Kannada News Buzz

ಇರಾನ್ ವಿರುದ್ಧ ಭಾರತದ ಖಾರವಾದ ಪ್ರತಿಕ್ರಿಯೆ “ಹೇಳಿಕೆ ನೀಡುವವರು ಅವರವರ ಸ್ವಂತ ದಾಖಲೆಗಳನ್ನೊಮ್ಮೆ ನೋಡಿಕೊಳ್ಳಲಿ”

Ali Khamenei

ಇತ್ತೀಚಿಗಷ್ಟೇ ಮುಸ್ಲಿಮರು ಗಾಜಾ, ಮ್ಯಾನ್ಮಾರ್ ಸೇರಿದಂತೆ ಭಾರತದಲ್ಲೂ ಬಳಲುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ ಇರಾನ್ ವಿರುದ್ಧ ಭಾರತ ಖಾರವಾಗಿ ಪ್ರತಿಕ್ರಯಿಸಿದೆ. ಸೋಮವಾರದಂದು ಭಾರತದ ವಿದೇಶಾಂಗ ಮಂತ್ರಾಲಯ ಇರಾನ್ ಸುಪ್ರೀಮ್ ನಾಯಕ ನೀಡಿದ್ದ ಹೇಳಿಯನ್ನು ಪ್ರಬಲವಾಗಿ ಖಂಡಿಸಿದ್ದಲ್ಲದೆ ಭಾರತದ ವಿರುದ್ಧ ಹೇಳಿಕೆ ನೀಡುವವರು “ಅವರವರ ದಾಖಲೆಗಳನ್ನೊಮ್ಮೆ ನೋಡಿಕೊಳ್ಳಿ” ಖಾರವಾಗಿ ಪ್ರತ್ಯುತ್ತರಿಸಿದೆ.

ಇದಕ್ಕೂ ಮುಂಚೆ ಇರಾನ್ ದೇಶದ ಸರ್ವೋಚ್ಛ ನಾಯಕ ಅಲಿ ಖಾಮೇನಿ ಜಾಗತಿಕವಾಗಿ ಮುಸ್ಲಿಮ್ ದೇಶಗಳ ಒಕ್ಕಟ್ಟಾಗಿ ಬರುವ ನಿಟ್ಟಿನಲ್ಲಿ ಉತ್ತೇಜಿಸುವಂತೆ ಮುಸ್ಲಿಮರು ಬಳಲುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಆ ನಾಯಕ ಭಾರತ ಸೇರಿದಂತೆ ಗಾಜಾ ಹಾಗೂ ಮ್ಯಾನ್ಮಾರಿನಲ್ಲಿ ಮುಸ್ಲಿಮರು ಬಳಲುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.

ಪ್ರವಾದಿ ಮೊಹ್ಮದ್ದರ ಜನ್ಮದಿನದ ಅಂಗವಾಗಿ ನೀಡಿದ್ದ ತಮ್ಮ ಸಂದೇಶದಲ್ಲಿ ಅಲಿ ತಮ್ಮ ಹೇಳಿಕೆಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಭಾರತದಲ್ಲಿರುವ ಮೈನಾರಿಟಿ ಮುಸ್ಲಿಮರನ್ನೂ ಪರಿಗಣನೆಗೆ ತೆಗೆದುಕೊಂಡು ಬಳಲುತ್ತಿರುವ ಬಗ್ಗೆ ಹೇಳಿದ್ದರಾದರೂ ನಿರ್ದಿಷ್ಟ ಕಾರಣ ನೀಡಿರಲಿಲ್ಲ.

ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅನೇಕ ಭಾರತೀಯರು ತಮ್ಮ ಅಸಮಾಧಾನವನ್ನು, ಆಕ್ರೋಶವನ್ನು ಎಕ್ಸ್ ನಲ್ಲಿ ಹೊರಹಾಕಿದ್ದರು. ಅಷ್ಟಕ್ಕೂ ಗಾಜಾದಲ್ಲಿ ಆಗುತ್ತಿರುವುದಕ್ಕೂ ಭಾರತದಲ್ಲಿರುವ ಮುಸ್ಲಿಮರ ಸ್ಥಿತಿಗತಿಗೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಿಬಂದಿದ್ದವು.

ಇದಾದ ಕೇವಲ ಒಂದೇ ದಿನದಲ್ಲಿ ಭಾರತವು ಇರಾನ್ ನಿರ್ದಿಷ್ಟವಾಗಿ ಭಾರತಕ್ಕೆ ಸಂಬಂಧಿಸಿದಂತೆ ನೀಡಿರುವ ಅಪ್ರಬುದ್ಧ ಹೇಳಿಕೆ ಖಂಡಿಸಿ ಅದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತ, “ಇರನಿನ ಸರ್ವೋಚ್ಛ ನಾಯಕರು ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದು ತಪ್ಪು ಮಾಹಿತಿಯಾಗಿದ್ದು ಸ್ವೀಕಾರ್ಹಾರವಲ್ಲ. ದೇಶಗಳು ಅಲ್ಪಸಂಖ್ಯಾತರ ಬಗ್ಗೆ ಹೇಳಿಕೆಗಳನ್ನು ನೀಡುವ ಮೊದಲು ತಮ್ಮಲ್ಲಿರುವ ದಾಖಲೆಗಳನ್ನೊಮ್ಮೆ ನೋಡಿಕೊಳ್ಳಲಿ” ಎಂದು ನೇರವಾಗಿ ಇರಾನ್ ಹೆಸರು ಹೇಳದೆಯೇ ಅದಕ್ಕೆ ಪ್ರತ್ಯುತ್ತರ ನೀಡಿದೆ.

ಇರಾನ್ ನಾಯಕ ವಾಸ್ತವದಲ್ಲಿ ಎಕ್ಸ್ ವೇದಿಕೆಯಲ್ಲಿ ಈ ರೀತಿಯಾಗಿ ಹೇಳಿಕೆ ನೀಡಿದ್ದರು, “ಇಸ್ಲಾಮಿನ ಶತ್ರುಗಳು ಇಸ್ಲಾಮಿಕ್ ಉಮ್ಮಾ ಎಂಬ ನಮ್ಮ ಗುರುತಿನ ಬಗ್ಗೆ ಯಾವಾಗಲೂ ನಮ್ಮನ್ನು ಅಸಡ್ಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. #ಮ್ಯಾನ್ಮಾರ್, #ಗಾಜಾ, #ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸ್ಲಿಂ ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಾವು ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲಾಗುವುದಿಲ್ಲ.” ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಇರಾನ್ ಸದ್ಯ ಇಸ್ರೇಲ್ ನೊಂದಿಗೆ ಕದನದ ಜಟಾಪಟಿಯಲ್ಲಿದೆ. ಈ ಸಂದರ್ಭದಲ್ಲಿ ಇರಾನ್ ಮಿಕ್ಕ ಇಸ್ಲಾಮಿಕ್ ದೇಶಗಳು ತಮಗೆ ಬಂಬಲ ಕೊಡಬೇಕೆಂಬ ನಿರೀಕ್ಷೆಯಲ್ಲಿರುವಂತೆ ತೋರುತ್ತಿದೆ. ಇನ್ನು ಭಾರತವು ಸಹ ಮೊದಲಿನ ಭಾರತವಲ್ಲ ಎಂಬುದನ್ನು ಸಾರಿ ಹೇಳುವಂತೆ ತೋರುತ್ತಿದ್ದು ಇದೆ ಮೊದಲ ಬಾರಿಗೆ ದೇಶವೊಂದರ ಹೇಳಿಕೆಯ ವಿರುದ್ಧ ಖಾರವಾಗಿ ಹಾಗು ತ್ವರಿತವಾಗಿ ಪ್ರತಿಕ್ರಿಯೆ ನೀಡಿದೆ.

Exit mobile version