Kannada News Buzz

ಅಕ್ಟೋಬರ್ 17ರ ತಡರಾತ್ರಿಯಲ್ಲಿ ತೀರ್ಥರೂಪಿಣಿ ಕಾವೇರಿ ಉದ್ಭವ – ಕಣ್ತುಂಬಿಕೊಂಡ ಭಕ್ತ ಸಮೂಹ

Talakaveri

ಸಾಂದರ್ಭಿಕ ಚಿತ್ರ ಹಾಗೂ ಕೃಪೆ: Pranchiyettan (ವಿಕಿಪೇಡಿಯಾ)

ಪ್ರತಿ ಬಾರಿ ತಲಕಾವೇರಿಯಲ್ಲಿ ಕರ್ನಾಟಕದ ಜೀವನದಿ ಎಂದೇ ಕರೆಯಲಾಗುವ ಕಾವೇರಿ ಯು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ನಿರ್ದಿಷ್ಟ ಸಮಯದಂದು ಉದ್ಭವವಾಗುವ ಮೂಲಕ ತನ್ನ ಅದ್ಭುತ ದರ್ಶನ ನೀಡುವುದಲ್ಲದೆ ನೆರೆದ ಭಕ್ತ ಸಮೂಹವನ್ನು ಪುಳಕಿತಗೊಳಿಸುತ್ತಾಳೆ.

ಎಂದಿನಂತೆ ಈ ಬಾರಿಯೂ ಸಹ ಪವಿತ್ರ ತಲಕಾವೇರಿಯಲ್ಲಿ ಅಕ್ಟೋಬರ್ 17ರ ತಡರಾತ್ರಿಯ 1:27 ಗಂಟೆಯ ತುಲಾ ಸಂಕ್ರಮಣ ದಿನದ ಕರ್ಕಾಟಕ ಲಗ್ನ ಮುಹೂರ್ತದಲ್ಲಿ ಕಾವೇರಿ ತೀರ್ಥ ಸ್ವರೂಪಿಣಿಯಾಗಿ ಉದ್ಭವಿಸಿದ್ದಾಳೆ. ಈ ಸಂಭ್ರಮದ ಘಳಿಗೆಗೆ ಸಾಕ್ಷಿಯಾದ ನೂರಾರು ಜನರು ಕಾವೇರಿಯ ದರುಶನ ಪಡೆದು ಪುನಿತರಾದ ಅನುಭೂತಿಯನ್ನು ಪಡೆದುಕೊಂಡಿದ್ದಾರೆ.

ಇದಕ್ಕೂ ಮುಂಚೆ ಉದ್ಭವವಾಗುವ ಸಮಯದಲ್ಲಿ ಅಲ್ಲಿ ನೆರೆದಿದ್ದ ಭಕ್ತ ಸಮೂಹವು ಕಾವೇರಿ ದೇವಿಯನ್ನು ಕುರಿತು ಜಯಘೋಷವನ್ನು ಕೂಗುತ್ತಿದ್ದರು. “ಉಕ್ಕಿ ಬಾ ಕಾವೇರಮ್ಮ” ಎಂಬ ವಾಕ್ಯ ಎಲ್ಲೆಡೆ ಕೇಳುತ್ತಿತ್ತು, ಒಟ್ಟಾರೆ ಜನಸಮೂಹ ಈ ರೋಮಾಂಚಕ ಕ್ಷಣಕ್ಕೆ ಸಾಕ್ಷಿಯಾದರು.

ಭಾವನಾತ್ಮಕವಾಗಿ ಈ ವಿದ್ಯಮಾನವು ಈ ಭಾಗದ ಜನರಿಗೆ ಒಂದು ರೀತಿಯ ಅಭಯ ಹಸ್ತ ನೀಡುತ್ತಾಳೆ ಎನ್ನಬಹುದು. ಜೀವನದಿಯು ತಾನು ಸದಾ ನಿಮ್ಮೊಂದಿಗೆ ಇರುವೆ ಎಂಬ ಸಂಕೇತವನ್ನು ಈ ಮೂಲಕ ನೀಡುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.

ಮುಂಚೆಯೇ ಹೇಳಿದಂತೆ ನಿಗದಿತ ಸಮಯ ಅಂದರೆ ಅಕ್ಟೋಬರ್ 17ರ ತಡರಾತ್ರಿ 1:27ಕ್ಕೆ ಕಾವೇರಿ ನದಿಯು ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕುವಂತೆ ಒಮ್ಮೆ ಮೇಲೆ ಬಂದು ಕೆಳಹೋದಳು. ತದನಂತರ ಆ ಕುಂಡಿಕೆಯ ಸುತ್ತ ನೆರೆದಿದ್ದ ಅಚಕರು ಬಿಂದಿಗೆಗಳ ಮೂಲಕ ಕಾವೇರಿ ನೀರನ್ನು ಸಂಗ್ರಹಿಸಿ ಸುತ್ತಲೂ ನೆರೆದಿದ್ದ ಭಕ್ತ ಸಮೂಹದ ಮೇಲೆ ಪ್ರೋಕ್ಷಣೆ ಮಾಡಿದರು.

ಈ ಹಿಂದೆಯೇ ತಲಕಾವೇರಿ ಹಾಗೂ ಭಾಗಮಂಡಲದಲ್ಲಿರುವ ಭಾಗಂಡೇಶ್ವರ ದೇವಾಲಯದ ಪ್ರಾಧಿಕಾರವು ಈ ವರುಷದಲ್ಲಿ ಇದೇ ದಿನ ಹಾಗೂ ಇದೇ ಸಮಯದಲ್ಲಿ ಕಾವೇರಿಯ ಉದ್ಭವ ಬ್ರಹ್ಮಕುಂಡಿಕೆಯಲ್ಲಿ ಆಗಲಿದೆ ಎಂದು ಹೇಳಿತ್ತು. ಅದರಂತೆ ನಿನ್ನೆ ರಾತ್ರಿಯಿಂದಲೇ ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಸಹಸ್ರಾರು ಭಕ್ತರು ನಿಗದಿತ ಪ್ರದೇಶದಲ್ಲಿ ಕಾವೇರಿ ಉದ್ಭವಿಸುವ ದರುಶನ ಪಡೆಯಲು ನೆರೆದಿದ್ದರು.

ಕಾವೇರಿ ಸಂಕ್ರಮಣ

ಸಾಮಾನ್ಯವಾಗಿ ಪ್ರತಿ ವರ್ಷ ಜರುಗುವ ಈ ವಿದ್ಯಮಾನವನ್ನು ಕಾವೇರಿ ಸಂಕ್ರಮಣ ಎಂದೇ ಸಂಭ್ರಮಿಸಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಇದು ಹಿಂದು ಪಂಚಾಂಗದನ್ವಯ ತುಲಾ ಮಾಸದ ಮೊದಲ ದಿನ (ಸಾಮಾನ್ಯವಾಗಿ ಅಕ್ಟೋಬರ್ ಮಧ್ಯದ ಸಮಯ) ದಂದು ಇದನ್ನು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಆಚರಿಸಲಾಗುತ್ತದೆ. ತಲಕಾವೇರಿಯ ಬೆಟ್ಟದ ತುದಿಯೊಂದರಲ್ಲಿ ನೆಲೆಸಿರುವ ಒಂದು ನಿರ್ದಿಷ್ಟ ಸ್ಥಳದಿಂದ ಕಾವೇರಿ ನದಿ ಉಗಮಿಸುತ್ತಾಳೆ ಎಂದು ಹೇಳಲಾಗುತ್ತದೆ.

ಈ ಒಟ್ಟಾರೆ ವಿದ್ಯಮಾನವು ಯಾವುದೇ ಜಾತ್ರೆಯ ಉತ್ಸವದಂತೆಯೇ ಇರುತ್ತದೆ. ಕರ್ನಾಟಕ ವಿವಿಧ ಮೂಲೆಗಳಿಂದ ಜನರು ಈ ಸಮಯದಲ್ಲಿ ತಲಕಾವೇರಿಗೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಎಂಬುದು ಈ ಸಮಯದಲ್ಲಿ ಹೆಚ್ಚಿರುತ್ತದೆ ಎಂದರೂ ತಪ್ಪಾಗಲಾರದು.

ಹೇಗೆ ತಲುಪಬಹುದು?

ಕೊಡಗು ಜಿಲ್ಲೆಯಲ್ಲಿರುವ ತಲಕಾವೇರಿಯು ರಾಜಧಾನಿ ಬೆಂಗಳೂರಿನಿಂದ 312 ಕಿ.ಮೀ ದೂರದಲ್ಲಿದ್ದರೆ ಕೊಡಗಿನ ಮಡಿಕೇರಿ ಪಟ್ಟಣದಿಂದ 47 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ತಲಕಾವೇರಿಗೆ ತಲುಪಲು ಮೊದಲು ಮಡಿಕೇರಿಗೆ ತಲುಪಬೇಕು ಹಾಗೂ ಬೆಂಗಳೂರಿನಿಂದ ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗಿ ಬಾಸುಗಳೆರಡೂ ಲಭ್ಯವಿದೆ.

ಅಲ್ಲದೆ, ಮಡಿಕೇರಿಯಿಂದಲೂ ಸಹ ಬಾಡಿಗೆ ಕಾರು ಇಲ್ಲವೇ ಸ್ಥಳೀಯ ಬಸ್ಸುಗಳ ಮೂಲಕ ತಲಕಾವೇರಿಗೆ ತಲುಪಬಹುದಾಗಿದೆ. ಇನ್ನೂ ರೈಲಿನಿಂದ ಪ್ರಯಾಣಿಸುವವರಿದ್ದಾರೆ ಹತ್ತಿರದ ರೈಲು ನಿಲ್ದಾಣಗಳೆಂದರೆ ಮೈಸೂರು, ಮಂಗಳೂರು ನಗರಗಳನ್ನು ತಲುಪಿ ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ಮಡಿಕೇರಿಯನ್ನು ತಲುಪಬಹುದು. ಈ ನಗರಗಳಿಂದ ಮಡಿಕೇರಿ ಸುಮಾರು 140-150 ಕಿ.ಮೀ ಗಳಷ್ಟು ದೂರದಲ್ಲಿದೆ.

Exit mobile version