇ ಆಗಲಿಲ್ಲ….ಒಂದು ಕೈ ಇಲ್ಲದ ಹುಡುಗ ಆ ಪಂದ್ಯ ಗೆದ್ದುಬಿಟ್ಟಿದ್ದ….ಹುಡುಗನಿಗೆ ತನ್ನನ್ನು ನಂಬಲು ಸಾಧ್ಯವೇ ಆಗಲಿಲ್ಲ…ಸಂತಸದ ಕಣ್ಣೀರು ಮಾತ್ರ ಸುರಿಯುತ್ತಿತ್ತು. ಅಲ್ಲಿದ್ದವರೆಲ್ಲರೂ ಮೂಕವಿಸ್ಮಿತರಾಗಿದ್ದರು.

ಈಗ ಹುಡುಗ ಎರಡನೇ ಹಂತಕ್ಕೆ ಬಂದಿದ್ದ. ಅಲ್ಲಿಯೂ ಇನ್ನೊಬ್ಬ ಕಠಿಣ ಪ್ರತಿಸ್ಪರ್ಧಿಯಿದ್ದ. ಅವನ ಜೊತೆ ಹುಡುಗ ಕಾದಾಡಬೇಕಿತ್ತು. ಹುಡುಗನಿಗೆ ಯಾವ ಭಯವೂ ಆಗಲಿಲ್ಲ….ಅವನ ಆತ್ಮ ವಿಶ್ವಾಸ ಹೆಚ್ಚಿತ್ತು. ಪಂದ್ಯ ಪ್ರಾರಂಭವಯಿತು….ಮುಂಚಿನ ರೀತಿಯಲ್ಲಿ ರೆಫರಿ ಸಿಳ್ಳೆ ಊದುತ್ತಿದ್ದಂತೆ ವೇಗದಲ್ಲಿ ಹುಡುಗ ಬಂದು ತನ್ನ ಪ್ರತಿಸ್ಪರ್ಧಿಯ ಮೇಲೆ ಎರಗುತ್ತ ತನ್ನ ಸಿಗ್ನೇಚರ್ ಕರಾಟೆ ಪೇಚನ್ನು ಹಾಕಿದ….ಫಲಿತಾಂಶ ಅದೇ ಆಗಿತ್ತು…ಈ ಪಂದ್ಯವನ್ನು ಸಹ ಹುಡುಗ ಗೆದ್ದಿದ್ದ.

ನಂತರ ಅಂತಿಮ ಹಣಾ ಹಣಿ ಬಂತು. ಅಲ್ಲಿಯವರೆಗೆ ಊರಿನಲ್ಲೆಲ್ಲ ಹುಡುಗನ ಬಗ್ಗೆ ಸುದ್ದಿಯಾಗಿತ್ತು. ಹೀಗಾಗಿ ಬಹು ಜನರು ಆಸಕ್ತಿಯಿಂದ ಕೊನೆ ಪಂದ್ಯ ವೀಕ್ಷಿಸಲು ಬಂದಿದ್ದರು. ಈಗ ಕೊನೆಯ ಸ್ಪರ್ಧಿ ಬಲು ಕಠಿಣವಾಗಿದ್ದ. ಅವನು ಎಂದೂ ಸೋತಿಲ್ಲ ಎಂಬ ಮಾತು ಬೇರೆ ಇತ್ತು.

ಆದರೆ ಆ ಕಠಿಣ ಪ್ರತಿಸ್ಪರ್ಧಿ ಹುಡುಗನ ಬಳಿ ಬಂದು….ನೀನು ನಿಜಕ್ಕೂ ಚೆನ್ನಾಗಿ ಸ್ಪರ್ಧೆ ಮಾಡಿರುವೆ….ಆದರೆ ನಿನಗೆ ನನ್ನನ್ನು ಸೋಲಿಸಲು ಸಾಧ್ಯವಿಲ್ಲ….ಒಂದು ಕೆಲಸ ಮಾಡು….ಈ ಪಂದ್ಯದಿಂದ ಹಿಂದೆ ಸರಿದು ಬಿಡು… ನಿನ್ನ ಮತ್ತೊಂದು ಕೈಯಾದರೂ ಉಳಿಯಬಹುದು ಎಂಬ ಎಚ್ಚರಿಕೆ ನೀಡಿದ.

ಹುಡುಗನಿಗೆ ಸ್ವಲ್ಪ ಆತಂಕ ಎದುರಾಯಿತು…..ಕೂಡಲೇ ಅವನು ತನ್ನ ಗುರುವಿನ ಬಳಿ ಬಂದು ನಡೆದ ವಿಷಯ ಹೇಳಿದ….ಗುರು ಸಿಟ್ಟಾಗಿ ಹುಡುಗನ ಕೆನ್ನೆಗೆ ಒಂದು ಬಿಟ್ಟರು…ನಂತರ ಹೇಳಿದರು..ನಾನು ಮೊದಲೇ ಹೇಳಿದ್ದೆ ನನ್ನನ್ನು ಏನೂ ಪ್ರಶ್ನಿಸಬೇಡ…ಹಾಗೂ ನನ್ನ ಮೇಲೆ ನಂಬಿಕೆಯಿಡು ಅಂತ….ಯಾಕೆ ಏನಾಯಿತು…ನಿನ್ನಿಂದ ಅದನ್ನು ಪಾಲಿಸಲಾಗುತ್ತಿಲ್ಲವೇ ಎಂದು ಕೇಳಿದ.

ಗುರು ಇಷ್ಟು ಧೈರ್ಯದ ನುಡಿ ಹೇಳಿದ್ದೇ ತಡ ಹುಡುಗನಿಗೆ ಎಲ್ಲಿಲ್ಲದ ಆವೇಗ ಹಾಗೂ ವಿಶ್ವಾಸ ಹೆಚ್ಚಿತು. ಅವನು ನೇರವಾಗಿ ಅಂತಿಮ ಪ್ರತಿಸ್ಪರ್ಧಿ ಬಳಿ ಬಂದು ಹೋರಾಡಲು ಸಿದ್ಧನಾಗು ಎಂದಷ್ಟೇ ಹೇಳಿದ. ಕೊನೆಯ ಪಂದ್ಯ ಪ್ರಾರಂಭವಾಯಿತು.

ಮುಂಚಿನಂತೆಯೇ ಆ ಹುಡುಗ ಹಿಂದೆಂದಿಗಿಂತಲೂ ಅತಿ ವಿಶ್ವಾಸದಿಂದ ಇನ್ನಷ್ಟು ರಭಸವಾಗಿ ತನ್ನ ಅದ್ಭುತವಾದ ಕರಾಟೆ ಪೇಚನ್ನು ಆ ಕಠಿಣ ಪ್ರತಿಸ್ಪರ್ಧಿಯ ಮೇಲೆ ಹಾಕಿಯೇ ಬಿಟ್ಟ. ಒಂದು ಕ್ಷಣ ಆ ಮೈದಾನದಲ್ಲಿ ನಿರವ ಮೌನ ಆವರಿಸಿತು….ಎಲ್ಲರೂ ದಿಗ್ಭ್ರಾಂತರಂತೆ ನೋಡುತ್ತಿದ್ದರು. ಆ ಕಠಿಣ ಪ್ರತಿಸ್ಪರ್ಧಿಯೂ ಸಹ ಪಂದ್ಯ ಮೊದಲ ಬಾರಿಗೆ ಸೋತೇ ಬಿಟ್ಟಿದ್ದ…ಅದು ಸಹ ಒಂದು ಕೈ ಇಲ್ಲದ ಹುಡುಗನ ಜೊತೆ.

ಹುಡುಗನಿಗೆ, ಎಲ್ಲಿಲ್ಲದ ಸಂತಸ, ದುಖಗಳು ಉಮ್ಮಳಿಸಿ ಬಂದವು. ಕೊನೆಗೂ ಅವನು ತನ್ನ ಕನಸಿನಂತೆ ಚಾಂಪಿಯನ್ ಆಗಿಯೇ ಬಿಟ್ಟಿದ್ದ. ಹುಡುಗ ನೇರವಾಗಿ ಗುರುವಿನ ಬಳಿ ಬಂದು ನಮಸ್ಕರಿಸಿದ. ಆದರೆ ಆಸಕ್ತಿ ತಡೆಯಲಾಗದೇ ಗುರುವನ್ನು ಕೇಳಿದ….ಗುರುಗಳೇ ನಾನು ಪ್ರತಿ ಬಾರಿ ನನ್ನ ಪೇಚನ್ನು ಹಾಕಿದಾಗ ಯಾರೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಕೆಳಗೆ ಬಿದ್ದದ್ದು ಏಕೆ…ನನಗೆ ಇದು ಇನ್ನೂ ಅರ್ಥವಾಗುತ್ತಿಲ್ಲ ಎಂದ.

ಗುರು ಮುಗುಳ್ನಗುತ್ತ ಹೇಳಿದರು…ಶಿಷ್ಯನೇ ನಾನು ಕಲಿಸಿಕೊಟ್ಟಿರುವ ಕರಾಟೆ ಪೇಚಿನ ಅನುಸಾರ ನಿನ್ನ ಪೇಚಿನಿಂದ ಪ್ರತಿಸ್ಪರ್ಧಿ ಬಿಡಿಸಿಕೊಳ್ಳಬೇಕೆಂದಿದ್ದರೆ ಅವರು ನಿನ್ನ ಎಡಗೈಯನ್ನು ತಿರುವುದು ಅವಶ್ಯಕವಾಗಿತ್ತು…ಆದರೆ ನಿನ್ನ ಎಡಗೈ ಎಂಬುದೇ ಇಲ್ಲ….ಹಾಗಾಗಿ ಅವರಿಗೆ ಏನೂ ಮಾಡಲಾಗಲಿಲ್ಲ ಎಂದ.

ನೋಡಿದ್ರಲ್ಲಾ….ಸ್ನೇಹಿತರೆ ಗುರು ಎಂಬುವನು ತನ್ನ ಶಿಷ್ಯನಲ್ಲಿರುವ ಕೊರತೆಯನ್ನು ಸಹ ಅದು ಅವನಿಗೆ ಅವಕಾಶವಾಗುವಂತೆ ಪರಿವರ್ತಿಸಬಲ್ಲ ಸಾಮರ್ಥ್ಯ ಉಳ್ಳವನು.

ಇದು ನೀಡುವ ಎರಡು ಮಹತ್ತರ ಸಂದೇಶ ಎಂದರೆ ನಿಜವಾದ ಗುರು ತನ್ನ ಶಿಷ್ಯನನ್ನು ಎಂದಿಗೂ ಕೈಬಿಡುವುದಿಲ್ಲ….ಎರಡು ನಿಜವಾದ ಗುರು ಹೇಳಿದ್ದನ್ನು ಎಂದೂ ಅನುಮಾನಿಸದೆ ನಂಬಿಕೆಯಿಂದ ನಡೆದರೆ ಯಶ ಸಿಗುವುದು ಖಚಿತ.

Exit mobile version